ಅಮೆರಿಕದಲ್ಲಿಯ ಅಪರೂಪದ ರೋಗಕ್ಕೂ ಭಾರತದ ʼಸ್ಪ್ರೇʼ ಗೂ ಸಂಬಂಧ ಕಲ್ಪಿಸಿದ ತನಿಖೆ

Update: 2021-10-24 13:32 GMT
photo: AP

ಹೊಸದಿಲ್ಲಿ,ಅ.24: ವೈದ್ಯಕೀಯ ತನಿಖೆಯೊಂದು ಭಾರತದಲ್ಲಿ ತಯಾರಾಗಿರುವ ಅರೋಮಾಥೆರಪಿ (ಸುಗಂಧ ಚಿಕಿತ್ಸೆ) ಸ್ಪ್ರೇ ಹಾಗೂ ಅಪರೂಪದ ರೋಗವಾಗಿರುವ ಮೆಲಿಯೊಡೊಸಿಸ್ಗೂ ತಳುಕು ಹಾಕಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ವಾಲ್ಮಾರ್ಟ್ ಮಳಿಗೆಗಳು ಅದನ್ನು ಮಾರಾಟದಿಂದ ಹಿಂದೆಗೆದುಕೊಂಡಿವೆ. ಈ ರೋಗದಿಂದ ಅಮೆರಿಕದಲ್ಲಿ ಕನಿಷ್ಠ ನಾಲ್ವರು ಅಸ್ವಸ್ಥರಾಗಿದ್ದು,ಎರಡು ಸಾವುಗಳು ಸಂಭವಿಸಿರಬಹುದು ಎನ್ನಲಾಗಿದೆ. ಅಪರೂಪದ,ಆದರೆ ಮಾರಣಾಂತಿಕ ರೋಗ ಮೆಲಿಯೊಡೊಸಿಸ್ ಅನ್ನು ಉಂಟು ಮಾಡುವ ಬರ್ಖೊಲ್ಡೇರಿಯಾ ಸೂಡೊಮಲ್ಲೈ ಎಂಬ ಬ್ಯಾಕ್ಟೀರಿಯಾವನ್ನು ಈ ಸ್ಪ್ರೇ ಒಳಗೊಂಡಿರುವುದು ವರದಿಯಾಗಿದೆ ಎಂದು ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ)ವು ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ಜುಲೈನಲ್ಲಿ ಮೆಲಿಯೊಡೊಸಿಸ್ಗೆ ತುತ್ತಾಗಿದ್ದ ಜಾರ್ಜಿಯಾದ ನಿವಾಸಿಯ ಮನೆಯಲ್ಲಿ ಅಕ್ಟೋಬರ್ 6ರಂದು ಈ ಸ್ಪ್ರೇ ಪತ್ತೆಯಾಗಿದೆ. ಸ್ಪ್ರೇ ಭಾರತದಲ್ಲಿ ತಯಾರಾಗಿದೆ ಎನ್ನುವುದನ್ನು ಬಿಟ್ಟರೆ ಅದರ ಮೂಲಗಳ ಕುರಿತು ಯಾವುದೇ ಇತರ ಮಾಹಿತಿಗಳನ್ನು ಬಹಿರಂಗಗೊಳಿಸಲಾಗಿಲ್ಲ.

ಈ ವರ್ಷದ ಫೆಬ್ರವರಿಯಿಂದ ಅ.21ರವರೆಗೆ ಕಂಪನಿಯ ವೆಬ್ಸೈಟ್ನಲ್ಲಿಯ 55 ವಾಲ್ಮಾರ್ಟ್ ಮಳಿಗೆಗಳಲ್ಲಿ ಈ ಸ್ಪ್ರೇ ಮಾರಾಟವಾಗಿತ್ತು. ಅ.21ರಿಂದ ವಾಲ್ಮಾರ್ಟ್ ಈ ಸ್ಪ್ರೇ ಮತ್ತು ಸಂಬಂಧಿತ ಉತ್ಪನ್ನಗಳ ಮಾರಾಟವನ್ನು ಸ್ಥಗಿತಗೊಳಿಸಿದೆ. ಈ ರೂಮ್ ಸ್ಪ್ರೇ ಅನ್ನು ‘ಪ್ಲೋರಾ ಕ್ಲಾಸಿಕ್ ಇಂಕ್ ’ತಯಾರಿಸಿದ್ದು,‘ಬೆಟರ್ ಹೋಮ್ಸ್ ಆ್ಯಂಡ್ ಗಾರ್ಡನ್ಸ್ ’ಬ್ರಾಂಡ್ನಡಿ ಅದನ್ನು ಮಾರಾಟ ಮಾಡಲಾಗಿತ್ತು ಎಂದು ವಾಲ್ಮಾರ್ಟ್ ವಕ್ತಾರರು ಸುದ್ದಿಸಂಸ್ಥೆಗೆ ತಿಳಿಸಿದರು.

