ಮಾತಾಡ್ ಮಾತಾಡ್ ಕನ್ನಡ!

Update: 2021-10-28 05:14 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿ ಖಾತೆಯನ್ನು ವಹಿಸಿಕೊಂಡ ದಿನಗಳಿಂದ ವಿ. ಸುನೀಲ್ ಕುಮಾರ್, ಕನ್ನಡದ ಬಗ್ಗೆ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ‘ಕನ್ನಡಕ್ಕಾಗಿ ನಾವು’ ಅಭಿಯಾನದ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲಿ ಕನ್ನಡದ ಕುರಿತಂತೆ ಆಸಕ್ತಿ, ಜಾಗೃತಿಯನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಕನ್ನಡ ಮಾತನಾಡುವ ಸ್ಪರ್ಧೆ, ಕನ್ನಡ ಗಾಯನ ಕಾರ್ಯಕ್ರಮಗಳ ಮೂಲಕ ಮುಖ್ಯವಾಗಿ ಯುವಕರಲ್ಲಿ, ವಿದ್ಯಾರ್ಥಿಗಳಲ್ಲಿ ಕನ್ನಡ ಸ್ಫೂರ್ತಿಯನ್ನು ತುಂಬುವ ಪ್ರಯತ್ನ ನಡೆಸುತ್ತಿದ್ದಾರೆ. ‘ಮಾತಾಡ್ ಮಾತಾಡ್ ಕನ್ನಡ’ ಎಂಬ ಘೋಷಣೆಯ ಮೂಲಕ, ಜನರಲ್ಲಿ ಕನ್ನಡಾಭಿಮಾನವನ್ನು ಹರಡುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅವರು ವಿಭಿನ್ನವಾಗಿ ಆಚರಿಸಲು ಮುಂದಾಗಿರುವುದು ಶ್ಲಾಘನೀಯವಾಗಿದೆ. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುವಿಕೆಯನ್ನೂ ಹೆಚ್ಚು ಪಾರದರ್ಶಕವಾಗಿಸುವ ಪ್ರಯತ್ನವನ್ನು ಸಚಿವರು ಮಾಡಿದ್ದಾರೆ. ಸಾರ್ವಜನಿಕರೂ ಈ ಬಾರಿ ಪ್ರಶಸ್ತಿಗೆ ಹೆಸರುಗಳನ್ನು ಶಿಫಾರಸು ಮಾಡಬಹುದಾಗಿದೆ. ಪರಿಣಾಮವಾಗಿ ರಾಜ್ಯದ ಮೂಲೆ ಮೂಲೆಯಲ್ಲಿರುವ ಎಲೆಮರೆಯಲ್ಲಿರುವ ಪ್ರತಿಭೆಗಳೂ ಗುರುತಿಸುವಂತಾಗುತ್ತದೆ.

ಮೇಲಿನ ಕಾರ್ಯಕ್ರಮದಿಂದ ಈಗಾಗಲೇ ಕನ್ನಡ ಮಾತನಾಡುವವರ ನಡುವೆ ಕನ್ನಡವನ್ನು ಜಾಗೃತಿಗೊಳಿಸಿದಂತಾಗುತ್ತದೆ. ಆದರೆ ಇಂಗ್ಲಿಷ್ ಮಾಧ್ಯಮಗಳಿಗೆ ಬಲಿಯಾಗಿ ಕನ್ನಡವನ್ನೇ ದೂರ ಮಾಡಿರುವ ಕನ್ನಡಿಗರನ್ನು ಮತ್ತೆ ಕನ್ನಡ ಭಾಷೆಗೆ ಮರಳುವಂತೆ ಮಾಡುವುದು ಇದರಿಂದ ಸಾಧ್ಯವೇ? ಈ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಮಾಧ್ಯಮಗಳಲ್ಲಿ ಕಲಿಯುತ್ತಿರುವ ಅಥವಾ ಕನ್ನಡ ಭಾಷೆಯಿಂದ ಸಂಪೂರ್ಣ ದೂರ ಸರಿದಿರುವ ಜನರನ್ನೂ ಪಾಲ್ಗೊಳ್ಳುವಂತೆ ಮಾಡದೇ ಇದ್ದರೆ ಕನ್ನಡವನ್ನು ಜೀವಂತವಾಗಿರಿಸುವುದು ಸಾಧ್ಯವಿಲ್ಲ. ಕರ್ನಾಟಕದಲ್ಲಿ ಮನೆ ಭಾಷೆ ಕನ್ನಡವಲ್ಲದ ಜನರ ಸಂಖ್ಯೆ ಬಹುದೊಡ್ಡದಿದೆ. ಇವರೆಲ್ಲ ಕನ್ನಡವನ್ನು ತಮ್ಮದಾಗಿಸಿಕೊಳ್ಳುವುದು ಕನ್ನಡ ಮಾಧ್ಯಮ ಶಾಲೆಗಳಲ್ಲಿ. ಆದರೆ ಈಗಿನ ತಲೆಮಾರು ಕನ್ನಡ ಮಾಧ್ಯಮ ಶಾಲೆಗಳಿಗೆ ಸಂಪೂರ್ಣ ಬೆನ್ನು ಹಾಕಿದೆ. ಇಂಗ್ಲಿಷ್ ಮೀಡಿಯಂನಲ್ಲಿ ಕನ್ನಡವನ್ನು ಒಂದು ಅಪರಿಚಿತ ಭಾಷೆಯಂತೆ ಇವರು ಕಲಿಯುತ್ತಿದ್ದಾರೆ. ಪಿಯುಸಿ ತಲುಪಿದರೂ, ಇವರಿಗೆ ಕನ್ನಡದಲ್ಲಿ ತಪ್ಪಿಲ್ಲದೆ ಪೂರ್ಣ ವಾಕ್ಯವನ್ನು ಬರೆಯುವುದು ಸಾಧ್ಯವಾಗುತ್ತಿಲ್ಲ. ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುತ್ತಿರುವ ಕಾರ್ಯಕ್ರಮಗಳು ಈ ಮಕ್ಕಳನ್ನು ತಲುಪುವ ಬಗೆ ಹೇಗೆ? ಎನ್ನುವುದರ ಬಗ್ಗೆ ನಾವಿಂದು ಆಲೋಚಿಸಬೇಕು. ಈ ನಿಟ್ಟಿನಲ್ಲಿ ಇಲಾಖೆಯೂ ಕಾರ್ಯಕ್ರಮಗಳನ್ನು ರೂಪಿಸಬೇಕು. ಬರೇ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕನ್ನಡವನ್ನು ಉಳಿಸಿ ಬೆಳೆಸಲು ಸಾಧ್ಯವಿಲ್ಲ. ಅವೆಲ್ಲ ಒಂದು ದಿನದ ಸಂಭ್ರಮದಲ್ಲಿ ಮುಗಿದು ಹೋಗುತ್ತವೆ.

ಒಂದು ಕಾಲದಲ್ಲಿ ಸಹಜವಾಗಿ, ಕಾಡಿನಂತೆ ಹರಡಿಕೊಂಡಿದ್ದ ಕನ್ನಡ ಭಾಷೆಯನ್ನು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಕುಂಡದಲ್ಲಿ ನೆಟ್ಟು ಪೋಷಿಸುವ ಪ್ರಯತ್ನ ನಡೆಯುತ್ತಿದೆ. ಕನ್ನಡ ಎಲ್ಲಿಯವರೆಗೆ ಸಾರ್ವಜನಿಕ ಬಳಕೆಯಲ್ಲಿ ಸಕ್ರಿಯವಾಗಿರುತ್ತದೋ ಅಲ್ಲಿಯವರೆಗೆ ಅದು ಉಳಿಯುತ್ತದೆ. ಜನಸಾಮಾನ್ಯರು ದೈನಂದಿನ ಅಗತ್ಯಕ್ಕಾಗಿ ಓಡಾಡುವ ಕಚೇರಿಗಳಲ್ಲಿ, ಮಾರುಕಟ್ಟೆಗಳಲ್ಲಿ, ವಿಧಾನಸೌಧದಲ್ಲಿ, ನ್ಯಾಯಾಲಯಗಳಲ್ಲಿ ಕನ್ನಡ ಜನಪ್ರಿಯವಾದರೆ ಅಥವಾ ಕನ್ನಡವೇ ಕಡ್ಡಾಯವಾದರೆ ಜನರಿಗೂ ಕನ್ನಡದ ಮೇಲೆ ಆತ್ಮವಿಶ್ವಾಸ ಮೂಡುತ್ತದೆ. ಇಂದು ನೋಡಿದರೆ, ರೈಲ್ವೇ ಇಲಾಖೆ, ಬ್ಯಾಂಕು ಮೊದಲಾದ ಪ್ರದೇಶಗಳಲ್ಲಿ ಕನ್ನಡ ಮಾತನಾಡುವವರೇ ಇಲ್ಲ. ಒಂದೋ ಇಂಗ್ಲಿಷ್ ಇಲ್ಲವೇ ಹಿಂದಿ ಭಾಷೆ ಗೊತ್ತಿಲ್ಲದೇ ಇದ್ದರೆ ಇಲ್ಲಿ ವ್ಯವಹಾರ ಕಷ್ಟ. ಅಳಿದುಳಿದ ಕನ್ನಡಿಗರೂ ಕಷ್ಟಪಟ್ಟು ಇಂಗ್ಲಿಷ್ ಅಥವಾ ಹಿಂದಿ ಕಲಿಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ, ಇವರಾದರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮಕ್ಕೆ ಕಳುಹಿಸದೇ ಇನ್ನೇನು ಮಾಡುತ್ತಾರೆ? ಇಂದು ಕನ್ನಡ ಉಳಿದಿರುವುದು ಸರಕಾರಿ ಶಾಲೆಗಳಿಂದ. ಆದರೆ ಕನ್ನಡ ಮಾಧ್ಯಮದ ಕಾರಣಕ್ಕಾಗಿಯೇ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಹಾಗೆಯೇ ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಮೂಲಭೂತ ಸೌಲಭ್ಯಗಳ ಕೊರತೆಗಳು ಎದ್ದು ಕಾಣುತ್ತವೆ. ಕನ್ನಡವನ್ನು ಉಳಿಸಲೇಬೇಕು ಎಂದಾದರೆ ಸರಕಾರಿ ಶಾಲೆಗಳೂ ಉಳಿಯಬೇಕು. ಕನ್ನಡ ಮತ್ತು ಇಂಗ್ಲಿಷ್‌ನ್ನು ಸರಕಾರಿ ಶಾಲೆಗಳಲ್ಲಿ ಜೊತೆ ಜೊತೆಯಾಗಿ ಕಲಿಸಿದರೆ ಕನ್ನಡವೂ ಉಳಿದಂತಾಯಿತು, ಸರಕಾರಿ ಶಾಲೆಗಳು ಉಳಿದಂತಾಯಿತು. ಇದೇ ಸಂದರ್ಭದಲ್ಲಿ, ನ್ಯಾಯಾಧೀಶರಿಗೆ, ನ್ಯಾಯವಾದಿಗಳಿಗೆ, ವೈದ್ಯರಿಗೆ, ರೈಲ್ವೇ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಕನ್ನಡ ಮಾತನಾಡುವ ಸ್ಪರ್ಧೆಯನ್ನು ಏರ್ಪಡಿಸಬೇಕು. ನ್ಯಾಯಾಲಯದಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬಳಸುವುದಕ್ಕೆ ಸೂಚನೆಯನ್ನು ನೀಡಬೇಕು. ದೈನಂದಿನ ಬದುಕಿನಲ್ಲಿ ಕನ್ನಡ ಅನಿವಾರ್ಯವಾದಾಗ ಕನ್ನಡ ಸಹಜವಾಗಿ ಉಳಿದು ಬೆಳೆಯುತ್ತದೆ.

