1971ರ ಯುದ್ಧ ಮಾನವೀಯತೆ-ಲೋಕತಂತ್ರದ ರಕ್ಷಣೆಗಾಗಿ ನಡೆದ್ದು:ರಕ್ಷಣಾ ಸಚಿವ ರಾಜನಾಥ್ ಸಿಂಗ್

Update: 2021-10-22 14:07 GMT

ಬೆಂಗಳೂರು, ಅ.22: 1971ರ ಯುದ್ಧದ ಗೆಲುವು ಭಾರತೀಯರಿಗೆ ಎಷ್ಟು ಮಹತ್ವವೋ, ಈ ಯುದ್ಧದ ಹಿನ್ನೆಲೆಯೂ ಅಷ್ಟೇ ಮಹತ್ವದ್ದಾಗಿದೆ. ಈ ಯುದ್ಧವು ವಿಶ್ವದ ಆಯ್ದ ಮಹತ್ವದ ಯುದ್ಧಗಳ ಪೈಕಿ ಒಂದಾಗಿದೆ. ಇದನ್ನು ಯಾವುದೆ ಭೂಮಿ, ಸ್ವತ್ತಿನ ಮೇಲೆ ಹಕ್ಕು ಸಾಧಿಸಲು ಅಥವಾ ಅಧಿಕಾರ ಹಿಡಿಯಲು ಮಾಡಲಿಲ್ಲ. ಮಾನವೀಯತೆ ಹಾಗೂ ಲೋಕತಂತ್ರದ ಗರಿಮೆಯನ್ನು ಸುರಕ್ಷಿತಗೊಳಿಸಲು ನಡೆಸಲಾಯಿತು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ಶುಕ್ರವಾರ ನಗರದ ಯಲಹಂಕ ವಾಯುನೆಲೆಯಲ್ಲಿ ಭಾರತೀಯ ವಾಯು ಸೇನೆಯು ಸುವರ್ಣ ವಿಜಯ ವರ್ಷಾಚರಣೆ ಅಂಗವಾಗಿ ಆಯೋಜಿಸಿರುವ ಮೂರು ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯದ 23 ವರ್ಷಗಳ ಬಳಿಕವೂ ಸಾರ್ವತ್ರಿಕ ಚುನಾವಣೆಯನ್ನು ಎದುರಿಸಲಾಗದ ನಮ್ಮ ನೆರೆಯ ರಾಷ್ಟ್ರ, ಶಾಸನದ ಹೆಸರಿನಲ್ಲಿ ಮಾರ್ಷಲ್ ಲಾ ಅಥವಾ ತುರ್ತುಪರಿಸ್ಥಿತಿಯ ಕಾನೂನು ಹೇರಿಕೊಂಡೆ ಬಂದಿತ್ತು. 1970ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಪಡೆದಿದ್ದ ‘ಬಂಗಾಬಂಧು’ ಅವರನ್ನು ದೇಶದ ಸೇವೆ ಮಾಡುವ ಅವಕಾಶ ನೀಡುವ ಬದಲು, ಅವರನ್ನು ನಮ್ಮ ನೆರೆಯ ರಾಷ್ಟ್ರ ಜೈಲಿಗೆ ಅಟ್ಟಿತು ಎಂದು ಅವರು ಹೇಳಿದರು.

ಇಂತಹ ಸಂದರ್ಭದಲ್ಲಿ ನಾಗರಿಕ ಹಕ್ಕುಗಳಿಗಾಗಿ ಧ್ವನಿ ಎತ್ತಿದಂತಹ ಸಾಮಾನ್ಯ, ಅಮಾಯಕ ನಾಗರಿಕರ ನರಸಂಹಾರ ನಡೆಸುವ ರಾಷ್ಟ್ರದಿಂದ ಅಲ್ಲಿನ ಜನರನ್ನು ರಕ್ಷಿಸುವುದು ನಮ್ಮ ದೇಶದ ರಾಜಧರ್ಮ, ರಾಷ್ಟ್ರಧರ್ಮ ಹಾಗು ಸೈನ್ಯ ಧರ್ಮವು ಆಗಿತ್ತು. ನಮ್ಮ ಸೇನೆಯ ಮೂರು ವಿಭಾಗಗಳು ಹಾಗೂ ಸರಕಾರದ ನಡುವಿನ ಸಮನ್ವಯತೆಯಿಂದಾಗಿ ದೇಶವು ಸಫಲತೆಯನ್ನು ಸಾಧಿಸಲು ಸಾಧ್ಯವಾಯಿತು ಎಂದು ರಾಜನಾಥ್ ಸಿಂಗ್ ತಿಳಿಸಿದರು.

