ಮುಂಬೈ ಕನ್ನಡಕ್ಕೆ ಕ್ರೈಸ್ತರ ಕೊಡುಗೆ

Update: 2021-10-16 05:29 GMT

ಭಾಗ-2

ಜೂನ್ 2, 1937ರಂದು ಮುಂಬೈಯಲ್ಲಿ ಜನಿಸಿ, ಬಾಲ್ಯದ ಬದುಕನ್ನು ಉಡುಪಿಯ ಪಾಂಗಾಳದಲ್ಲಿ ಅನುಭವಿಸಿ, ಹೈಸ್ಕೂಲ್ ಶಿಕ್ಷಣ ಅಲ್ಲಿಯೇ ಮುಗಿಸಿ ಜೀವನ ನಿರ್ವಹಣೆಗಾಗಿ ಮುಂಬೈ ನಗರಿಗೆ ಮರಳಿ ಬಂದು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ‘ಕವಿರಾಜ್’ ಎಂದು ಗುರುತಿಸಲ್ಪಡುವ ಜಾನ್ ಬ್ಯಾಪಿಸ್ಟ್ ಸಿಕ್ವೇರಾ ಅವರದ್ದೊಂದು ಯಶಸ್ಸಿನ ಗಾಥೆ. ತಮ್ಮ ಎಳೆ ವಯಸ್ಸಿನಲ್ಲೇ ‘ಸಲ್ವೊಣೆಂತ್ ಜೀಕ್’ (1957) ಎಂಬ ಕಾದಂಬರಿ ಹಾಗೂ ‘ದೋತ್ ಕಿಲ್ಲೆ’ (ವರದಕ್ಷಿಣೆ ಎಷ್ಟು?) ಎಂಬ ವಿಚಾರ ಪೂರಿತ ಲೇಖನಗಳ ಸಂಗ್ರಹದೊಂದಿಗೆ ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ದೃಢವಾದ ಹೆಜ್ಜೆ ಊರಿದವರು ಜೆ.ಬಿ. ಸಿಕ್ವೇರಾ. ‘‘ಕೊಂಕಣಿ ಭಾಷೆ, ಕೊಂಕಣಿ ಜನಜೀವನ, ಕೊಂಕಣಿ ಸಾಹಿತ್ಯಕ್ಕಾಗಿ ಅವರ ತಳಮಳ, ಅದನ್ನವರು ಪ್ರೀತಿಸುವ ರೀತಿ, ಅದಕ್ಕಾಗಿ ಅವರು ದುಡಿದ ಪರಿಯನ್ನು ಕಂಡಾಗ ಅವರಿಗೆ ವಂದಿಸದಿರಲು ಸಾಧ್ಯವೇ ಇಲ್ಲ’’ ಎಂದು ಹಿರಿಯ ಲೇಖಕ ಶಿಮುಂಜೆ ಪರಾರಿಯವರು ‘ಸತ್ಯೊ-ವಿತ್ಯೊ’ ಎಂಬ ಕನ್ನಡ ಹಾಗೂ ದೇವನಾಗರಿ ಲಿಪಿಯಲ್ಲಿ ಕ್ಯಾಥರೀನ್ ರೊಡ್ರಿಗಸ್ ತುಳುವಿನಲ್ಲಿ ಅನುವಾದಿಸಿದ್ದ ಕೃತಿಗೆ ಮುನ್ನುಡಿಯಲ್ಲಿ ಉಲ್ಲೇಖಿಸಿದ್ದ ಈ ಸಾಲುಗಳು ಜೆ.ಬಿ. ಸಿಕ್ವೇರಾ ಅವರಿಗೆ ಕೊಂಕಣಿ ಭಾಷೆ ಹಾಗೂ ಸಾಹಿತ್ಯದ ಮೇಲಿರುವ ಒಲವನ್ನು ಗುರುತಿಸಬಹುದು. ಅವರ ‘ಕಾಳ್ಜಾಚೆಂ ಉಮಾಳೆ’ (ಒಡಲ ಕುದಿ) ಎಂಬ ಕವನ ಸಂಕಲನವು ಡಾ. ಟಿ.ಎಂ.ಎ. ಪೈ ಪ್ರತಿಷ್ಠಾನದ ವರ್ಷದ ಶ್ರೇಷ್ಠ ಕೃತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಮಾರು 8 ಕವಿತಾ ಸಂಕಲನಗಳನ್ನು ಕೊಂಕಣಿ ಸಾಹಿತ್ಯ ಪ್ರೇಮಿಗಳಿಗೆ ನೀಡಿರುವ ಜೆ.ಬಿ. ಸಿಕ್ವೇರಾ ಅವರ ‘ಅಶಿಂ ಆಯ್ಲಿಂಗ್ ಲ್ಹಾರಾಂ’ (ಹೀಗೆ ಬಂತು ತೆರೆಗಳು) ಕವನ ಸಂಕಲನಕ್ಕೆ 1998ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿದೆ. ಅವರ ಎಲ್ಲ ಕೃತಿಗಳು ದೇವನಾಗರಿ ಹಾಗೂ ಕನ್ನಡ ಲಿಪಿಯಲ್ಲಿ ಅವರದ್ದೇ ಆದ ‘ಕೊಂಕಣಿ ಪ್ರಕಾಶನಾಲಯ’ದಿಂದ ಪ್ರಕಟಗೊಂಡಿವೆ.

