ಲಖಿಂಪುರ ಖೇರಿ ದುರಂತ: ತನಿಖೆಯ ಹೆಸರಿನಲ್ಲಿ ಸಾಕ್ಷ್ಯನಾಶ?

Update: 2021-11-10 07:02 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಲಖಿಂಪುರ ಖೇರಿ ಪ್ರಕರಣದ ತನಿಖಾಧಿಕಾರಿಗಳು ಆರೋಪಿಗಳ ಪತ್ತೆಗೆ ಪ್ರಯತ್ನಿಸದೆ, ಅವರ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ಅನುಮಾನ ಪಟ್ಟಿದೆ. ಲಖಿಂಪುರದಲ್ಲಿ ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವನ ಪುತ್ರ ಆಶಿಷ್ ಮಿಶ್ರಾ ಅವರಿದ್ದ ಕಾರು ಹರಿದು ನಾಲ್ವರು ರೈತರು ಮೃತಪಟ್ಟಿದ್ದರು. ಬಳಿಕ ನಡೆದ ಹಿಂಸಾಚಾರದಲ್ಲಿ ಇನ್ನೂ ನಾಲ್ವರು ಸಾವನ್ನಪ್ಪಿದ್ದರು. ಹಲವರು ಗಾಯಗೊಂಡಿದ್ದರು. ಆರೋಪಿಗಳನ್ನು ಪತ್ತೆ ಹಚ್ಚುವುದಕ್ಕೆ ಭಾರೀ ತನಿಖೆಯ ಅಗತ್ಯವೇನೂ ಇದ್ದಿರಲಿಲ್ಲ. ಸಾವಿರಾರು ಜನರ ಸಮ್ಮುಖ ನಡೆದ ಘಟನೆ ಇದು. ದುರಂತದ ವೀಡಿಯೊ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದುರಂತ ನಡೆದು ಒಂದು ತಿಂಗಳಾಗಿದೆ. ಆರೋಪಿಗೆ ಸಂಬಂಧಿಸಿದ ಸಾಕ್ಷ ಕಲೆ ಹಾಕಲು ಪೊಲೀಸರಿಗೆ ಕಷ್ಟವಾಗುತ್ತಿದೆ. ಪೊಲೀಸರು ಆರೋಪಿಯನ್ನು ಬಂಧಿಸುವುದಕ್ಕೆ ಸಾಕ್ಷ ಸಂಗ್ರಹಿಸುವ ಬದಲು ರಕ್ಷಣೆಗೆ ಸಾಕ್ಷ ಸಂಗ್ರಹಿಸುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ಆರೋಪಿಸುತ್ತಿದೆ. ಇದೇ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿ ಈಗಾಗಲೇ ಪ್ರತಿಭಟನಾ ನಿರತ ಹಲವು ರೈತರನ್ನು ಬಂಧಿಸಲಾಗಿದೆ. ಪ್ರತಿಭಟನಾ ನಿರತ ರೈತರ ಮೇಲೆ ಅಪರಿಚಿತ ವಾಹನಗಳು ಹರಿಯುವುದು, ಆ ದುರಂತದಿಂದ ರೈತರು, ಮಹಿಳೆಯರು ಮೃತಪಡುವುದು ಇತ್ತೀಚೆಗೆ ಸಾಮಾನ್ಯ ಎನ್ನಿಸಿದೆ. ಇವು ಉದ್ದೇಶ ಪೂರ್ವಕವಾಗಿ ನಡೆಯುತ್ತಿರುವ ಅಪಘಾತಗಳು ಎಂದು ರೈತ ಮುಖಂಡರು ಆರೋಪಿಸುತ್ತಿದ್ದಾರೆ. ಪ್ರತಿಭಟನಾ ನಿರತ ರೈತರನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ, ಸರಕಾರ ಇಂತಹ ಅಪಘಾತಗಳ ಮೂಲಕ ಬೆದರಿಸುತ್ತಿದೆ ಎನ್ನುವ ಶಂಕೆ ರೈತರಲ್ಲಿ ಉಂಟಾಗಿದೆ.

