ಇಂಧನ ಬೆಲೆ ಇಳಿಸಲು ಆಗ್ರಹಿಸಿ ನ.5ರಂದು ಲಾರಿ ಮಾಲಕರಿಂದ ವಿಧಾನಸೌಧ ಮುತ್ತಿಗೆ

Update: 2021-10-24 15:41 GMT

ಬೆಂಗಳೂರು, ಅ. 24: ರಾಜ್ಯ ಸರಕಾರ ಈ ಕೂಡಲೇ ಇಂಧನ ಬೆಲೆ ತಗ್ಗಿಸುವಂತೆ ಆಗ್ರಹಿಸಿ ನ.5ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದೆಂದು ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಆಂಡ್ ಏಜೆಂಟ್ಸ್ ಅಸೋಸಿಯೇಷನ್ ತಿಳಿಸಿದೆ.

ರವಿವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ, ಕೋವಿಡ್‍ಆರ್ಥಿಕ ನಷ್ಟ ಅನುಭವಿಸುತ್ತಿದ್ದರೂ ಪ್ರತಿ ನಿತ್ಯ ಡಿಸೇಲ್ ದರ ಏರಿಕೆಯಾಗುತ್ತಿದೆ. ಸದ್ಯ ಡಿಸೇಲ್ ಬೆಲೆ ಲೀಟರ್‍ಗೆ 103 ರೂ.ಇದೆ. 2019ರ ಸೆಪ್ಟೆಂಬರ್‍ನಿಂದ ಈವರೆಗೆ ಡಿಸೇಲ್ ಮೇಲೆ ಒಟ್ಟಾರೆ 35 ರೂ. ಹೆಚ್ಚಳವಾಗಿದೆ ಎಂದು ಆರೋಪಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದಕ್ಕೆ ಹೆಚ್ಚುವರಿ ತೆರಿಗೆ ಹಾಕುತ್ತಿವೆ. ಇದರಿಂದ ಪ್ರತಿ ಕಿಮೀಗೆ 12 ರೂ.ಹೆಚ್ಚಿನ ಹೊರೆ ಬೀಳುತ್ತಿದೆ. ಶೀಘ್ರದಲ್ಲೇ ಈ ದರವನ್ನು ಕಡಿಮೆಗೊಳಿಸದಿದ್ದರೆ ವಿಧಾನಸೌಧ ಹಾಗೂ ಸಾರಿಗೆ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೇಂದ್ರ ಸರಕಾರ ಹಣಕಾಸು ಸಂಸ್ಥೆಗಳಿಗೆ ಅಂದಾಜು 70 ಸಾವಿರ ಕೋಟಿ ರೂ.ನೆರವು ನೀಡಿದೆ. ಆದರೆ, ಫೈನಾನ್ಸ್ ಕಂಪೆನಿಗಳು ಸಾಲ ಪಡೆದಿರುವ ವಾಹನ ಮಾಲಕರಿಗೆ ಅಧಿಕ ಬಡ್ಡಿ ಹಾಕುತ್ತಿವೆ. ವಾಹನಗಳನ್ನು ಜಪ್ತಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಮನನೊಂದು ಮಾಲಕರು ಆತ್ಮಹತ್ಯೆ ಹಾದಿಗೆ ತುಳಿಯುತ್ತಿದ್ದಾರೆ ಎಂದು ಆರೋಪಿಸಿದರು.

ಈ ಸಂಬಂಧ ಕೂಡಲೇ ಸರಕಾರ ಹಣಕಾಸು ಸಂಸ್ಥೆಗಳ ಜತೆ ಚರ್ಚಿಸಬೇಕು ಎಂದ ಅವರು, ಪರವಾನಗಿ, ಪರ್ಮಿಟ್ ಮತ್ತು ಎಸಿ ಅವಧಿಯನ್ನು ಅ.31ರವರೆಗೆ ವಿಸ್ತರಿಸಿದ್ದರೂ ಸಾರಿಗೆ ಇಲಾಖೆ ಅಧಿಕಾರಿಗಳು ತೆರಿಗೆ ಕಟ್ಟವಂತೆ ನಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಶ್ವಥ್ ಮಾತನಾಡಿ, ಹೊಸ ವಾಹನಗಳು, ಬಿಡಿಭಾಗಗಳು, ಡೀಸೆಲ್ ಮತ್ತು ಟೋಲ್ ಸೇರಿ ಹಲವು ತೆರಿಗಳ ಭಾರದಿಂದ ಸರಕು ಸಾಗಣೆ ಉದ್ಯಮ ನಷ್ಟದಲ್ಲಿದೆ. ಸಾವಿರಾರು ಮಾಲಕರು ವಾಹನಗಳ ದಾಖಲೆಗಳನ್ನೇ ಸಾರಿಗೆ ಇಲಾಖೆಗೆ ಹಿಂತಿರುಗಿಸುತ್ತಿದ್ದಾರೆ. 

ಸರಕು ಸಾಗಣೆ ಉದ್ಯಮ ಶೇ.70 ಡಿಸೇಲ್ ಮೇಲೆ ಆವಲಂಬಿತವಾಗಿದೆ. ದರ ಏರಿಕೆಯಿಂದ ಮಾಲಕರು, ಚಾಲಕರು, ಹಮಾಲಿಗಳು ಹಾಗೂ ಮೆಕಾನಿಕ್‍ಗಳ ಕುಟುಂಬಗಳು ತುತ್ತು ಅನ್ನಕ್ಕಾಗಿ ಪರದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

10 ರೂ. ತಗ್ಗಿಸಲು ಪಟ್ಟು: ಪ್ರತಿ ಲೀಟರ್ ಡಿಸೇಲ್ ಬೆಲೆಯನ್ನು 10 ರೂ.ಕಡಿಮೆ ಮಾಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮುಂದುವರೆಯಲಿದೆ ಎಂದು ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಆಂಡ್ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಎಚ್ಚರಿಕೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News