1964ರಲ್ಲಿ ‘ಬಾಂಬೆ ಕೆನರಾ ಕೆಥೊಲಿಕ್ ಡೈರೆಕ್ಟರಿ’ ಎಂಬ ಸಮಾಜ ಬಾಂಧವರ ಮಹತ್ವದ ಮಾಹಿತಿ ಕೋಶ ಹೊರತಂದಿದ್ದ ಜೆ.ಬಿ. ಸಿಕ್ವೇರಾ 1968ರಲ್ಲಿ ‘ವಾವ್ರಾಡ್ಯಾಂಚೊ ತಾಳೊ’ ಎಂಬ ಪತ್ರಿಕೆ ಸಂಪಾದಿಸಿ ಪ್ರಕಟಿಸಿದ್ದರು. 1994ರಲ್ಲಿ ಮೈಸೂರು ದಸರಾ ಕವಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಿಕ್ವೇರಾ ಅವರು ಕರ್ನಾಟಕ, ಗೋವಾ, ಮಹಾರಾಷ್ಟ್ರಗಳಲ್ಲಿ ಜರುಗುತ್ತಿದ್ದ ಪ್ರತಿಷ್ಠಿತ ಗೋಷ್ಠಿಗಳಲ್ಲಿ ತಮ್ಮ ಕವಿತೆಗಳನ್ನು ಸಾದರಪಡಿಸಿದ್ದರು. ಮುಂಬೈ, ಗೋವಾ, ಮಂಗಳೂರು ಆಕಾಶವಾಣಿಗಳಲ್ಲಿ ಇವರ ಕವಿತೆಗಳು ಬಹಳ ಬೇಡಿಕೆಯಲ್ಲಿದ್ದವು. ಸುಮಾರು 15 ಸಾವಿರ (2 ಸಂಪುಟಗಳಲ್ಲಿ) ಆಲಂಕಾರಿಕ ಪದಗಳ ಸಾಲುಗಳನ್ನೊಳಗೊಂಡ ‘ಮುಖಾಂವರಾಂ/ಮೊವ್ಳಾ’ ಎಂಬ ಕೃತಿಯು ಕೊಂಕಣಿ ಸಾಹಿತ್ಯದಲ್ಲಿ ಮೈಲುಗಲ್ಲಾಗಿ ನಿಂತಿವೆ. ‘ಮಾಂಡ್ ಸೋಬಾಣ್ (ರಿ.)’ ಇದರ ಗೌರವ ಅಧ್ಯಕ್ಷರೂ, ‘ಕೊಂಕಣಿ ಭಾಷಾ ಮಂಡಳ್, ಮುಂಬೈ (ರಿ.) ಇದರ ಉಪಾಧ್ಯಕ್ಷರೂ ಆಗಿದ್ದ ಜೆ.ಬಿ. ಸಿಕ್ವೇರಾ ಕೊಂಕಣಿ ಸಾಹಿತ್ಯದಲ್ಲಿ ಅದರಲ್ಲೂ ಕವಿಯಾಗಿ ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟವರು.