ಪ್ರತಿಭಟನಾಕಾರರನ್ನು ವಿವಿಧ ತಂತ್ರಗಳಿಂದ ದಮನಿಸುವ ಪ್ರಯತ್ನ ನಡೆಸಿ ವಿಫಲವಾಗಿರುವ ಸರಕಾರವೇ ಇಂತಹ ಅಪಘಾತಗಳನ್ನು ಪ್ರಾಯೋಜಿಸುತ್ತಿವೆಯೇ ಎಂದು ಅನುಮಾನ ಪಡುತ್ತಿರುವಾಗ, ಈ ದೇಶದ ಸರ್ವೋಚ್ಚ ನ್ಯಾಯಲಯ, ಈ ಅಪಘಾತದ ಆರೋಪಿಗಳನ್ನು ಪೊಲೀಸರು ರಕ್ಷಿಸುವುದಕ್ಕಾಗಿ ಸಾಕ್ಷ ಸಂಗ್ರಹಿಸುತ್ತಿದ್ದಾರೆ ಎಂದು ಆರೋಪಿಸಿದೆ. ಸುಪ್ರೀಂಕೋರ್ಟೇ ಹೀಗೆ ಹೇಳಿದ ಮೇಲೆ ಆ ಪ್ರಕರಣದ ಮುಂದಿನ ಗತಿ ಹೇಗಿರಬಹುದು? ತಕ್ಷಣ ತನಿಖೆಯನ್ನು ಸ್ವತಂತ್ರ ಸಂಸ್ಥೆಗೆ ಹಸ್ತಾಂತರಿಸಿದರಷ್ಟೇ ಮೃತಪಟ್ಟ ಅಮಾಯಕರಿಗೆ ನ್ಯಾಯ ಸಿಕ್ಕೀತು. ಆದರೆ ಅಂತಹ ಪ್ರಕ್ರಿಯೆಗೆ ಇನ್ನೂ ನ್ಯಾಯಾಲಯ ಮುಂದಡಿಯಿಟ್ಟಿಲ್ಲ. ಸದ್ಯಕ್ಕೆ ತನಿಖೆ ನಿಷ್ಪಕ್ಷಪಾತವಾಗಿ ನಡೆಸಲು ನ್ಯಾಯಮೂರ್ತಿಗಳ ನಿಗಾ ಅಗತ್ಯವಿದೆ ಎಂದು ಅಭಿಪ್ರಾಯ ಪಟ್ಟಿದೆ. ಈ ನಿಟ್ಟಿನಲ್ಲಿ ಇಬ್ಬರ ಹೆಸರನ್ನು ಸೂಚಿಸಿದೆ. ಲಖಿಂಪುರದಲ್ಲಿ ಪ್ರಕರಣದ ಪ್ರಮುಖ ಆರೋಪಿ ಈ ದೇಶದ ಗೃಹ ಸಚಿವರ ಪುತ್ರ ಎನ್ನುವುದರಿಂದಲೇ ಅಪಘಾತ ಮಹತ್ವವನ್ನು ಪಡೆದುಕೊಂಡಿದೆ.

