ಎಲ್‌ಎಸಿಯುದ್ದಕ್ಕೂ ಚೀನಾ ಗ್ರಾಮಗಳ ನಿರ್ಮಾಣ: ಲೆಫ್ಟಿನೆಂಟ್ ಜನರಲ್ ಹೇಳಿಕೆ

Update: 2021-10-20 03:57 GMT
ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ (Photo Tweeted by@ProDefKolkata)

ಅರುಣಾಚಲ ಪ್ರದೇಶ, ಅ.20: ಸಮಗ್ರ ಮಿಲಿಟರಿ ಅಭ್ಯಾಸಗಳನ್ನು ಮಾಡುತ್ತಿರುವ ಚೀನಾ ಮೀಸಲು ಪಡೆಗಳನ್ನು ಕೂಡಾ ಕ್ರೋಢೀಕರಿಸುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ಅವಳಿ ಬಳಕೆಯ ಗ್ರಾಮಗಳನ್ನು ಮತ್ತು ಪಡೆಗಳ ವಾಸತಾಣಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಪೂರ್ವ ಸೇನಾ ಕಮಾಂಡ್‌ನ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಬಹಿರಂಗಪಡಿಸಿದ್ದಾರೆ.

ಇದಕ್ಕೆ ಪ್ರತಿಯಾಗಿ ಭಾರತ ಗಡಿಯುದ್ದಕ್ಕೂ ಯಾವುದೇ ತುರ್ತು ಸ್ಥಿತಿಯನ್ನು ನಿಭಾಯಿಸುವ ಕಾರ್ಯಾಚರಣೆಗೆ ಸರ್ವ ಸನ್ನದ್ಧವಾಗಿದೆ. ಸಿಲಿಗುರಿ ಕಾರಿಡಾರ್ (ಚಿಕನ್ ನೆಕ್)ಗೆ ಇರುವ ಅಪಾಯವನ್ನು ಪರಿಹರಿಸಲು ಕಾರ್ಯತಂತ್ರ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

2013ರ ಅಕ್ಟೋಬರ್‌ನಲ್ಲಿ ಸಹಿ ಮಾಡಲಾದ ಗಡಿ ರಕ್ಷಣಾ ಸಹಕಾರ ಒಪ್ಪಂದ (ಬಿಡಿಸಿಎ) ಸೇರಿದಂತೆ ಚೀನಾ ಜತೆಗಿನ ಪ್ರಸಕ್ತ ಇರುವ ಗಡಿ ಒಪ್ಪಂದವನ್ನು ಕಳೆದ 17 ತಿಂಗಳಿನಿಂದ ಮುಂದುವರಿದಿರುವ ಮಿಲಿಟರಿ ಸಂಘರ್ಷದ ಹಿನ್ನೆಲೆಯಲ್ಲಿ ಪರಾಮರ್ಶಿಸಬೇಕೇ ಎಂಬ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ದ್ವಿಪಕ್ಷೀಯ ಒಪ್ಪಂದಗಳು ಮತ್ತು ಶಿಷ್ಟಾಚಾರಗಳನ್ನು ಗೌರವಿಸಲು ಮತ್ತು ಯಾವುದೇ ಆಕ್ರಮಣಕಾರಿ ಪ್ರವೃತ್ತಿಯನ್ನು ತೋರದಿರಲು ಭಾರತದ ಸೇನೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಆದರೆ ಪೂರ್ವ ಲಡಾಖ್‌ನ ಘಟನಾವಳಿಗಳ ಹಿನ್ನೆಲೆಯಲ್ಲಿ ಮತ್ತು ಭವಿಷ್ಯದಲ್ಲಿ ನಾವು ಏನು ಮಾಡಬೇಕು ಎಂಬ ಬಗ್ಗೆ ಗರಿಷ್ಠ ಮಟ್ಟದ ಚಿಂತನೆ ನಡೆಯಬೇಕಿದೆ ಎಂದು ಹೇಳಿದರು.

ಉಭಯ ದೇಶಗಳ ನಡುವಿನ 1,346 ಕಿಲೋಮೀಟರ್ ಉದ್ದದ ಗಡಿಯುದ್ದಕ್ಕೂ ಅಂದರೆ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಗಡಿ ಭಾಗದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಕ್ರೋಢೀಕರಿಸುವ ಕಾರ್ಯ ಮುಂದುವರಿದಿದೆ. ಪಿಎಲ್‌ಎ ಅಭ್ಯಾಸಗಳು ಕೂಡಾ ಹೆಚ್ಚಿವೆ. ಆದರೆ ಈ ಅಭ್ಯಾಸಗಳು ಅವರ ಸಾಂಪ್ರದಾಯಿಕ ತರಬೇತಿ ಪ್ರದೇಶಗಳಲ್ಲಿ ನಡೆಯುತ್ತಿವೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News