1967ರಲ್ಲಿ ‘ಝಾನ್ಸಿರಾಣಿ ಲಕ್ಷ್ಮೀಬಾಯಿ’ ಕನ್ನಡ ನಾಟಕ(ನಿರ್ದೇಶನ -ಶ್ರೀನಿವಾಸ್ ರಾವ್)ದಲ್ಲಿ ಲಕ್ಷ್ಮೀಬಾಯಿ ಪಾತ್ರಕ್ಕೆ ಜೀವ ತುಂಬಿದ್ದ ಪುಟ್ಟ ಬಾಲಕ, ಮರುವರ್ಷ ‘ಪರಬೆರೆ ಬರವು’ ಎಂಬ ತುಳು ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ಸೊಗಸಾಗಿ ಅಭಿನಯಿಸಿ ಶಾಬಾಷ್‌ಗಿರಿ ಪಡೆದವರು ಲಾರೆನ್ಸ್ ಡಿ’ ಸೋಜಾ ಕಮಾನಿ. ಅದೇ ವರ್ಷ ಅವರು (1968ರಲ್ಲಿ) ಹೆಚ್ಚಿನ ವಿದ್ಯಾಭ್ಯಾಸ ಪಡೆಯಲೆಂದು ದಾರಿ ತುಳಿದದ್ದು ಗೊತ್ತು ಗುರಿ ಇಲ್ಲದ ಮುಂಬೈ ಶಹರಕ್ಕೆ. ಇಲ್ಲಿ ಹಗಲಲ್ಲಿ ದುಡಿಮೆಯೊಂದಿಗೆ ಪಡೆದದ್ದು ಬಿ.ಕಾಂ. ಪದವಿ. ಮುಂದೆ ಮುಂಜಾನೆ ಕಾಲೇಜಿನಲ್ಲಿ (ಸಿಡ್ಮ) ಎಂ.ಕಾಂ. ಸ್ನಾತಕೋತ್ತರ ಪದವಿ ಪಡೆದು, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಊರಿನ ಬಾಲ್ಯದಲ್ಲಿ ಅಂಟಿದ್ದ ನಾಟಕದ ನಂಟು ಕಮಾನಿ ಅವರನ್ನು ಎಂದೂ ಬಿಡಲೇ ಇಲ್ಲ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿದ್ದ ಡಾ. ರೆ. ಫಾ. ಚಾರ್ಲ್ಸ್ ವಾಸ್ ಅವರ ‘ಪ್ರೇಮ್ ರಾಗಿಣಿ’ ಮುಂತಾದ ಪ್ರತಿಷ್ಠಿತ ಸಂಗೀತ ನಾಟಕಗಳಲ್ಲಿ ಅಭಿನಯಿಸಿದ್ದ ಕಮಾನಿಯವರು ಸ್ವತಃ ನಿರ್ದೇಶಿಸಿದ ನಾಟಕಗಳು ಹತ್ತುಹಲವು. ಮುಂಬೈ ಮಾತ್ರವಲ್ಲದೆ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಇವರ ನಿರ್ದೇಶನದ ನಾಟಕಗಳು ಯಶಸ್ವಿ ಇಪ್ಪತ್ತೆರಡರ ಪ್ರಯೋಗಗಳನ್ನು ನೀಡಿವೆ. ಇವರು ಬರೆದು ನಿರ್ದೇಶಿಸಿದ್ದ ‘ಮೊಗ ಖಾತಿರ್’ ಹಾಗೂ ಏಕವ್ಯಕ್ತಿ ನಾಟಕಗಳು ರಂಗದಲ್ಲಿ ಬಹು ಯಶಸ್ವಿಗೊಂಡಿವೆ. ಮರಾಠಿಯಿಂದ ಎರಡು ನಾಟಕಗಳನ್ನು ಹಾಗೂ ಇಂಗ್ಲಿಷ್‌ನ ‘ದ ಪ್ರಪೋಸಲ್’ ನಾಟಕವನ್ನು ಕೊಂಕಣಿಗೆ ತಂದು ಕೊಂಕಣಿ ರಂಗಭೂಮಿ ಶ್ರೀಮಂತಗೊಳ್ಳುವಲ್ಲಿ ತಮ್ಮ ದೇಣಿಗೆ ನೀಡಿದ್ದಾರೆ. ಸುಮಾರು ಆರು ನಾಟಕಗಳನ್ನು ಆಕಾಶವಾಣಿಗಾಗಿ ನಿರ್ದೇಶಿಸಿದ್ದ ಕಮಾನಿಯವರು, ತಮ್ಮ ‘ಕೊಂಕಣಿ ಸಾಹಿತ್ಯ ಪಬ್ಲಿಕೇಶನ್ಸ್’ ಮೂಲಕ ನಾಟಕಗಾರ ಜಿ.ಎಂ.ಬಿ. ರೊಡ್ರಿಗಸ್, ಪಿಂಥಮ್ ದೇರೆಬೈಲ್ ಮೊದಲಾದವರ ಕೃತಿಗಳು ಹೊರಬರುವಂತೆ ಮಾಡಿದ್ದಾರೆ. 2018ರ ಜನವರಿ 6ಮತ್ತು 7ರಂದು ಕೊಂಕಣಿ ಭಾಷಾ ಮಂಡಳ್, ಮಹಾರಾಷ್ಟ್ರವು ಶಿವಾಜಿ ಪಾರ್ಕಿನಲ್ಲಿರುವ ಮಹಾರಾಷ್ಟ್ರ ರಾಜ್ಯ ಸ್ಕೌಟ್ಸ್‌ಗೈಡ್ಸ್ ಸಭಾಗೃಹದಲ್ಲಿ ಆಯೋಜಿಸಿದ್ದ 31ನೇ ಅಖಿಲ ಭಾರತ ಕೊಂಕಣಿ ಪರಿಷದ್‌ನ ಸಮ್ಮೇಳನದ ಮುಖ್ಯ ರೂವಾರಿ ಆಗಿದ್ದವರು ಕಮಾನಿ. ಯಶಸ್ವಿಯಾಗಿ ಸಂಪನ್ನಗೊಂಡ ಈ ಕಾರ್ಯಕ್ರಮವು ಲಾರೆನ್ಸ್ ಡಿ’ ಸೋಜಾ ಕಮಾನಿ ಅವರ ಸಂಘಟನಾ ಚಾತುರ್ಯಕ್ಕೆ ಸಾಕ್ಷಿಯಾಗಿದೆ. ‘ದಿವೋ’ ಪತ್ರಿಕೆಯ ಸಂಪಾದಕ ಮಂಡಳಿಯಲ್ಲೂ ಮಹತ್ವದ ಪಾತ್ರವನ್ನು ವಹಿಸಿದ್ದ ಇವರು, ಅಖಿಲ ಭಾರತ ಕೊಂಕಣಿ ಪರಿಷದ್ ಇದರ ಕೋರ್ ಕಮಿಟಿ ಸದಸ್ಯ, ‘ದ ಮಂಗಳೂರಿಯನ್ ವೆಲ್ಫೇರ್ ಅಸೋಸಿಯೇಶನ್’ನ ‘ವಿದ್ಯಾವಿಹಾರ್’ ಇದರ ಅಧ್ಯಕ್ಷ, ಕೊಂಕಣಿ ಸೇವಾ ಸಂಘ, ಕುರ್ಲಾ ಇದರ ಅಧ್ಯಕ್ಷರು -ಹೀಗೆ ಹತ್ತು ಹಲವು ಸಂಘಗಳಲ್ಲಿ ಕ್ರಿಯಾಶೀಲರಾಗಿದ್ದು ಭಾಷೆ ಹಾಗೂ ನಾಡಿಗಾಗಿ ಮಹತ್ವದ ಕಾರ್ಯ ಗೈಯುತ್ತಿದ್ದಾರೆ. 1999ರಲ್ಲಿ ತಮ್ಮ 50ರ ಹರೆಯದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜು, ಮಂಗಳೂರು ಇಲ್ಲಿ ಪಿಜಿ ಡಿಪ್ಲೊಮಾ ಇನ್ ಕೊಂಕಣಿ ಸ್ಟಡೀಸ್‌ನಲ್ಲಿ ಸುಮಾರು ಐನೂರು ವಿದ್ಯಾರ್ಥಿಗಳಲ್ಲಿ ಇವರು ಒಂಭತ್ತನೇ ಶ್ರೇಣಿ ಪಡೆದಿರುವುದು ಇವರ ಭಾಷಾಭಿಮಾನಕ್ಕೆ ಸಾಕ್ಷಿ.