  ಹಾಗೆಯೇ ಸಚಿವರು ಇನ್ನೊಂದು ಮಹತ್ವದ ಅಂಶವನ್ನು ಅರ್ಥ ಮಾಡಿಕೊಳ್ಳಬೇಕು. ಕನ್ನಡವೆಂದರೆ ಕೇವಲ ಭಾಷೆಯಷ್ಟೇ ಅಲ್ಲ. ಕನ್ನಡ ಸಂಸ್ಕೃತಿಯೂ ಹೌದು. ನಾವು ಕನ್ನಡದಲ್ಲಿ ಮಾತನಾಡಿದರೆ ಸಾಕಾಗದು, ಕನ್ನಡದಲ್ಲಿ ಏನನ್ನು ಮಾತನಾಡುತ್ತೇವೆ ಎನ್ನುವುದೂ ಬಹುಮುಖ್ಯವಾಗುತ್ತದೆ. ಸಚಿವ ಸುನೀಲ್ ಕುಮಾರ್ ಅವರು ಈ ಹಿಂದೆ ಮಾಡಿದ ಬಹುತೇಕ ಭಾಷಣಗಳು ಅಚ್ಚ ಕನ್ನಡದಲ್ಲೇ ಇದ್ದವು. ಆದರೆ ಭಾಷಣಗಳು ಪ್ರತಿಪಾದಿಸುವ ವೌಲ್ಯಗಳು ಕನ್ನಡ ಪ್ರತಿಪಾದಿಸುವ ವೌಲ್ಯಗಳಾಗಿರಲಿಲ್ಲ. ಸೂಫಿಗಳು, ಸಂತರು, ವಚನಕಾರರು ರೂಪಿಸಿ ಬೆಳೆಸಿದ ಸೌಹಾರ್ದ ವೌಲ್ಯಗಳನ್ನು ಕನ್ನಡ ಹೊಂದಿದೆ. ಆ ಪರಂಪರೆಯನ್ನು ಅರಿಯದೇ ಕನ್ನಡದಲ್ಲಿ ‘ಹೊಡಿ, ಬಡಿ, ಕೊಲ್ಲು’ ಎಂದು ಜನರ ನಡುವೆ ದ್ವೇಷವನ್ನು ಬಿತ್ತುತ್ತಾ ಕನ್ನಡ ಪರಂಪರೆಯನ್ನು ಎತ್ತಿ ಹಿಡಿಯಲು ಸಾಧ್ಯವಿಲ್ಲ. ಆದುದರಿಂದ, ಮೊದಲು ಕನ್ನಡ ಪರಂಪರೆಯನ್ನು ಜನರ ನಡುವೆ ಹರಡುವ, ಕನ್ನಡದ ಸೌಹಾರ್ದ ಚಿಂತನೆಗಳನ್ನು ಜನರಿಗೆ ಪರಿಚಯಿಸುವ ಕೆಲಸ ನಡೆಯಬೇಕು. ಕನ್ನಡದ ಮೂಲಕ ಮ ನಸ್ಸನ್ನು ಬೆಸೆಯುವ ಕೆಲಸ ಮಾಡಬೇಕು. ಕನ್ನಡ ಸಂಸ್ಕೃತಿಯನ್ನು ಎತ್ತಿ ಹಿಡಿದ ಸೂಫಿ ಚಿಂತನೆಗಳ ಪ್ರತಿನಿಧಿಯಾಗಿರುವ ಬಾಬಾಬುಡಾನ್‌ಗಿರಿಗೆ ಬೆಂಕಿ ಹಚ್ಚಿ, ಜನರ ನಡುವೆ ದ್ವೇಷವನ್ನು ಹಂಚಿ, ಕನ್ನಡದ ಕೆಲಸವನ್ನು ಮಾಡುವುದಕ್ಕೆ ಸಾಧ್ಯವಿಲ್ಲ. ಸೂಫಿಗಳು, ಸೂಫಿ ಚಿಂತನೆಗಳು ಕನ್ನಡ ಪರಂಪರೆಯ ಭಾಗವಾಗಿವೆ. ಅವುಗಳನ್ನು ಉಳಿಸಿ ಬೆಳೆಸುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲಸವೇ ಆಗಿದೆ. ಆದುದರಿಂದ, ಕನ್ನಡದ ಸೌಹಾರ್ದ ಪರಂಪರೆಯನ್ನು ಹಿಡಿದೆತ್ತಿ ನಿಲ್ಲಿಸುವ ಮೂಲಕ ಸಚಿವರು ಕನ್ನಡ ಭಾಷೆಯ ಹಿರಿಮೆಯನ್ನು ವಿಶ್ವಕ್ಕೆ ಸಾರುವ ಕೆಲಸವನ್ನು ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News