ಯುದ್ಧದ ನೇತೃತ್ವವನ್ನು ವಹಿಸಿಕೊಂಡಿದ್ದು ಜನರಲ್ ಮಾಣಿಕ್ ಶಾ ಓರ್ವ ಪಾರ್ಸಿ, ವಾಯು ಸೇನೆಯ ಮುಖ್ಯಸ್ಥ ಪಿ.ಸಿ.ಲಾಲ್ ಓರ್ವ ಹಿಂದು, ಉತ್ತರ ಸೆಕ್ಟರ್‍ನಲ್ಲಿ ಜನರಲ್ ಆಫಿಸರ್ ಇನ್ ಕಮಾಂಡ್ ಏರ್ ಮಾರ್ಷಲ್ ಲತೀಫ್ ಓರ್ವ ಮುಸ್ಲಿಮ್, ಪೂರ್ವ ಸೆಕ್ಟರ್‍ನ ಜನರಲ್ ಆಫಿಸರ್ ಇನ್ ಕಮಾಂಡ್ ಲೆಫ್ಟಿನೆಂಟ್ ಜನರಲ್ ಜಗಜೀತ್ ಸಿಂಗ್ ಅರೋಡಾ ಓರ್ವ ಸಿಖ್ ಆಗಿದ್ದರು. ಹಾಗೆಯೆ, ಢಾಕಾಗೆ ಹೋಗಿ ಜನರಲ್ ನಿಯಾಝಿ ಜೊತೆ ಶರಣಾಗತಿಯ ಮಾತುಕತೆ ನಡೆಸಿದ ಮೇಜರ್ ಜನರಲ್ ಜಾಕೋಬ್ ಓರ್ವ ಯಹೂದಿ ಆಗಿದ್ದರು. ಇವರು ಯಾವ ಧರ್ಮದವರಾದರೇ ಏನು? ಇವರೆಲ್ಲರ ಸಂಘರ್ಷ ಮಾನವ ಧರ್ಮವನ್ನು ಎತ್ತಿ ಹಿಡಿಯುವ ಕಾಯಕಕ್ಕಾಗಿ ಮುಡಿಪಾಗಿತ್ತು ಎಂದು ಅವರು ಸ್ಮರಿಸಿದರು.

1971ರ ಡಿ.16ರಂದು ಢಾಕಾದಲ್ಲಿ ಶರಣಾಗತಿಯ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಂತೆ ಲೆಕ್ಕವಿಲ್ಲದ್ದಷ್ಟು ಬಂಗಾಳಿ ಸಹೋದರ, ಸಹೋದರಿಯರ ಮೇಲೆ ನಡೆಯುತ್ತಿದ್ದ ಅತ್ಯಾಚಾರ ಅಂತ್ಯವಾಯಿತು. 14 ದಿನಗಳ ಕಾಲ ನಡೆದ ಈ ಯುದ್ಧದಲ್ಲಿ ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ಉಳಿಯುವಂತಾಯಿತು ಎಂದು ರಾಜನಾಥ್ ಸಿಂಗ್ ಹೇಳಿದರು.

ದ್ವಿತೀಯ ವಿಶ್ವಯುದ್ಧದ ಬಳಿಕ ಅತೀ ಹೆಚ್ಚು ಸಂಖ್ಯೆಯಲ್ಲಿ ಸುಮಾರು 93 ಸಾವಿರ ಸೈನಿಕರು ಈ ಯುದ್ಧದಲ್ಲಿ ಶರಣಾದರು. ಈ 14 ದಿನಗಳಲ್ಲಿ ಪಾಕಿಸ್ತಾನ ತನ್ನ ಮೂರನೇ ಒಂದು ಭಾಗದಷ್ಟು ಸೈನಿಕರು, ಅರ್ಧ ನೌಕಾಪಡೆ ಹಾಗೂ ನಾಲ್ಕನೇ ಒಂದು ಭಾಗ ವಾಯುದಳವನ್ನು ಕಳೆದುಕೊಂಡಿತು ಎಂದು ರಾಜನಾಥ್ ಸಿಂಗ್ ತಿಳಿಸಿದರು.

