2013ರ ಪಾಟ್ನಾ ಸರಣಿ ಸ್ಫೋಟ ಪ್ರಕರಣ:10 ಆರೋಪಿಗಳ ಪೈಕಿ 9 ಮಂದಿ ದೋಷಿ ಎಂದ ಎನ್‌ಐಎ ನ್ಯಾಯಾಲಯ

Update: 2021-10-27 17:36 GMT
ಸಂಗ್ರಹ ಚಿತ್ರ: Indian express

ಪಾಟ್ನಾ,ಅ.27: ಏಳು ವರ್ಷಗಳ ಹಿಂದೆ ಇಲ್ಲಿ ಆಗ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ರ‍್ಯಾಲಿ ನಡೆಯುತ್ತಿದ್ದ ಸ್ಥಳದಲ್ಲಿ ಸಂಭವಿಸಿದ್ದ ಸರಣಿ ಸ್ಫೋಟಗಳ ಪ್ರಕರಣದಲ್ಲಿ ಒಂಭತ್ತು ಜನರನ್ನು ತಪ್ಪಿತಸ್ಥರೆಂದು ಬುಧವಾರ ಘೋಷಿಸಿರುವ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಗುರ್ವಿಂದರ್ ಮೆಹ್ರೋತ್ರಾ ಅವರು ಸಾಕ್ಷಾಧಾರಗಳ ಕೊರತೆಯಿಂದಾಗಿ ಓರ್ವ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ.

 ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು 11 ಜನರ ವಿರುದ್ಧ ಆರೋಪಪಟ್ಟಿಗಳನ್ನು ಸಲ್ಲಿಸಿತ್ತು. ಈ ಪೈಕಿ ಓರ್ವ ಬಾಲಾಪರಾಧಿಯಾಗಿದ್ದು,ಆತನ ಪ್ರಕರಣವನ್ನು ಬಾಲನ್ಯಾಯ ಮಂಡಳಿಗೆ ಒಪ್ಪಿಸಲಾಗಿದೆ. ಇಂದು ಒಂಭತ್ತು ಜನರನ್ನು ತಪ್ಪಿತಸ್ಥರೆಂದು ಪ್ರಕಟಿಸಲಾಗಿದ್ದು,ಓರ್ವನನ್ನು ಖುಲಾಸೆಗೊಳಿಸಲಾಗಿದೆ. ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯವು ನ.1ರಂದು ಘೋಷಿಸಲಿದೆ ಎಂದು ವಿಶೇಷ ಸರಕಾರಿ ಅಭಿಯೋಜಕ ಲಾಲನ್ ಪ್ರಸಾದ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಇಮ್ತಿಯಾಝ್ ಅನ್ಸಾರಿ,ಮುಜಿಬುಲ್ಲಾ,ಹೈದರ್ ಅಲಿ,ಫಿರೋಜ್ ಅಸ್ಲಾಂ,ಉಮರ್ ಅನ್ಸಾರಿ, ಇಫ್ತೆಕಾರ್,ಅಹ್ಮದ್ ಹುಸೇನ್,ಉಮರ್ ಸಿದ್ದಿಕಿ ಮತ್ತು ಅಝರುದ್ದೀನ್ ಅವರು ತಪ್ಪಿತಸ್ಥರಾಗಿದ್ದು,ಫಕ್ರುದ್ದೀನ್ ಖುಲಾಸೆಗೊಂಡಿರುವ ಆರೋಪಿಯಾಗಿದ್ದಾನೆ.

ಬಿಜೆಪಿಯ ಪ್ರಧಾನಿ ಹುದ್ದೆಯ ಅಭ್ಯರ್ಥಿಯೆಂದು ಘೋಷಿಸಲ್ಪಟ್ಟಿದ್ದ ಮೋದಿಯವರು 2013,ಅ.27ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ‘ಹೂಂಕಾರ ರ‍್ಯಾಲಿ ’ಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಸರಣಿ ಸ್ಫೋಟಗಳು ಸಂಭವಿಸಿ ಆರು ಜನರು ಮೃತಪಟ್ಟಿದ್ದರು ಮತ್ತು ಇತರ ಹಲವಾರು ಜನರು ಗಾಯಗೊಂಡಿದ್ದರು.

ಯಾವುದೇ ಭಯೋತ್ಪಾದಕ ಸಂಘಟನೆ ಸರಣಿ ಸ್ಫೋಟಗಳ ಹೊಣೆಯನ್ನು ಹೊತ್ತುಕೊಂಡಿರಲಿಲ್ಲ. ಆದರೆ ಸಿಮಿ ಮತ್ತು ಅದರ ಹೊಸ ಅವತಾರ ಇಂಡಿಯನ್ ಮುಜಾಹುದೀನ್ ಕೈವಾಡವಿರುವ ಬಗ್ಗೆ ಶಂಕಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News