ರೂಪಾಂತರ ಕೋವಿಡ್ ಸೋಂಕು: ಬಿಬಿಎಂಪಿ ಬಿಗಿ ಕ್ರಮ

Update: 2021-10-27 16:05 GMT

ಬೆಂಗಳೂರು, ಅ.27: ರೂಪಾಂತರ ಕೋವಿಡ್ ಸೋಂಕು ಎವೈ 4.2 ಆತಂಕ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಪುನಃ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಬಿಬಿಎಂಪಿ ಚಿಂತನೆ ನಡೆಸಿದೆ.

ಈಗಾಗಲೇ ಆರೋಗ್ಯ ಇಲಾಖೆ, ತಜ್ಞರ ಅಭಿಪ್ರಾಯ ಪಡೆದಿರುವ ಬಿಬಿಎಂಪಿ, ಕಠಿಣ ಕ್ರಮಗಳ ಜಾರಿಗೊಳಿಸಲು ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯವಾಗಿ ನಗರಲ್ಲೆಡೆ ಅಧಿಕ ಪರೀಕ್ಷೆಗಳನ್ನು ನಡೆಸಿ ಜಿನೋಮ್‍ಸೀಕ್ವೆಂನ್ಸಿಂಗ್ ಪರೀಕ್ಷೆಗೆ ಒಳಪಡಿಸುವುದು. ಆಸ್ಪತ್ರೆಗೆ ದಾಖಲಾಗುತ್ತಿರುವ ಸಂಖ್ಯೆ, ಸಂಪರ್ಕಿತರ ಸಂಖ್ಯೆ ಮೇಲೆ ನಿಗಾ, ಎವೈ 4.2 ಸಬ್‍ವೇರಿಯಂಟ್ ಬಗ್ಗೆ ಹೆಚ್ಚಿನ ಅಧ್ಯಯನಕ್ಕೂ ಪಾಲಿಕೆ ಮುಂದಾಗಿದೆ.

ಅದೇ ರೀತಿ, ಸಂಪರ್ಕಿತರ ಐಸೋಲೇಶನ್, ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೊಳಿಸಿರುವ ಕೊರೋನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಮಾಸ್ಕ್, ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು, ಪ್ರತಿಯೊಬ್ಬ ಅರ್ಹರಿಗೂ ಶೀಘ್ರದಲ್ಲೇ ಲಸಿಕೆ ಹಾಕುವ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದೆ.

ಜಿನೋಮ್‍ಸೀಕ್ವೆನ್ಸಿಂಗ್ ಪರೀಕ್ಷೆಯಲ್ಲಿ ನಗರದಲ್ಲಿ ರೂಪಾಂತರ 3 ಪ್ರಕರಣ ಪತ್ತೆಯಾಗಿದೆ. ಇನ್ನು, ರಾಜ್ಯದಲ್ಲಿ ಒಟ್ಟು 7 ಪ್ರಕರಣ ದೃಢಪಟ್ಟಿದೆ. ಹೀಗಾಗಿ, ರೂಪಾಂತರಿ ವೈರಸ್‍ಪತ್ತೆಯಾಗಿರುವ ಲ್ಯಾಬ್ ತಜ್ಞರೊಂದಿಗೆ ನಿರಂತರ ಚರ್ಚೆ ಸೇರಿದಂತೆ ಇನ್ನಿತರೆ ಕ್ರಮಗಳನ್ನು ಕೈಗೆತ್ತಿಕೊಳ್ಳಲು ಬಿಬಿಎಂಪಿ ನಿರ್ಧಾರ ಮಾಡಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News