 ಪಿ. ಡಿ’ಸೋಜಾ ಎಂದೇ ಖ್ಯಾತರಾಗಿರುವ ಪಿಯೆಕಾಸ್ ಡಿ’ಸೋಜಾ ಮೂಲತಃ ಮಂಗಳೂರಿನ ಬೋಳಾರ (ಉರ್ವ)ದವರು. ತಮ್ಮ ಇಪ್ಪತ್ತೊಂದನೇ ವಯಸ್ಸಿನಲ್ಲಿ ‘ದೋತ್‌ಚೆಂ ಬರೆ-ವೈಟ್’ (ವರದಕ್ಷಿಣೆಯ ಒಳಿತು-ಕೆಡುಕು) ಎಂಬ ಬರಹವನ್ನು ‘ರಾಕ್ಣೊ’ದಲ್ಲಿ ಪ್ರಕಟಿಸಿದ ನಂತರ ಸಾಮಾಜಿಕ ಪಿಡುಗು, ಅಂಧಶ್ರದ್ಧೆ, ಮೂಢನಂಬಿಕೆಗಳ ಬಗ್ಗೆ ನಿರಂತರ ಬರೆಯುತ್ತಾ ಬಂದಿದ್ದಾರೆ. ಕನ್ನಡದಲ್ಲಿ ಇವರು ಬರೆದ ಪ್ರಥಮ ಲೇಖನ ‘ಸ್ವತಂತ್ರ ಭಾರತ’. ಮಂಗಳೂರಿನಲ್ಲಿ ಕೊಹಿನೂರ್ ಪ್ರೆಸ್, ಕೊಡಿಯಾಲ್‌ಬೈಲ್ ಪ್ರೆಸ್‌ನಲ್ಲಿ ರೂ.15ರಂತೆ ತಿಂಗಳ ಸಂಬಳ ಪಡೆಯುತ್ತಿದ್ದ ಪಿ. ಡಿ’ಸೋಜಾ ಇವರು ಮುಂಬೈಗೆ ಬಂದದ್ದು 1943ರಲ್ಲಿ. ಇಲ್ಲಿ 1944ರಲ್ಲಿ ಪ್ರತಿಷ್ಠಿತ ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಯಲ್ಲಿ ಸೇರಿಕೊಂಡು ತಮ್ಮ ಸುದೀರ್ಘ 34 ವರ್ಷಗಳ ಸೇವೆಯ ನಂತರ ನಿವೃತ್ತಿ ಪಡೆದವರು. ಈ ಸಂದರ್ಭದಲ್ಲಿ 1950ರಿಂದ 1976ರ ವರೆಗೆ ‘ಪಯ್ಣಿರಿ’ ಪತ್ರಿಕೆಗೆ ಮುಂಬೈ ವರದಿಗಾರರಾಗಿ, ಅಂಕಣ ಬರಹಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ‘ಕ್ರಿಸೋಫಿಯಾ’, ‘ಪಿಡಿಎಸ್’ ಎಂಬಿತ್ಯಾದಿ ಕಾವ್ಯನಾಮಗಳ ಮೂಲಕ ಅಂಕಣ, ಲೇಖನ ಬರೆದಿದ್ದಾರೆ. ಪಿ. ಡಿ’ಸೋಜ ಅವರ ‘ಆಲ್‌ಚಾಲ್’, ‘ದಿವ್ಯಾಚಿ’ ಮೊದಲಾದವುಗಳು ಬಹುಚರ್ಚಿತ ಕೃತಿಗಳು.

