ಜಾರ್ಜ್ ಫ್ಲಾಯ್ಡ್ ರಂತೆ "ನನಗೆ ಉಸಿರಾಡಲು ಆಗುತ್ತಿಲ್ಲ" ಎಂದು ಯಾರೂ ಹೇಳದಿರಲಿ: ಪೊಲೀಸ್‌ ದೌರ್ಜನ್ಯದ ಬಗ್ಗೆ ಹೈಕೋರ್ಟ್

Update: 2021-11-09 09:47 GMT

ಹೊಸದಿಲ್ಲಿ: ಜಾರ್ಜ್ ಪೆರ್ರಿ ಫ್ಲಾಯ್ಡ್ ಜೂನಿಯರ್ ಅವರಂತೆ ಯಾರು ಕೂಡ "ನನಗೆ ಉಸಿರಾಡಲು ಸಾಧ್ಯವಿಲ್ಲ" ಎನ್ನುವಂತಹ ದುರಂತಮಯ  ಪದಗಳನ್ನು ಪುನರಾವರ್ತಿಸುವಂತೆ ಆಗದಿರಲಿ, ಎಂದು ದಿಲ್ಲಿ ಹೈಕೋರ್ಟ್ ಸೋಮವಾರ ಹೇಳಿದೆ. ಯಾವುದೇ ಅಪರಾಧ ಕೃತ್ಯಕ್ಕೆ ಶಿಕ್ಷೆಯನ್ನು ಕೋರ್ಟುಗಳು ತೀರ್ಮಾನಿಸುವುದರಿಂದ ಪೊಲೀಸ್ ಕಸ್ಟಡಿಯಲ್ಲಿರುವ ವೇಳೆ ಅಥವಾ ವಿಚಾರಣೆಯ ವೇಳೆ ಯಾರಿಗೂ ಥಳಿಸಲು ಕಾನೂನು ಅನುಮತಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಚಾಂದನಿ ಮಹಲ್ ಪ್ರದೇಶದ ಟರ್ಕ್‍ಮ್ಯಾನ್ ಗೇಟ್ ಪೊಲೀಸ್ ಠಾಣೆಯ ಅಧಿಕಾರಿಗಳು ತಮ್ಮನ್ನು ಅಕ್ರಮವಾಗಿ ದಿಗ್ಬಂಧನದಲ್ಲಿರಿಸಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಹಾಗೂ ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ಅಪೀಲಿನ ಮೇಲಿನ ವಿಚಾರಣೆ ಸಂದರ್ಭ ನ್ಯಾಯಾಲಯ ಮೇಲಿನಂತೆ ಹೇಳಿದೆ.

ಘಟನೆಯ ಛಾಯಾಚಿತ್ರಗಳನ್ನು ಪರಿಶೀಲಿಸಿದ ನ್ಯಾಯಾಧೀಶರಾದ ನಜ್ಮಿ ವಝೀರಿ  ಮಾತನಾಡಿ "ಅರ್ಜಿದಾರರ ಮೇಲಿನ ಹಲ್ಲೆ ಪ್ರಶ್ನಾರ್ಹವಾಗಿದೆ, ಈ ರೀತಿ ಪೊಲೀಸ್ ಕಸ್ಟಡಿಯಲ್ಲಿರುವ ವೇಳೆ, ವಿಚಾರಣೆ ವೇಳೆ ಥಳಿಸುವ ಹಾಗಿಲ್ಲ. ಕಾನೂನು ಜಾರಿಗೊಳಿಸುವವರ ಅತಿರೇಕದ ವರ್ತನೆಯಿಂದ ದುರಂತ ಸಂಭವಿಸಬಹುದು. ಯಾರು ಕೂಡಾ ಜಾರ್ಜ್ ಫ್ಲಾಯ್ಡ್ ಅವರಂತೆ ʼನನಗೆ ಉಸಿರಾಡಲು ಸಾಧ್ಯವಿಲ್ಲʼ ಎಂದು ಹೇಳದಿರಲಿ" ಎಂದು ಅಮೆರಿಕಾದಲ್ಲಿ ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಅಭಿಯಾನಕ್ಕೆ ಕಾರಣವಾದ ಪೊಲೀಸ್ ಅಧಿಕಾರಿಯೊಬ್ಬರಿಂದ ಜಾರ್ಜ್ ಫ್ಲಾಯ್ಡ್ ಅವರ ಅಮಾನವೀಯ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News