ರೈತರ ವಿರುದ್ಧ ಬಲಪ್ರಯೋಗಕ್ಕೆ ಬಿಜೆಪಿ ಸದಸ್ಯರಿಗೆ ಕುಮ್ಮಕ್ಕು: ಖಟ್ಟರ್‌ ವಿರುದ್ಧ ಕೋರ್ಟ್‌ ನಲ್ಲಿ ಪಿಐಎಲ್

Update: 2021-10-27 12:49 GMT

ಹೊಸದಿಲ್ಲಿ: ಪ್ರತಿಭಟನಾನಿರತ ರೈತರ ಮೇಲೆ ಬಲಪ್ರಯೋಗಿಸಲು ಬಿಜೆಪಿ ಸದಸ್ಯರನ್ನು ಪ್ರಚೋದಿಸಿದ  ಆರೋಪ ಎದುರಿಸುತ್ತಿರುವ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ವಿರುದ್ಧ ಎಫ್‍ಐಆರ್ ದಾಖಲಿಸಬೇಕೆಂದು ಕೋರಿ ವಕೀಲ ಅಮಿತ್ ಸಾಹ್ನಿ ಎಂಬವರು ದಿಲ್ಲಿ ನ್ಯಾಯಾಲಯದಲ್ಲಿ ಬುಧವಾರ ಪಿಐಎಲ್ ದಾಖಲಿಸಿದ್ದಾರೆ.

ಅಕ್ಟೋಬರ್ 3ರಂದು ಮುಖ್ಯಮಂತ್ರಿಯ ಚಂಡೀಗಢ ನಿವಾಸದಲ್ಲಿ ಪಕ್ಷದ ಕಿಸಾನ್ ಮೋರ್ಚಾ ಸಭೆ ನಡೆದ ಸಂದರ್ಭ  ಖಟ್ಟರ್ ಹಾಗೂ ಬಿಜೆಪಿ ಸದಸ್ಯರೊಬ್ಬರ ನಡುವೆ ನಡೆದಿದೆಯೆನ್ನಲಾದ ಸಂಭಾಷಣೆಯ ವಿವಾದಾತ್ಮಕ ವೀಡಿಯೋವೊಂದಿದೆ ಎಂದು ಅರ್ಜಿದಾರ ಸಾಹ್ನಿ ತಮ್ಮ ಪಿಐಎಲ್‍ನಲ್ಲಿ ಹೇಳಿದ್ದಾರೆ.

"ಈ ವೀಡಿಯೋದಲ್ಲಿ ಖಟ್ಟರ್ ಅವರು ಪ್ರತಿಭಟನಾನಿರತ ರೈತರ ವಿರುದ್ಧ ಬಲಪ್ರಯೋಗಿಸುವಂತೆ ಹೇಳಿದ್ದರು. ಹರ್ಯಾಣಾದ ಉತ್ತರ ಮತ್ತು ಪಶ್ಚಿಮದ ಪ್ರತಿ ಜಿಲ್ಲೆಯಲ್ಲಿ 500-600-1000 ಸ್ವಯಂಸೇವಕರ ತಂಡ ರಚಿಸಿ ಅವುಗಳ ಸದಸ್ಯರು ಲಾಠಿ, ಜೈಲು ಎದುರಿಸಲು ಸಿದ್ಧವಾಗಬೇಕು, ಇದು ಅವರನ್ನು ದೊಡ್ಡ ನಾಯಕರನ್ನಾಗಿಸುತ್ತದೆ" ಎಂದು ಹೇಳಿದ್ದರು ಎಂದು ಅರ್ಜಿದಾರರು ತಮ್ಮ ಪಿಐಎಲ್‍ನಲ್ಲಿ ವಿವರಿಸಿದ್ದಾರೆ.

ಖಟ್ಟರ್ ಅವರು ಐಪಿಸಿಯ ಸೆಕ್ಷನ್ 153, 153-ಎ ಹಾಗೂ 505 ಅನ್ವಯ ಅಪರಾಧವೆಸಗಿದ್ದಾರೆ ಎಂದು ಪಿಐಎಲ್‍ನಲ್ಲಿ ಆರೋಪಿಸಲಾಗಿದೆ. ಈ ಪಿಐಎಲ್ ಮೇಲಿನ ವಿಚಾರಣೆ ನಾಳೆ ನಡೆಯುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News