ಕೊಂಕಣಿ ಭಾಷಾ ಮಂಡಳ್, ಮಹಾರಾಷ್ಟ್ರ ಇವರಿಂದ ಕೊಡಲ್ಪಡುವ ಶ್ರೇಷ್ಠ ಜೀವನ ಸಾಧಕ ಪ್ರಶಸ್ತಿಗೆ ಭಾಜನರಾಗಿರುವ ಲಾರೆನ್ಸ್ ಕುವೆಲ್ಹೋ ಅವರದ್ದು ಕೊಂಕಣಿಯಲ್ಲಿ ಎದ್ದು ತೋರುವ ವ್ಯಕ್ತಿತ್ವ. ಅವಿಭಜಿತ ದಕ್ಷಿಣಕನ್ನಡದ ಇನ್ನಾ ಗ್ರಾಮದ ಸಾಂತೂರಿನವರಾದ ಕುವೆಲ್ಹೋ ಅವರ ತಂದೆ ಮುಂಬೈಯಲ್ಲಿ ಟ್ಯಾಕ್ಸಿ ಚಾಲಕರಾಗಿದ್ದವರು. ಕುವೆಲ್ಹೋ ಅವರು ಮುಂದೆ ಅನಿವಾರ್ಯ ಕಾರಣಗಳಿಂದ ಮುಂಬೈಗೆ ಬಂದು ಇಲ್ಲಿ ತಂದೆಯವರಿಗೆ ಸಹಕರಿಸುತ್ತಾ ಪದವಿ ಶಿಕ್ಷಣ ಪೂರೈಸಿ ನಿಧಾನವಾಗಿ ಸಾಂಘಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. 1980ರಲ್ಲಿ ‘ರಾಯಲ್ ಕ್ರಿಶ್ಚಿಯನ್ ಫ್ಯಾಮಿಲಿ ಆರ್ಗನೈಜೇಷನ್’ ಹುಟ್ಟುಹಾಕಿ ಆ ಮೂಲಕ ಯುವಕ-ಯುವತಿಯರಿಗೆ ತಮ್ಮ ಆಯ್ಕೆಯ ಜೋಡಿಗಳನ್ನು ಹುಡುಕಿಕೊಡುವ ಮೂಲಕ ಮದುವೆ ಭಾಗ್ಯ ಒದಗಿಸಲು ಪ್ರಾರಂಭಿಸಿದವರು ಕುವೆಲ್ಹೋ. ತಮ್ಮ ಸಮಾಜವನ್ನು ಜಾಗೃತಗೊಳಿಸುವ, ತಮ್ಮವರ ಸುದ್ದಿ ಬಿತ್ತರಿಸುವ, ಕೊಂಕಣಿ ಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 1992ರಲ್ಲಿ ‘ದಿ ಸೆಕ್ಯುಲರ್ ಸಿಟಿಜನ್’ ಎಂಬ ಪತ್ರಿಕೆಯನ್ನು ಅವರು ಪ್ರಾರಂಭಿಸಿದರು. ಆನಂತರ ಮುಂಬೈಯವರ ಬಹುನಿರೀಕ್ಷಿತ ಹಾಗೂ ಕೊಂಕಣಿಗರ ಸಾಪ್ತಾಹಿಕ ‘ದಿವೋ’ 1995ರಲ್ಲಿ ಅಸ್ತಿತ್ವಕ್ಕೆ ಬಂತು. ಹಲವಾರು ಲೇಖಕರನ್ನು, ಕವಿಗಳನ್ನು, ಕತೆಗಾರರನ್ನು ಬೆಳಕಿಗೆ ತಂದ ಶ್ರೇಯ ಈ ಪತ್ರಿಕೆಗಳಿಗೆ ಸಲ್ಲುತ್ತದೆ. ‘ದಿವೋ’ ವಾರಪತ್ರಿಕೆಯ ಸಂಪಾದಕರೂ, ಪ್ರಕಾಶಕರೂ ಆಗಿರುವ ಲಾರೆನ್ಸ್ ಕುವೆಲ್ಹೋ ‘ದಿ ಸೆಕ್ಯುಲರ್ ಸಿಟಿಜನ್ಸ್’ ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ.

2001ರಿಂದ ‘ದಿವೋ’ ಪತ್ರಿಕೆಯು ‘ದಿವೋ ಸಾಹಿತ್ಯ ಪುರಸ್ಕಾರ’ವನ್ನು ನೀಡುತ್ತಾ ಬಂದಿದೆ. ಈ ಪ್ರಶಸ್ತಿಯನ್ನು ವರ್ಷದ ಶ್ರೇಷ್ಠ ಕೊಂಕಣಿ ಲೇಖಕ ಹಾಗೂ ಪತ್ರಕರ್ತರಿಗೆ ತಲಾ 25,000ರೂ.ನೊಂದಿಗೆ ನೀಡಲಾಗುತ್ತದೆ. ಹಾಗೆಯೇ 2005ರಿಂದ ಇನ್ನೊಂದು ಪತ್ರಿಕೆ ‘ದಿ ಸೆಕ್ಯುಲರ್ ಸಿಟಿಜನ್ಸ್’ ವತಿಯಿಂದ ನೀಡಲಾಗುವ ‘ಜೀವಮಾನದ ಸಾಧನೆ’ ಪ್ರಶಸ್ತಿಯು ರೂ. 50,000 ನಗದು ಮೊತ್ತವನ್ನು ಹೊಂದಿದೆ. ಪತ್ರಿಕೆಗಳ ಆಶ್ರಯದಲ್ಲಿ ಹಲವಾರು ಸೆಮಿನಾರ್‌ಗಳನ್ನು ಆಯೋಜಿಸಿದ್ದಾರೆ. ಕ್ರಿಶ್ಚಿಯನ್ ಚೇಂಬರ್ ಆಫ್ ಕಾಮರ್ಸ್ ಇಂಡಸ್ಟ್ರೀಸ್ ಇದರ ಸ್ಥಾಪಕ ನಿರ್ದೇಶಕರೂ ಆಗಿದ್ದ ಲಾರೆನ್ಸ್ ಕುವೆಲ್ಹೋ ಅವರಿಗೆ 2003ರಲ್ಲಿ ಡಾ. ಹರಿವಂಶ್ ರಾಯ್ ಬಚ್ಚನ್ ಅವಾರ್ಡ್ ಫಾರ್ ಜರ್ನಲಿಸಂನ ‘ಆಶೀರ್ವಾದ’ ಪ್ರಶಸ್ತಿ. ಕೊಂಕಣಿ ರೈಟರ್ಸ್ ಫೋರಂ, ಕರ್ನಾಟಕ ಇದರ ದಶಮಾನೋತ್ಸವ ಸಂದರ್ಭ(2004)ದ ಗೌರವ ಪುರಸ್ಕಾರಗಳೂ ಸಂದಿವೆ.

