ಚೀನಾದ ಬೆದರಿಕೆಯನ್ನು ಎದುರಿಸಲು ಸೇನೆಯಿಂದ ಅಸ್ಸಾಮಿನಲ್ಲಿ ಪಿನಾಕಾ ರಾಕೆಟ್ ವ್ಯವಸ್ಥೆ ನಿಯೋಜನೆ

Update: 2021-10-22 16:15 GMT

ಗುವಾಹಟಿ,ಅ.22: ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ)ಯಾಚೆಯಿಂದ ಎದುರಾಗುವ ಯಾವುದೇ ಬೆದರಿಕೆಯನ್ನು ಎದುರಿಸಲು ಭಾರತೀಯ ಸೇನೆಯು ಚೀನಾ ಗಡಿಗೆ ಸಮೀಪದ ಮುಂಚೂಣಿ ನೆಲೆಯಲ್ಲಿ ಪಿನಾಕಾ ಮತ್ತು ಸ್ಮರ್ಚ್ ಬಹು ರಾಕೆಟ್ ಉಡಾವಣಾ ವ್ಯವಸ್ಥೆ (ಎಂಆರ್ಎಲ್ಎಸ್)ಗಳನ್ನು ನಿಯೋಜಿಸಿದೆ.

ಪಿನಾಕಾ ಸ್ವಾಯತ್ತ ರಾಕೆಟ್ ಫಿರಂಗಿ ವ್ಯವಸ್ಥೆಯಾಗಿದ್ದು ಸರಾಸರಿ ಸಮುದ್ರ ಮಟ್ಟದಿಂದ 38 ಕಿ.ಮೀ.ಎತ್ತರದವರೆಗಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎತ್ತರಗಳಲ್ಲಿ ದಾಳಿ ವ್ಯಾಪ್ತಿಗಳು ಗಣನೀಯವಾಗಿ ಸಂವರ್ಧಿಸುತ್ತವೆ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯ ಆಳ ದಾಳಿಯ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಪಿನಾಕಾದಲ್ಲಿಯ ಆರು ಲಾಂಚರ್ಗಳು 44 ಸೆಕೆಂಡ್ಗಳಲ್ಲಿ 72 ರಾಕೆಟ್ ಗಳನ್ನು ಉಡಾಯಿಸುತ್ತವೆ ಮತ್ತು ತನ್ಮೂಲಕ 1000 ಮೀ x 800 ಮೀ.ವಿಸ್ತೀರ್ಣದ ಪ್ರದೇಶವನ್ನು ತಟಸ್ಥಗೊಳಿಸಬಲ್ಲವು.


ಪಿನಾಕಾ ಶಸ್ತ್ರಾಸ್ತ್ರ ವ್ಯವಸ್ಥೆಯು ಡಿಆರ್ಡಿಒ ಅಭಿವೃದ್ಧಿಗೊಳಿಸಿರುವ ಸ್ವದೇಶಿ ನಿರ್ಮಿತ ಬಹು ರಾಕೆಟ್ ಉಡಾವಣಾ ವ್ಯವಸ್ಥೆಯಾಗಿದೆ ಎಂದು ಸ್ಥಳದಲ್ಲಿ ಪಿನಾಕಾ ನಿಯೋಜನೆಯ ಉಸ್ತುವಾರಿಯನ್ನು ಹೊಂದಿರುವ ಲೆ.ಕ.ಶರತ್ ಸುದ್ದಿಸಂಸ್ಥೆಗೆ ತಿಳಿಸಿದರು.

ಭಾರತದ ದಾಳಿ ಶಕ್ತಿಯಲ್ಲಿ ಪಿನಾಕಾ ಮತ್ತು ಸ್ಮರ್ಚ್ ಎಂಆರ್ಎಲ್ಎಸ ಗಳ ಪಾತ್ರದ ಕುರಿತು ಮಾತನಾಡಿದ ಅವರು,ಈ ಶಸ್ತ್ರಾಸ್ತ್ರ ವ್ಯವಸ್ಥೆಗಳ ತ್ವರಿತ ಪ್ರತಿಕ್ರಿಯಾ ಸಮಯ ಮತ್ತು ಅತ್ಯಂತ ಹೆಚ್ಚಿನ ನಿಖರತೆ ಅತ್ಯಂತ ಕ್ಷಿಪ್ರ ಅವಧಿಯಲ್ಲಿ ಶತ್ರು ಗುರಿಗಳ ಮೇಲೆ ಕರಾರುವಾಕ್ ದಾಳಿಯನ್ನು ಖಚಿತಪಡಿಸುತ್ತವೆ ಎಂದು ತಿಳಿಸಿದರು.

 ಸ್ಮಚ್ ಭಾರತೀಯ ಸೇನೆಯ ಬಳಿಯಿರುವ ಅತ್ಯಂತ ದೂರ ವ್ಯಾಪ್ತಿಯ ಸಾಂಪ್ರದಾಯಿಕ ರಾಕೆಟ್ ವ್ಯವಸ್ಥೆಯಾಗಿದ್ದು,ಗರಿಷ್ಠ 90 ಕಿ.ಮೀ. ಅಂತರದಲ್ಲಿರುವ ಗುರಿಯ ಮೇಲೆ ಎರಗಬಲ್ಲದು. ವ್ಯವಸ್ಥೆಯು ನಾಲ್ಕು ಲಾಂಚರ್ಗಳನ್ನು ಹೊಂದಿದ್ದು,40 ಸೆಕೆಂಡ್ಗಳಲ್ಲಿ 48 ರಾಕೆಟ್ಗಳನ್ನು ಉಡಾಯಿಸುವ ಮೂಲಕ 1200 ಮೀ x 1200 ಮೀ.ವಿಸ್ತೀರ್ಣದ ಪ್ರದೇಶವನ್ನು ತಟಸ್ಥಗೊಳಿಸುತ್ತದೆ ಎಂದು ಸ್ಮರ್ಚ್ ಎಂಆರ್ಎಲ್ಎಸ್ ನಿಯೋಜನೆಯ ಉಸ್ತುವಾರಿ ಮೇ.ಶ್ರೀನಾಥ್ ತಿಳಿಸಿದರು.

ಪಿನಾಕಾ ವ್ಯವಸ್ಥೆಗೆ ಶಿವನ ಬಿಲ್ಲಿನ ಹೆಸರನ್ನು ನೀಡಲಾಗಿದೆ. ವಿವಿಧ ಮಾದರಿಗಳ ಸ್ಫೋಟಕಗಳು ಮತ್ತು ಮದ್ದುಗುಂಡುಗಳಿಗೆ ಸೂಕ್ತವಾಗುವಂತೆ ಪಿನಾಕಾ ಮತ್ತು ಸ್ಮರ್ಚ ವ್ಯವಸ್ಥೆಗಳನ್ನು ವಿನ್ಯಾಸಗೊಳಿಸಲಾಗಿದೆ.

ಪಿನಾಕಾವನ್ನು ಉನ್ನತೀಕರಣಗೊಳಿಸಲಾಗುತ್ತಿದ್ದು,ಅದು 75 ಕಿ.ಮೀ.ದೂರದ ಗುರಿಯ ಮೇಲೆ ಎರಗುವ ಸಾಮರ್ಥ್ಯವನ್ನು ಹೊಂದಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News