​ಹವಾಮಾನ ಬದಲಾವಣೆ; ಅತ್ಯಧಿಕ ಅಪಾಯ ಸಾಧ್ಯತೆ ದೇಶಗಳ ಪಟ್ಟಿಯಲ್ಲಿ ಭಾರತ

Update: 2021-10-23 03:45 GMT
ಫೈಲ್ ಫೋಟೊ

ವಾಷಿಂಗ್ಟನ್ : ಕೇರಳ ಹಾಗೂ ಉತ್ತರಾಖಂಡದಲ್ಲಿ ಇತ್ತೀಚೆಗೆ ಮೇಘಸ್ಫೋಟದಿಂದ ಭಾರಿ ಹಾನಿ ಸಂಭವಿಸಿದ ನಡುವೆಯೇ, ಹವಾಮಾನ ಬದಲಾವಣೆಯಿಂದಾಗುವ ತೀವ್ರ ಬಾಧಿತವಾಗಲಿರುವ 11 ದೇಶಗಳ ಪಟ್ಟಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಸೇರಿವೆ ಎಂದು ಅಮೆರಿಕದ ಗುಪ್ತಚರ ಮೌಲ್ಯಮಾಪನ ವರದಿ ಎಚ್ಚರಿಸಿದೆ.

ಪರಿಸರಾತ್ಮಕ ಮತ್ತು ಸಾಮಾಜಿಕ ಬಿಕ್ಕಟ್ಟಿಗೆ ಸಜ್ಜಾಗುವ ಮತ್ತು ಸ್ಪಂದಿಸುವಲ್ಲಿ ಹನ್ನೊಂದು ದೇಶಗಳು ತೀವ್ರ ಸಂಕಷ್ಟ ಎದುರಿಸಲಿವ ಎಂದು ವರದಿ ಹೇಳಿದೆ. ಜಾಗತಿಕ ತಾಪಮಾನ ಏರಿಕೆಯನ್ನು ನಿರ್ಧರಿಸುವಲ್ಲಿ ಭಾರತ ಹಾಗೂ ಚೀನಾ ಪ್ರಮುಖ ಪಾತ್ರ ವಹಿಸಲಿವೆ. ಜಾಗತಿಕ ತಾಪಮಾನ ಭೌಗೋಳಿಕ ಹಾಗೂ ರಾಜಕೀಯ ಸಂಘರ್ಷಗಳಿಗೂ ಕಾರಣವಾಗಲಿದೆ. ಸುಮಾರು 2040ರ ವರೆಗೂ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಕೂಡಾ ಅಪಾಯ ಸಾಧ್ಯತೆ ಇದೆ ಎಂದು ಹವಾಮಾನ ಬದಲಾವಣೆ ಕುರಿತ ಮೊದಲ ವರದಿಯಲ್ಲಿ ವಿಶ್ಲೇಷಿಸಲಾಗಿದೆ.

"ಅತ್ಯಧಿಕ ಹಾಗೂ ನಾಲ್ಕನೇ ಗರಿಷ್ಠ ಹೊಗೆಯುಗುಳುವ ದೇಶಗಳಾಗಿರುವ ಚೀನಾ ಹಾಗೂ ಭಾರತದಲ್ಲಿ ಒಟ್ಟು ಹಾಗೂ ತಲಾ ಹೊಗೆಯುಗುಳುವಿಕೆ ಹೆಚ್ಚುತ್ತಲೇ ಇದೆ. ಆದರೆ 2 ಮತ್ತು 3ನೇ ಸ್ಥಾನದಲ್ಲಿರುವ ಅಮೆರಿಕ ಹಾಗೂ ಯೂರೋಪಿಯನ್ ಒಕ್ಕೂಟದಲ್ಲಿ ಇದು ಕಡಿಮೆಯಾಗುತ್ತಿದೆ. ಈ ದೇಶಗಳು ಹೆಚ್ಚು ನವೀಕರಿಸಬಹುದಾದ ಹಾಗೂ ಕಡಿಮೆ ಇಂಗಾಲದ ಮೂಲಗಳ ವಿದ್ಯುತ್ ಬಳಸುತ್ತಿವೆ ಎಂದು ವರದಿ ವಿವರಿಸಿದೆ.

ಈ ದೇಶಗಳು ಕಲ್ಲಿದ್ದಲು ಬಳಕೆಯನ್ನು ಕಡಿತಗೊಳಿಸುವಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿವೆ. ಒಂದೆಡೆ ಇದು ಈ ದೇಶಗಳಿಗೆ ಅಗ್ಗದ ವಿದ್ಯುತ್ ಮೂಲವಾಗಿದ್ದರೆ ಇನ್ನೊಂದೆಡೆ ಹಲವು ಮಂದಿ ಉದ್ಯೋಗಕ್ಕಾಗಿ ಕಲ್ಲಿದ್ದಲು ಉದ್ಯಮವನ್ನು ಅವಲಂಬಿಸಿದ್ದಾರೆ ಎಂದು ಹೇಳಿದೆ.

ಭಾರತ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಸೇರಿದಂತೆ 11 ದೇಶಗಳು ಅಧಿಕ ಉಷ್ಣಾಂಶ, ಹವಾಮಾನ ವೈಪರೀತ್ಯ, ಸಾಗರಗಳ ಗತಿಯಲ್ಲಿ ವ್ಯತ್ಯಯದಂಥ ಸಮಸ್ಯೆಗಳನ್ನು ಎದುರಿಸಲಿವೆ. ಇದು ವಿದ್ಯುತ್, ಆಹಾರ, ನೀರು ಮತ್ತು ಆರೋಗ್ಯ ಭದ್ರತೆ ಮೇಲೆ ಪರಿಣಾಮ ಬೀರಲಿದೆ. ಪದೇ ಪದೇ ತೀವ್ರ ಚಂಡಮಾರುತಗಳು ಜಲಮೂಲಗಳನ್ನು ಮಲಿನಗೊಳಿಸಲಿದ್ದು, ಸೊಳ್ಳೆಗಳು ಹೆಚ್ಚಿ ಇವು ರೋಗ ಹರಡಲಿವೆ ಎಂದು ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News