‘ದಿ ಸೆಕ್ಯುಲರ್ ಸಿಟಿಜನ್ಸ್’ ಹಾಗೂ ‘ದಿವೋ’ ಪತ್ರಿಕೆಗಳು ನಿಯಮಿತವಾಗಿ ಬರುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವವರು ಸುಸಾನ್ಹಾ ಕುವೆಲ್ಹೋ. ಲಾರೆನ್ಸ್ ಕುವೆಲ್ಹೋ ಅವರನ್ನು 1982ರಲ್ಲಿ ವಿವಾಹವಾಗಿ ಮುಂಬೈಗೆ ಆಗಮಿಸಿದ್ದ ಸುಸಾನ್ಹಾ ಅವರು ಪತಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ.

ಎಪ್ಪತ್ತೇಳರ ಹರೆಯದ ಫ್ರಾನ್ಸಿಸ್ ಫೆರ್ನಾಂಡಿಸ್ 1966ರಲ್ಲಿ ಮಂಗಳೂರಿನ ಡಾನ್ ಬಾಸ್ಕೋ ಸ್ಕೂಲ್‌ನಲ್ಲಿ ಸ್ತ್ರೀ ಪಾತ್ರದ ಮೂಲಕ ನಾಟಕ ರಂಗ ಪ್ರವೇಶಿಸಿದ್ದರು. ಕೆ. ಎನ್. ಟೈಲರ್ ಮೊದಲಾದ ಖ್ಯಾತನಾಮರ ಜೊತೆ ಕನ್ನಡ-ತುಳು ನಾಟಕಗಳಲ್ಲಿ ಅಭಿನಯಿಸಿದ್ದ ಫ್ರಾನ್ಸಿಸ್ ಫೆರ್ನಾಂಡಿಸ್ ಮುಂಬೈಗೆ ಆಗಮಿಸಿದ್ದ ಬಳಿಕವೂ ತಮ್ಮ ನಾಟಕದ ಅಭಿರುಚಿಯನ್ನು ಉಳಿಸಿಕೊಂಡಿದ್ದಾರೆ. ದಿಲ್ಲಿ, ಕರ್ನಾಟಕ, ಕೇರಳ ಮೊದಲ್ಗೊಂಡು ಭಾರತದ ವಿವಿಧೆಡೆ ತಮ್ಮ ನಿರ್ದೇಶನದ ನಾಟಕಗಳನ್ನು ರಂಗಕ್ಕೇರಿಸಿರುವ ಫ್ರಾನ್ಸಿಸ್ ಇಸ್ರೇಲ್, ಖತರ್, ದುಬೈ ಮೊದಲಾದೆಡೆ ನಾಟಕಗಳನ್ನು ಪ್ರಯೋಗಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಾವಿರಕ್ಕಿಂತಲೂ ಹೆಚ್ಚು ಲೇಖನಗಳನ್ನು, ಮೂರು ಕಾದಂಬರಿಗಳನ್ನು ಹಾಗೂ 34 ನಾಟಕಗಳನ್ನು ಬರೆದಿರುವ ಫ್ರಾನ್ಸಿಸ್ ಫೆರ್ನಾಂಡಿಸ್ ಕೊಂಕಣಿ ಸಾಹಿತ್ಯದಲ್ಲಿ ಎದ್ದು ತೋರುವವರು. ಇವರ ‘ಮಾತರೂ ಸರ್ಬೆಲ್ಲಾ’ ಎಂಬ ನಾಟಕವು ಇವರಿಗೆ ಹೆಚ್ಚಿನ ಗೌರವ ತಂದುಕೊಟ್ಟಿದೆ.