ಫ್ಲೋರಾ ಕ್ಲಾಸಿಕ್ಸ್ ಅಮೆರಿಕದ ಕ್ಯಾಲಿಫೋರ್ನಿಯಾದ ವಿಲ್ಡೊಮಾರ್ ನಲ್ಲಿ ನೋಂದಾಯಿತಗೊಂಡಿದೆ ಎನ್ನುವುದನ್ನು ಆನ್ಲೈನ್ ಶೋಧವು ತೋರಿಸಿದೆ. ಫ್ಲೋರಾ ಕ್ಲಾಸಿಕ್ಸ್ ಭಾರತದಲ್ಲಿ ಪರಿಮಳ ವಸ್ತುಗಳು ಮತ್ತು ಗೃಹಾಲಂಕಾರ ಉತ್ಪನ್ನಗಳ ಬೃಹತ್ ತಯಾರಕರು ಮತ್ತು ರಫ್ತುದಾರರ ಸಾಲಿನಲ್ಲಿರುವ ತೂತ್ತುಕುಡಿಯ ರಮೇಶ ಫ್ಲವರ್ಸ್ ಪ್ರೈ.ಲಿ.ಜೊತೆ ಸಂಯೋಜನೆಯನ್ನು ಹೊಂದಿದೆ. 2018ರಿಂದ ಅದು ಜರ್ಮನಿಯ ಗಾಲಾ ಕ್ಯಾಂಡಲ್ಸ್ ಗ್ರೂಪ್ನ ಭಾಗವಾಗಿದೆ ಎಂದು ವೆಬ್ಸೈಟ್ನಲ್ಲಿ ವಿವರಿಸಲಾಗಿದೆ.

ಮೇ ತಿಂಗಳಿನಲ್ಲಿ ದೂರುಗಳು ಬರಲಾರಂಭಿಸಿದ ಬಳಿಕ ಸಿಡಿಸಿ ರೋಗಿಗಳ ರಕ್ತದ ಮಾದರಿಗಳು,ಅವರ ನಿವಾಸಗಳ ಸುತ್ತುಮುತ್ತಲಿನ ಮಣ್ಣು,ನೀರು ಮತ್ತು ಬಳಕೆದಾರ ಉತ್ಪನ್ನಗಳ ಪರೀಕ್ಷೆ ನಡೆಸುತ್ತಿದೆ.

 ಈ ವಾರ ಬೆಟರ್ ಹೋಮ್ಸ್ ಆ್ಯಂಡ್ ಗಾರ್ಡನ್ ಸ್ಪ್ರೇ ಬರ್ಖೊಲ್ಡೇರಿಯಾ ಸೂಡೊಮಲ್ಲೈ ಬ್ಯಾಕ್ಟಿರಿಯಾವನ್ನು ಒಳಗೊಂಡಿರುವುದು ಪರೀಕ್ಷೆಯಲ್ಲಿ ಸ್ಪಷ್ಟವಾಗಿದ್ದು,ವಂಶವಾಹಿ ವಿಶ್ಲೇಷಣೆಯು ಇದು ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿದ್ದ ತಳಿಗಳನ್ನು ಹೋಲುತ್ತದೆ ಎನ್ನುವುದನ್ನು ತೋರಿಸಿದೆ ಎಂದು ಸಿಡಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕದಲ್ಲಿ ಸಾಮಾನ್ಯವಾಗಿ ವಾರ್ಷಿಕ 12 ಮೆಲಿಯೊಡೊಸಿಸ್ ಪ್ರಕರಣಗಳು ವರದಿಯಾಗುತ್ತವೆ. ಇದನ್ನುಂಟು ಮಾಡುವ ಬ್ಯಾಕ್ಟೀರಿಯಾವನ್ನು ಪತ್ತೆ ಹಚ್ಚುವುದು ಕಷ್ಟವಾಗಿದ್ದು,ಅದು ತೋರಿಸುವ ಲಕ್ಷಣಗಳನ್ನು ಹೆಚ್ಚಿನ ಸಂದರ್ಭಗಳಲ್ಲಿ ಇತರ ರೋಗಗಳ ಲಕ್ಷಣಗಳು ಎಂದು ತಪ್ಪಾಗಿ ಭಾವಿಸಲಾಗುತ್ತದೆ. ಭಾರತದಲ್ಲಿ ಈ ರೋಗ ಯಾವ ಮಟ್ಟದಲ್ಲಿದೆ ಎನ್ನುವುದಕ್ಕೆ ಯಾವುದೇ ನಿಖರವಾದ ಮಾಹಿತಿಯಿಲ್ಲ. ಆದಾಗ್ಯೂ ಆಕ್ಸ್ಫರ್ಡ್ ವಿವಿಯ ವಿಜ್ಞಾನಿಗಳು 2016ರಲ್ಲಿ ನಡೆಸಿದ್ದ ಅಧ್ಯಯನದಂತೆ ವಿಶ್ವಾದ್ಯಂತ ಸುಮಾರು 1,65,000 ಪ್ರಕರಣಗಳು ಪತ್ತೆಯಾಗುತ್ತಿದ್ದು,ಸುಮಾರು 89,000 (ಶೇ.54) ಸಾವುಗಳು ಸಂಭವಿಸುತ್ತಿವೆ. ಮೆಲಿಯೊಡೊಸಿಸ್ ಭಾರತದಲ್ಲಿ ಎಂಡೆಮಿಕ್ ಸ್ವರೂಪವನ್ನು ಹೊಂದಿದ್ದು,ವಾರ್ಷಿಕ ಸುಮಾರು 52,500 ಜನರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಅಧ್ಯಯನವು ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News