ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ವಿರುದ್ಧ ಕೋಕಾ ಕಾಯ್ದೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

Update: 2021-10-21 17:41 GMT

ಹೊಸದಿಲ್ಲಿ,ಅ.21: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಅರೋಪಿ ಮೋಹನ ನಾಯಕ್ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೋಕಾ)ಯಡಿ ಆರೋಪವನ್ನು ಗುರುವಾರ ಸರ್ವೋಚ್ಚ ನ್ಯಾಯಾಲಯವು ಮರುಸ್ಥಾಪಿಸಿದೆ.

ಗೌರಿ ಲಂಕೇಶ್ ಸೋದರಿ ಕವಿತಾ ಲಂಕೇಶ್ ಅವರು ಸಲ್ಲಿಸಿರುವ ಮೇಲ್ಮನವಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್,ದಿನೇಶ್ ಮಹೇಶ್ವರಿ ಮತ್ತು ಸಿ.ಟಿ.ರವಿಕುಮಾರ್ ಅವನ್ನೊಳಗೊಂಡ ಪೀಠವು,ಮೋಹನ್ ನಾಯಕ್ ವಿರುದ್ಧದ ಕೋಕಾದಡಿ ಆರೋಪಗಳನ್ನು ರದ್ದುಗೊಳಿಸಿದ್ದ ಕರ್ನಾಟಕದ ಉಚ್ಚ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿತು.

ಸೆ.21,2021ರಂದು ಕವಿತಾ ಲಂಕೇಶ ಪರ ಹಿರಿಯ ವಕೀಲ ಹುಝೇಫ್ ಅಹ್ಮದಿ ಮತ್ತು ಆರೋಪಿ ಮೋಹನ್ ನಾಯಕ್ ಪರ ನ್ಯಾಯವಾದಿ ಬಸವಪ್ರಭು ಎಸ್.ಪಾಟೀಲ್ ಅವರ ವಾದಗಳನ್ನು ಆಲಿಸಿದ ಬಳಿಕ ತನ್ನ ತೀರ್ಪನ್ನು ಕಾಯ್ದರಿಸಿದ್ದ ಸರ್ವೋಚ್ಚ ನ್ಯಾಯಾಲಯವು ಗುರುವಾರ ಬೆಳಿಗ್ಗೆ ತೀರ್ಪಿನ ಪ್ರಮುಖ ಭಾಗವನ್ನು ಪ್ರಕಟಿಸಿತು. ತೀರ್ಪನ ವಿವರವಾದ ಪ್ರತಿಯು ತಕ್ಷಣಕ್ಕೆ ಲಭ್ಯವಾಗಿಲ್ಲ.

‘ಉಚ್ಚ ನ್ಯಾಯಾಲಯದ ಆದೇಶದಲ್ಲಿಯ ಪೂರ್ವಾನುಮತಿಗೆ ಸಂಬಂಧಿಸಿದ ಕೊನೆಯ ಭಾಗವನ್ನು ರದ್ದುಗೊಳಿಸಲು ನಾವು ಒಲವು ಹೊಂದಿದ್ದೇವೆ ಎಂಬ ಬಗ್ಗೆ ನಾವು ಸದ್ಯದ ಮಟ್ಟಿಗೆ ಸುಳಿವು ನೀಡುತ್ತಿದ್ದೇವೆ. ನಾವು ಆದೇಶವನ್ನು ಎತ್ತಿ ಹಿಡಿದರೂ ನೀವು ಸಿಂಡಿಕೇಟಿನ ಭಾಗವಾಗಿದ್ದೀರೋ ಇಲ್ಲವೋ ಎನ್ನುವುದನ್ನು ಕಂಡುಕೊಳ್ಳಲು ತನಿಖಾ ಸಂಸ್ಥೆಗಳು ತನಿಖೆಯನ್ನು ಮುಂದುವರಿಸುವುದನ್ನು ಮತ್ತು ಸಾಕ್ಷಗಳನ್ನು ಕ್ರೋಡೀಕರಿಸಿದ ಬಳಿಕ ಆರೋಪ ಪಟ್ಟಿಯನ್ನು ಸಲ್ಲಿಸಲು ಯಾವುದೂ ಅಡ್ಡಿಯಾಗುವುದಿಲ್ಲ ’ಎಂದು ನ್ಯಾ.ಖನ್ವಿಲ್ಕರ್ ನೇತೃತ್ವದ ಪೀಠವು ಸೆ.21ರಂದು ಮೌಖಿಕವಾಗಿ ತಿಳಿಸಿತ್ತು.

 ಕೋಕಾ ಕಾಯ್ದೆಯನ್ನು ಹೇರಲು ಕಲಂ 24(1)ರಡಿ ಅನುಮತಿಯು ಮಂಜೂರಾಗಿತ್ತು ಮತ್ತು ಸಂಜ್ಞೇಯತೆಯನ್ನು ಗಮನಕ್ಕೆ ತೆಗೆದುಕೊಂಡು ಆರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು ಎನ್ನುವುದಕ್ಕೆ ಸಂಬಂಧಿಸಿದಂತೆ ಸಣ್ಣ ಪ್ರಶ್ನೆಯೊಂದನ್ನು ನ್ಯಾಯಾಲಯದ ಪರಿಗಣನೆಗಾಗಿ ಅರ್ಜಿದಾರರು ಸಲ್ಲಿಸಿದ್ದಾರೆ ಎಂದು ವಾದಿಸಿದ್ದ ಅಹ್ಮದಿ,ಆರೋಪಿಗೆ ಸಂಬಂಧಿಸಿದಂತೆ ಕೋಕಾ ಕಾಯ್ದೆಯು ಅನ್ವಯವಾಗುವುದಿಲ್ಲ ಎಂದು ಉಚ್ಚ ನ್ಯಾಯಾಲಯವು ಅಭಿಪ್ರಾಯವನ್ನು ಹೊಂದಿತ್ತು,ಆದರೆ ಕೋಕಾಕಾಯ್ದೆಯು ಸರ್ವಥಾ ಅನ್ವಯವಲ್ಲ ಎಂದು ನಿರ್ಧಾರಕ್ಕೆ ಬರುವಲ್ಲಿ ಅದು ತಪ್ಪನ್ನು ಮಾಡಿತ್ತು ಎನ್ನುವುದನ್ನು ಸರ್ವೋಚ್ಚ ನ್ಯಾಯಾಲಯದ ಅವಗಾಹನೆಗೆ ತಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News