2008ರಿಂದ 2013ರವರೆಗೆ ಮುಂಬೈ ವಾಸಿಯಾಗಿದ್ದ ರೆ. ಎಬ್ನೇಜರ್ ಜತ್ತನ್ನ ಅವರು ಇಲ್ಲಿ ಮುಂಬೈ ವಿಶ್ವ ವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆನಂತರ ಅವರು ಎಂಫಿಲ್ ಪದವಿಗಾಗಿ ‘ತುಳು ಹೊಸ ಒಡಂಬಡಿಕೆಯ ಭಾಷಾಂತರದ ತಾತ್ವಿಕತೆ’ ಎಂಬ ಸಂಶೋಧನಾ ಗ್ರಂಥ ರಚಿಸಿದ್ದಾರೆ. ಸದ್ಯ ಡಾ. ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ‘ಬೈಬಲ್ ಕನ್ನಡ ಭಾಷಾಂತರ ಅಧ್ಯಯನ: ಪರಿಣಾಮ ಮತ್ತು ಪ್ರಕ್ರಿಯೆ’ ಕುರಿತು ಪಿ.ಎಚ್‌ಡಿ.ಗಾಗಿ ಸಂಶೋಧನೆ ಹಂತದ ತಯಾರಿಯಲ್ಲಿದ್ದಾರೆ.

ಮಂಗಳೂರಿನ ಜಪ್ಪುವಿನ ಸಿಎಸ್‌ಐ ಕಾಂತಿ ಚರ್ಚ್ ಇಲ್ಲಿ ಗುರುಗಳಾಗಿರುವ ಜತ್ತನ್ನ ಅವರು ಜರ್ಮನ್, ಇಂಡೋನೇಶ್ಯ, ಬಾಲಿ ರಾಷ್ಟ್ರಗಳಲ್ಲಿ ನಡೆದಿರುವ ವಿಶೇಷ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ದುಬೈಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನದಲ್ಲಿ ತುಳುವಿನಲ್ಲಿ ಪ್ರಬಂಧ ಮಂಡಿಸಿದ್ದಾರೆ. ಇವರ ಹಲವಾರು ಲೇಖನಗಳು ಕನ್ನಡ-ತುಳುವಿನಲ್ಲಿ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ.

ಪ್ರಾದೇಶಿಕ ಭಾಷೆಗಳ ಚಲನಚಿತ್ರಗಳಿಗೆ ಕರ್ನಾಟಕ ರಾಜ್ಯ ಸರಕಾರ ಕೊಡಮಾಡುವ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ತಮ್ಮ ‘ಸೋಪಿಯಾ’ ಚಿತ್ರಕ್ಕೆ ಪಡೆದಿರುವ ಪ್ರಥಮ ಹೊರನಾಡ ಕೊಂಕಣಿ ಚಲನಚಿತ್ರ ನಿರ್ದೇಶಕ ಹ್ಯಾರಿ ಫೆರ್ನಾಂಡಿಸ್. ತಮ್ಮ ಬಾಲ್ಯ ಸ್ನೇಹಿತ ಗೋವಿಂದರ ಸಹಾಯದಿಂದ ಚಿತ್ರದ ನಿರ್ದೇಶಕ ಲಾರೆನ್ಸ್ ಡಿ’ಸೋಜ ಅವರ ಪರಿಚಯವಾಗಿ ಅವರು ನಿರ್ದೇಶಿಸಿದ್ದ ‘ನ್ಯಾಯ-ಅನ್ಯಾಯ’, ‘ಪೌಜಿ’, ‘ಪ್ರತೀಕ್ಷಾ’, ‘ಮಾಹಿರ್’, ಮೊದಲಾದ ಹಿಂದಿ ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಪಳಗಿ, ಮುಂದೆ ಮರಾಠಿಯ ಖ್ಯಾತ ಚಿತ್ರ ನಿರ್ದೇಶಕ ಪುರುಷೋತ್ತಮ್ ಬೆರ್ಡೆ, ಸಂಜಯ್ ಚೇಲ್, ಅಮಿತ್ ಪಾಲ್ ಮೊದಲಾದವರ ಗರಡಿಯಲ್ಲಿ ಪಳಗಿ ಮುಂದೆ ಕೊಂಕಣಿಯಲ್ಲಿ ‘ಕಝರಾ ಉಪರಾಂತ್’ ಕೊಂಕಣಿ ಚಲನಚಿತ್ರವನ್ನು ನಿರ್ದೇಶಿಸಿದ್ದರು. ಕಥೆ, ಸ್ಕ್ರೀನ್‌ಪ್ಲೇ, ಸಂಭಾಷಣೆಗಳನ್ನು ತಾನೇ ಬರೆದು ನಿರ್ದೇಶಿಸಿರುವ ಇವರ ಶಿಸ್ತುಬದ್ಧ ಕಾಯಕದಿಂದಾಗಿ ಇವರು ನಿರ್ದೇಶಿಸಿರುವ ಎಲ್ಲಾ ಚಿತ್ರಗಳು ಯಶಸ್ಸು ಗಳಿಸಿವೆ. ಕೊಂಕಣಿಯಲ್ಲಿ ಐದು, ಹಿಂದಿಯಲ್ಲಿ ಒಂದು (ಅಂಜಾನೆ-ದ ಅನ್‌ನ್ನೋನ್) ಭೋಜ್ ಪುರಿಯಲ್ಲಿ ಏಳು ಹಾಗೂ ಮರಾಠಿಯಲ್ಲಿ ಒಂದು ಚಿತ್ರವನ್ನು ನಿರ್ದೇಶಿಸಿರುವ ಹ್ಯಾರಿ ಫೆರ್ನಾಂಡಿಸ್ ಓರ್ವ ಸೋಲಿಲ್ಲದ ಸರದಾರ. ಬಹು ಪ್ರಸಿದ್ಧ ಟಿವಿ ಧಾರಾವಾಹಿಗಳಾದ ‘ನುಕ್ಕಡ್’, ‘ಅಲ್ವಿದಾ’, ‘ಡಾರ್ಲಿಂಗ್’, ‘ಫಿಲ್ಮಿ ಚಕ್ಕರ್’ ಮೊದಲಾದವುಗಳಲ್ಲಿ ನಟಿಸಿದ್ದಾರೆ. ವಿವಿಧ ರೀತಿಯಿಂದ ಸಹಕರಿಸಿದ್ದಾರೆ. ಸುಮಾರು 6 ಭಾಷೆಗಳನ್ನು ಬಲ್ಲ ಹ್ಯಾರಿ ಫೆರ್ನಾಂಡಿಸ್ ಹಲವಾರು ಕೊಂಕಣಿ ವೀಡಿಯೊ ಫಿಲ್ಮ್‌ಗಳನ್ನು ಮಾಡಿದ್ದಾರೆ.

