ಕಣ್ಣುಗಳನ್ನು ಕೀಳುತ್ತೇನೆ, ಕೈಗಳನ್ನು ಕತ್ತರಿಸುತ್ತೇನೆ: ಪ್ರತಿಭಟನಾನಿರತ ರೈತರಿಗೆ ಬಿಜೆಪಿ ಸಂಸದನ ಎಚ್ಚರಿಕೆ

Update: 2021-11-06 13:35 GMT

ಚಂಡೀಗಢ: ಪಕ್ಷ ಸಹೋದ್ಯೋಗಿ ಮನೀಶ್ ಗ್ರೋವರ್ ಅವರನ್ನು ಯಾರೇ ವಿರೋಧಿಸಿದರೂ "ಅವರ ಕಣ್ಣುಗಳನ್ನು ಕೀಳುತ್ತೇನೆ ಹಾಗೂ ಕೈಗಳನ್ನು ಕತ್ತರಿಸುತ್ತೇನೆ" ಎಂದು ಹೇಳುವ ಮೂಲಕ ಹರ್ಯಾಣದ ರೋಹ್ಟಕ್ ಕ್ಷೇತ್ರದ ಬಿಜೆಪಿ ಸಂಸದ ಅರವಿಂದ್ ಶರ್ಮ ಶನಿವಾರ ಎಚ್ಚರಿಕೆ ನೀಡಿ ವಿವಾದಕ್ಕೀಡಾಗಿದ್ಧಾರೆ.

ಸಾರ್ವಜನಿಕ ಸಭೆಯೊಂದರಲ್ಲಿ ಅವರು ಮೇಲಿನ ಹೇಳಿಕೆ ನೀಡುತ್ತಿದ್ದಂತೆಯೇ ಸಭಿಕರು ಚಪ್ಪಾಳೆ ತಟ್ಟಿದ್ದಾರೆ.

ಶುಕ್ರವಾರ ರೋಹ್ಟಕ್ ಜಿಲ್ಲೆಯ ಕಿಲೋಯಿ ಗ್ರಾಮದಲ್ಲಿ ದೇವಸ್ಥಾನವೊಂದರ ಒಳಗೆ ಬಿಜೆಪಿ ನಾಯಕ ಮನೀಶ್ ಗ್ರೋವರ್ ಇದ್ದಾಗ ಅವರನ್ನು ಆಕ್ರೋಶಭರಿತ ರೈತರು ಘೇರಾವ್ ಮಾಡಿದ್ದರು. ಪ್ರತಿಭಟನಾಕಾರರನ್ನು `ನಿರುದ್ಯೋಗಿ ಕುಡುಕರು' ಎಂದು ಗ್ರೋವರ್ ಹಂಗಿಸಿದ್ದೇ ಈ ಪ್ರತಿಭಟನೆಗೆ ಕಾರಣವಾಗಿತ್ತು. ದೇವಸ್ಥಾನದೊಳಗೆ ಸುಮಾರು ಎಂಟು ಗಂಟೆಗಳ ಕಾಲ ಗ್ರೋವರ್ ಮತ್ತಿತರರು ಇರುವಂತಾಗಿತ್ತಲ್ಲದೆ ನಂತರ ಗ್ರೋವರ್ ಕೈಮುಗಿದುಕೊಂಡೇ ಹೊರಗೆ ಬಂದಿದ್ದರು. ನಂತರವಷ್ಟೇ ದೇವಸ್ಥಾನದಲ್ಲಿದ್ದ ಸಚಿವ ರವೀಂದ್ರ ರಾಜು, ರೋಹ್ಟಕ್ ಮೇಯರ್ ಮನಮೋಹನ್ ಗೋಯಲ್ ಮತ್ತಿತರರನ್ನು ಹೊರಕ್ಕೆ ಹೋಗಲು ಪ್ರತಿಭಟನಾಕಾರರು ಅನುಮತಿಸಿದ್ದರು.

ಘಟನೆಯ ಬಗ್ಗೆ ನಂತರ ಪ್ರತಿಕ್ರಿಯಿಸಿದ್ದ ಗ್ರೋವರ್, ತಾವು ಕ್ಷಮೆ ಯಾಚಿಸಿಲ್ಲ ಬದಲು ಎಲ್ಲರಿಗೂ ಕೈಬೀಸಿದ್ದಾಗಿ ಹಾಗೂ ಬೇಕಾದಾಗ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ ಎಂದಿದ್ದರು.

ಇದೇ ಘಟನೆಯನ್ನು ಮುಂದಿಟ್ಟುಕೊಂಡು ಇಂದು  ಸಂಸದ  ಅರವಿಂದ್ ಶರ್ಮ ವಿವಾದಾಸ್ಪದ ಮಾತುಗಳನ್ನಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News