ಲಖೀಂಪುರ್ ಪ್ರಕರಣದ ಆರೋಪಿ ಆಶಿಷ್ ಮಿಶ್ರಾ ಆಸ್ಪತ್ರೆಯಲ್ಲಿ ಅಡ್ಡಾಡುತ್ತಿರುವ ವೀಡಿಯೋ ವೈರಲ್ ಆದ ಬಳಿಕ ಮರಳಿ ಜೈಲಿಗೆ

Update: 2021-10-28 06:47 GMT

ಲಕ್ನೋ: ಲಖೀಂಪುರ್ ಖೇರಿಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಎಸ್‍ಯುವಿ ಹರಿಸಿ ನಾಲ್ಕು ಮಂದಿಯ ಸಾವಿಗೆ ಕಾರಣವಾದ ಘಟನೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಷ್ ಮಿಶ್ರಾ ಡೆಂಗ್ಯು ಚಿಕಿತ್ಸೆಗೆಂದು ದಾಖಲಾಗಿದ್ದ ಲಖೀಂಪುರ್ ಖೇರಿ ಜಿಲ್ಲಾಸ್ಪತ್ರೆಯಲ್ಲಿ ಅತ್ತಿತ್ತ ಸಾಗುತ್ತಿರುವುದು ಹಾಗೂ ಅವರಿಗೆ ಕೈಕೋಳ ಕೂಡ ತೊಡಿಸದೇ ಇರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಆಶಿಷ್ ಅವರನ್ನು ಮತ್ತೆ ಕಾರಾಗೃಹಕ್ಕೆ ಕಳುಹಿಸಲಾಗಿದ್ದು ಅಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುವುದು ಎಂದು ತಿಳಿದು ಬಂದಿದೆ.

ಆಸ್ಪತ್ರೆಯಲ್ಲಿ ಅವರು ಅತ್ತಿತ್ತ ಸಾಗುತ್ತಿರುವ ವೈರಲ್ ವೀಡಿಯೋ ನೋಡಿದ ಹಲವರು ಅವರು ಅನಾರೋಗ್ಯದಿಂದ ಇರುವಂತೆ ಕಾಣುತ್ತಿಲ್ಲ ಎಂದು ಹೇಳಿದ್ದರು.

ಆಶಿಷ್ ಮಿಶ್ರಾ ಅವರು ಅನಾರೋಗ್ಯಕ್ಕೀಡಾಗಿ ಅವರ ವೈದ್ಯಕೀಯ ವರದಿ ಡೆಂಗ್ಯು ದೃಢೀಕರಿಸಿದ ಒಂದು ದಿನ ಮುಂಚೆಯೇ ಅವರ ಪೊಲೀಸ್ ಕಸ್ಟಡಿ ದಿಢೀರ್ ಆಗಿ ಅಂತ್ಯಗೊಂಡಿತ್ತು ಹಾಗೂ ಅವರನ್ನು ನ್ಯಾಯಾಂಗ ಬಂಧನಕ್ಕೊಳಡಿಸಲಾಗಿತ್ತು.

ಅವರನ್ನು ಲಕ್ನೋದ ಉನ್ನತ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಬೇಕೆಂದು ವಕೀಲರು ಹೇಳಿದರೂ ಲಖೀಂಪುರ್ ಖೇರಿ ಜಿಲ್ಲಾಸ್ಪತ್ರೆಯಲ್ಲಿಯೇ ಅವರಿಗೆ ಚಿಕಿತ್ಸೆ ನೀಡಬಹುದೆಂದು ವೈದ್ಯರು ಹೇಳಿದ್ದರು.

ಈ ನಡುವೆ ಆಸ್ಪತ್ರೆಯಲ್ಲಿ ಅವರು ಅಡ್ಡಾಡುತ್ತಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ವಿಶೇಷ ಎಸ್‍ಐಟಿ ತನಿಖಾಧಿಕಾರಿ ಈ ವಿಚಾರವನ್ನು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಗಮನಕ್ಕೆ ತಂದಿದ್ದರು. ಈ ಕುರಿತಂತೆ ಮ್ಯಾಜಿಸ್ಟ್ರೇಟ್ ಅವರು ಜೈಲಿನ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ ನಂತರ ಅವರನ್ನು ಮತ್ತೆ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಯಿತು ಹಾಗೂ ಅವರ ಆರೋಗ್ಯ ಸ್ಥಿರವಾಗಿರುವುದರಿಂದ ಅವರಿಗೆ ಅಲ್ಲಿಯೇ ಚಿಕಿತ್ಸೆ ನೀಡಬಹುದೆಂದು ಜೈಲಿನ ಅಧಿಕಾರಿಗಳು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News