ಸಮೀರ್ ವಾಂಖೆಡೆ ವಿರುದ್ಧ ತನಿಖೆ ಆರಂಭಿಸಿದ ಪೊಲೀಸರು:ಮುಂಬೈ ತಲುಪಿದ ಎನ್ ಸಿಬಿ ತಂಡ

Update: 2021-10-27 08:52 GMT

ಮುಂಬೈ: ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ವಿರುದ್ಧದ ಆರೋಪಗಳ ತನಿಖೆಗೆ ಮುಂಬೈ ಪೊಲೀಸರು ಎಸಿಪಿ ಮಟ್ಟದ ಅಧಿಕಾರಿ ಮಿಲಿಂದ್ ಖೇತ್ಲೆ ಅವರನ್ನು ನೇಮಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಬುಧವಾರ ತಿಳಿಸಿವೆ.

ವಾಂಖೆಡೆ ವಿರುದ್ಧ ಬಂದಿರುವ ಎಲ್ಲಾ ದೂರುಗಳನ್ನು ಖೇತ್ಲೆ ತನಿಖೆ ನಡೆಸಲಿದ್ದಾರೆ. ಮುಂಬೈನ ನಾಲ್ಕು ಪೊಲೀಸ್ ಠಾಣೆಗಳಲ್ಲಿ ಇದುವರೆಗೆ ಇಂತಹ ದೂರುಗಳು ಬಂದಿವೆ ಎಂದು ಮೂಲಗಳು ತಿಳಿಸಿವೆ.

ಆದರೆ, ಮುಂಬೈ ಪೊಲೀಸರು ವಾಂಖೆಡೆ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ.

ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ವಾಂಖೆಡೆ, ಗೋಸಾವಿ ಹಾಗೂ  ಇತರ ಕೆಲವು ಎನ್‌ಸಿಬಿ ಅಧಿಕಾರಿಗಳು ಬಾಲಿವುಡ್ ನಟ ಶಾರುಖ್ ಖಾನ್‌ ಪುತ್ರ ಆರ್ಯನ್ ಖಾನ್ ಬಿಡುಗಡೆ ಮಾಡಲು ಶಾರುಖ್ ರಿಂದ 25 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂದು ಕಿರಣ್ ಗೋಸಾವಿಯ ವೈಯಕ್ತಿಕ ಅಂಗರಕ್ಷಕ ಹಾಗೂ ಮುಂಬೈ ಕ್ರೂಸ್ ಶಿಪ್ ದಾಳಿಯ ಸ್ವತಂತ್ರ ಸಾಕ್ಷಿದಾರನಾಗಿರುವ ಪ್ರಭಾಕರ್ ಸೈಲ್ ಆರೋಪಿಸಿದ್ದರು.

ಆದಾಗ್ಯೂ, ಮುಂಬೈ ಪೊಲೀಸರು ವಾಂಖೆಡೆ ವಿರುದ್ಧ ಯಾವ ದೂರುಗಳನ್ನು ಸ್ವೀಕರಿಸಿದ್ದಾರೆ ಎಂಬುದನ್ನು ವಿವರಿಸಿಲ್ಲ.

ಏತನ್ಮಧ್ಯೆ, ಮುಂಬೈನ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ  ಸಾಕ್ಷಿಯಾಗಿದ್ದ ಪ್ರಭಾಕರ್ ಸೈಲ್ ಅವರು ಮಾಡಿರುವ ಭ್ರಷ್ಟಾಚಾರದ ಆರೋಪಗಳ ತನಿಖೆಗಾಗಿ ಎನ್‌ಸಿಬಿಯ ಐವರು ಸದಸ್ಯರ ತಂಡವು ಬುಧವಾರ ಮುಂಬೈಗೆ ತಲುಪಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.

ಎನ್‌ಸಿಬಿಯ ಡೆಪ್ಯುಟಿ ಡೈರೆಕ್ಟರ್ ಜನರಲ್ (ಡಿಡಿಜಿ) ಜ್ಞಾನೇಶ್ವರ್ ಸಿಂಗ್ ಹಾಗೂ  ಇತರ  ನಾಲ್ವರುಎನ್‌ಸಿಬಿ ಅಧಿಕಾರಿಗಳು ತಂಡವನ್ನು ಮುನ್ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News