‘‘ನನ್ನ ತಂದೆಯ ಮನೆ ಕುಂದಾಪುರ, ತಾಯಿ ಕುಡ್ಲ (ಮಂಗಳೂರು)ದವರು. ಅವರಿತ್ತ ಸಂಸ್ಕಾರಯುತ ಬದುಕು ನನ್ನನ್ನು ಇಂದು ನಡೆಸುತ್ತಿದೆ’’ ಎನ್ನುವ 85ರ ಹರೆಯದ ಸ್ಟ್ಯಾನಿ ಲೋಬೊ ಮುಂಬೈಗೆ ಆಗಮಿಸಿದ್ದು 1953ರಲ್ಲಿ. ಸುಮಾರು ನೂರಕ್ಕಿಂತಲೂ ಹೆಚ್ಚು ಕೊಂಕಣಿ ಕೃತಿಗಳನ್ನು ಬರೆದಿರುವ ಇವರ ‘ದೂಬವೆ ಬೈಲ್ (1955) ಪ್ರಥಮ ಕಥಾ ಸಂಕಲನ. ಇವರು ದಿವೋ ಪತ್ರಿಕೆಗಾಗಿ ಬರೆದಿರುವ ‘ಸವಾಲದಪಿ’ಯು ನಿರಂತರ ಹನ್ನೆರಡು ವರ್ಷ ಪ್ರತೀ ವಾರ ಪ್ರಕಟವಾಗುತ್ತಿತ್ತು. ಇದರಿಂದ ಪತ್ರಿಕೆಯ ಪ್ರಸಾರ ಹೆಚ್ಚಾಗುತ್ತಿತ್ತು ಎಂದು ಹಿಂದಿನ ನೆನಪುಗಳನ್ನು ಮೆಲ್ಲನೆ ಕೆದಕಿ ತೆಗೆಯುತ್ತಾರೆ ಸ್ಟ್ಯಾನಿ ಲೋಬೊ.

ತಮ್ಮ ಸಮಾಜವನ್ನು ಜಾಗೃತಗೊಳಿಸುವ, ತಮ್ಮವರ ಸುದ್ದಿ ಬಿತ್ತರಿಸುವ, ಕೊಂಕಣಿ ಲೇಖಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 1992ರಲ್ಲಿ ‘ದಿ ಸೆಕ್ಯುಲರ್ ಸಿಟಿಜನ್’ ಎಂಬ ಪತ್ರಿಕೆಯನ್ನು ಲಾರೆನ್ಸ್ ಕುವೆಲ್ಹೋ ಪ್ರಾರಂಭಿಸಿದರು. ಆನಂತರ ಮುಂಬೈಯವರ ಬಹುನಿರೀಕ್ಷಿತ ಹಾಗೂ ಕೊಂಕಣಿಗರ ಸಾಪ್ತಾಹಿಕ ‘ದಿವೋ’ 1995ರಲ್ಲಿ ಅಸ್ತಿತ್ವಕ್ಕೆ ಬಂತು. ಹಲವಾರು ಲೇಖಕರನ್ನು, ಕವಿಗಳನ್ನು, ಕತೆಗಾರರನ್ನು ಬೆಳಕಿಗೆ ತಂದ ಶ್ರೇಯ ಈ ಪತ್ರಿಕೆಗಳಿಗೆ ಸಲ್ಲುತ್ತದೆ. ‘ದಿವೋ’ ವಾರಪತ್ರಿಕೆಯ ಸಂಪಾದಕರೂ, ಪ್ರಕಾಶಕರೂ ಆಗಿರುವ ಲಾರೆನ್ಸ್ ಕುವೆಲ್ಹೋ ‘ದಿ ಸೆಕ್ಯುಲರ್ ಸಿಟಿಜನ್ಸ್’ ವ್ಯವಸ್ಥಾಪಕ ಸಂಪಾದಕರಾಗಿದ್ದಾರೆ.

Writer - ದಯಾನಂದ ಸಲ್ಯಾನ್

contributor

Editor - ದಯಾನಂದ ಸಲ್ಯಾನ್

contributor

Similar News