ನಮ್ಮ ಸೇನೆ ಈ ಯುದ್ಧದಲ್ಲಿ ಗೆಲುವು ಸಾಧಿಸಿದರೂ ನಮ್ಮ ದೇಶದ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿತು. ಸಂಪೂರ್ಣ ಢಾಕಾ ನಮ್ಮ ಸೇನೆಯ ಅಧೀನದಲ್ಲಿದ್ದರೂ ಯಾವುದೆ ರೀತಿಯ ನಷ್ಟವೆಸಗದೆ, ರಾಜಕೀಯವಾಗಿ ಕಡಿವಾಣಗಳನ್ನು ಹಾಕದೆ ಅವರ ಸರಕಾರವನ್ನು ಅವರಿಗೆ ಹಿಂದಿರುಗಿಸಿ ಮರಳಿತು ಎಂದು ಅವರು ಹೇಳಿದರು.

1971ರ ಯುದ್ಧದಲ್ಲಿ ಭಾಗಿಯಾಗಿ ದೇಶ ವಿಜಯ ಸಾಧಿಸುವಲ್ಲಿ ಶ್ರಮಿಸಿದ ಯೋಧರ ಪರಾಕ್ರಮ, ಶೌರ್ಯ ಹಾಗೂ ಅವರ ಕುಟುಂಬ ವರ್ಗದವರಿಗೆ ನನ್ನ ನಮನಗಳು. ನಮ್ಮ ದೇಶವು ಆ ವೀರ ಯೋಧರ ತ್ಯಾಗ ಹಾಗೂ ಬಲಿದಾನಕ್ಕಾಗಿ ಸದಾ ಚಿರಋಣಿಯಾಗಿರುತ್ತದೆ. ಅಲ್ಲದೆ, ಅವರ ಕನಸುಗಳನ್ನು ನನಸು ಮಾಡುವ ದಿಕ್ಕಿನಲ್ಲಿ ಮುಂದುವರೆಯಲಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು.

1971ರ ಯುದ್ಧದ ಸಂದರ್ಭದಲ್ಲಿ ಸೇನೆಯ ಎಲ್ಲ ವಿಭಾಗಗಳು ಒಟ್ಟಾಗಿ ಯಾವ ರೀತಿ ಕಾರ್ಯಾಚರಣೆ, ಯೋಜನೆ ರೂಪಿಸಿದ್ದವು. ಅದೇ ರೀತಿ ಎಲ್ಲ ವಿಭಾಗಗಳು ಮತ್ತೆ ಒಂದಾಗಿ ಮುಂದುವರೆಯಲು ಸಾಧ್ಯವಾಗಿದೆ. ನಾವು ದೇಶದ ಭದ್ರತೆ ಜೊತೆಗೆ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಇತರ ಸಹಕಾರಿ ಸಂಸ್ಥೆಗಳಿಗೂ ಒತ್ತು ನೀಡುತ್ತಿದ್ದೇವೆ. ರಕ್ಷಣಾ ವಲಯದಲ್ಲಿ ರಫ್ತಿಗೂ ಉತ್ತೇಜನ ನೀಡಲಾಗುತ್ತಿದೆ. ಜೊತೆಗೆ, ರಕ್ಷಣಾ ವಲಯಕ್ಕೆ ಸಂಬಂಧಿಸಿದ ಸಂಶೋಧನೆ, ಅಭಿವೃದ್ಧಿ ಹಾಗೂ ಉತ್ಪಾದನೆಯಲ್ಲಿ ಖಾಸಗಿ ವಲಯಕ್ಕೆ ಒತ್ತೇಜನ ನೀಡುವ ಮೂಲಕ ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಸಹಕಾರ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ, ರಕ್ಷಣಾ ಕಾರ್ಯದರ್ಶಿ ಡ.ಅಜಯ್ ಕುಮಾರ್, ಕಂದಾಯ ಸಚಿವ ಆರ್.ಅಶೋಕ್ ಹಾಗೂ ಇತರ ಹಿರಿಯ ಸೇನಾಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News