ಗೋವಾ: ಪೋಸ್ಟರ್, ಹೋರ್ಡಿಂಗ್ ನ ಮಮತಾ ಬ್ಯಾನರ್ಜಿ ಭಾವಚಿತ್ರ ವಿರೂಪ

Update: 2021-10-27 17:11 GMT

ಮುಂಬೈ, ಅ. 27: ಗೋವಾದಲ್ಲಿ ಅಳವಡಿಸಲಾಗಿರುವ ಹಲವು ಹೋರ್ಡಿಂಗ್ ಹಾಗೂ ಪೋಸ್ಟರ್ ಗಳಲ್ಲಿನ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭಾವಚಿತ್ರಗಳನ್ನು ವಿರೂಪಗೊಳಿಸಲಾಗಿದೆ. ಮಮತಾ ಬ್ಯಾನರ್ಜಿ ಅವರು ಗೋವಾಕ್ಕೆ ಭೇಟಿ ನೀಡುವ ಒಂದು ದಿನ ಮುನ್ನ ಈ ಕೃತ್ಯ ನಡೆದಿದೆ.

ಈ ಕೃತ್ಯವನ್ನು ಬುಧವಾರ ಖಂಡಿಸಿರುವ ತೃಣಮೂಲ ಕಾಂಗ್ರೆಸ್, ಇದು ಬಿಜೆಪಿಯ ಅಸಹಿಷ್ಣತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದೆ.

ಗೋವಾದಲ್ಲಿ ಮುಂದಿನ ವರ್ಷ ವಿಧಾನ ಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಗೋವಾಕ್ಕೆ ಭೇಟಿ ನೀಡಲಿದ್ದಾರೆ. ಗೋವಾ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ತನ್ನ ನಿರ್ಧಾರವನ್ನು ತೃಣಮೂಲ ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ತನ್ನ ಪಾದದ ಅಡಿಯಲ್ಲಿ ಹಾಕಿ ಹೊಸಕುತ್ತಿರುವ ವ್ಯಂಗ್ಯಚಿತ್ರವನ್ನು ತೃಣಮೂಲ ಕಾಂಗ್ರೆಸ್ ಪಕ್ಷದ ಗೋವಾ ಘಟಕ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದೆ ಎಂದು ಬಿಜೆಪಿ ರವಿವಾರ ಆರೋಪಿಸಿತ್ತು. 

ತೃಣಮೂಲ ಕಾಂಗ್ರೆಸ್ ತನ್ನ ಟ್ವೀಟ್ ಅನ್ನು ಕೂಡಲೇ ಅಳಿಸಬೇಕು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕಚೇರಿ ಹೇಳಿಕೆ ಪ್ರತಿಪಾದಿಸಿತ್ತು. ಮುಖ್ಯಮಂತ್ರಿ ಅವರ ಕಚೇರಿ ಆ ಟ್ವೀಟ್ ನ ಸ್ಕ್ರೀನ್ ಶಾಟ್ ಅನ್ನು ಪ್ರಚಾರ ಮಾಡಿತ್ತು. ಅನಂತರ ಗೋವಾದಲ್ಲಿ ತೃಣಮೂಲ ಕಾಂಗ್ರೆಸ್ ಹಾಕಿದ ಮಮತಾ ಬ್ಯಾನರ್ಜಿ ಅವರ ಭಾವಚಿತ್ರ ಇರುವ ಹಲವು ಹೋರ್ಡಿಂಗ್ ಹಾಗೂ ಪೋಸ್ಟರ್ ಗಳನ್ನು ಹಾನಿಗೊಳಿಸಲಾಗಿದೆ. ಪತ್ರಕರ್ತರೊಂದಿಗೆ ಬುಧವಾರ ಮಾತನಾಡಿದ ತೃಣಮೂಲ ಕಾಂಗ್ರೆಸ್ ನ ರಾಜ್ಯ ಸಭಾ ಸದಸ್ಯ ಡೆರಿಕ್ ಒಬ್ರಿಯಾನ್, ‘‘ದೇಶದಲ್ಲಿ ಈಗಿರುವ ಏಕೈಕ ಮಹಿಳಾ ಮುಖ್ಯಮಂತ್ರಿಗೆ ಅವಮಾನ ಮಾಡಲಾಗಿದೆ. ಇದು ಗೋವಾದ ಸಂಸ್ಕೃತಿ ಅಲ್ಲ ಎಂಬುದು ನಮಗೆ ತಿಳಿದಿದೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News