ಪ್ರತಿಭಟನಾನಿರತ ರೈತರನ್ನು ಕೇಂದ್ರ ಸರಕಾರದಲ್ಲಿರುವ ಸಚಿವರುಗಳು ‘ಉಗ್ರಗಾಮಿ’ಗಳೆಂದು ಸಾಬೀತು ಮಾಡಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ಈ ಅಪಘಾತ ನಡೆದಿದೆ. ಕಾರಿನಲ್ಲಿ ಸಹಾಯಕ ಗೃಹ ಸಚಿವರ ಪುತ್ರ ಆಶಿಷ್ ಮಿಶ್ರಾ ಇದ್ದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ತನಿಖಾಧಿಕಾರಿಗಳು ಗೃಹ ಸಚಿವರ ಪುತ್ರನನ್ನು ತನಿಖೆ ನಡೆಸಬೇಕಾಗಿರುವುದರಿಂದ, ಪಾರದರ್ಶಕ ತನಿಖೆಗೆ ಸಹಾಯಕ ಗೃಹ ಸಚಿವರ ರಾಜೀನಾಮೆ ಅತ್ಯಂತ ಅಗತ್ಯವಾಗಿತ್ತು. ಪೊಲೀಸ್ ಇಲಾಖೆಯೇ ಗೃಹಖಾತೆಯ ನಿಯಂತ್ರಣದಲ್ಲಿರುವಾಗ, ತನಿಖೆ ಸಾಂಗವಾಗಿ ನಡೆಯುವುದಾದರೂ ಹೇಗೆ? ಸಹಾಯಕ ಗೃಹ ಸಚಿವ ಅಜಯ್ ಮಿಶ್ರ ಎಲ್ಲಿಯವರೆಗೆ ರಾಜೀನಾಮೆ ನೀಡುವುದಿಲ್ಲವೋ ಅಲ್ಲಿಯವರೆಗೆ ಅಧಿಕಾರಿಗಳು ನಡೆಸುವ ತನಿಖೆ ಪಾರದರ್ಶಕವಾಗಿರಲು ಸಾಧ್ಯವಿಲ್ಲ. ಗೃಹ ಸಚಿವನ ಪುತ್ರನ ವಿರುದ್ಧ, ಗೃಹ ಸಚಿವನ ಅಧೀನದಲ್ಲಿರುವ ಅಧಿಕಾರಿಗಳು ಸಾಕ್ಷ ಸಂಗ್ರಹಿಸುವುದು ಭಾರತದ ವ್ಯವಸ್ಥೆಯಲ್ಲಿ ಸುಲಭವೂ ಇಲ್ಲ. ಅವರ ರಾಜೀನಾಮೆ ಸಾಧ್ಯವಿಲ್ಲ ಎಂದಾಗಿದ್ದರೆ, ನ್ಯಾಯಮೂರ್ತಿಯ ನೇತೃತ್ವದಲ್ಲಿ ಸ್ವತಂತ್ರ ತನಿಖೆಯೊಂದನ್ನು ನಡೆಸುವುದೇ ಸರಿಯಾದ ಕ್ರಮ. ಇಲ್ಲದೇ ಇದ್ದರೆ, ಆರೋಪಿಯನ್ನು ಬಂಧಿಸುವುದಕ್ಕೆ ಅಲ್ಲ, ಇರುವ ಸಾಕ್ಷಗಳನ್ನು ನಾಶ ಮಾಡುವುದಕ್ಕೆ ಗೃಹಖಾತೆ ತನ್ನ ಅಧಿಕಾರಿಗಳನ್ನು ಬಳಸಿಕೊಳ್ಳುತ್ತದೆ ಮತ್ತು ಈ ಪ್ರಕರಣದಲ್ಲಿ ಅದುವೇ ನಡೆಯುತ್ತಿದೆ ಎಂದು ಈಗಾಗಲೇ ಸುಪ್ರೀಂಕೋರ್ಟ್ ಕೂಡ ಹೇಳಿದೆ.

ಕಾರು ಆಕಸ್ಮಿಕವಾಗಿ ಹರಿದಿರುವುದು ಅಲ್ಲ ಎನ್ನುವುದು ಈಗಾಗಲೇ ವೈರಲ್ ಆಗಿರುವ ವೀಡಿಯೊಗಳು ಹೇಳುತ್ತವೆ. ಹಾಡಹಗಲು ಜನರು ನೋಡುತ್ತಿದ್ದಂತೆಯೇ ಕಾರು ರೈತರ ಮೇಲೆ ಹರಿದಿದೆ. ಇನ್ನು ಕಾರಿನೊಳಗೆ ಸಚಿವರ ಪುತ್ರ ಇದ್ದನೇ ಎನ್ನುವುದನ್ನು ಕಂಡುಕೊಳ್ಳುವ ಕೆಲಸ ನಡೆಯಬೇಕು. ವಿಪರ್ಯಾಸವೆಂದರೆ, ಪ್ರಮುಖ ಆರೋಪಿಯ ಮೊಬೈಲ್‌ಗಳನ್ನು ಇನ್ನೂ ತನಿಖಾಧಿಕಾರಿಗಳು ವಶಕ್ಕೆ ಪಡೆದಿಲ್ಲ. ಹಾಗೆಯೇ, ಸಂತ್ರಸ್ತರನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸವೂ ನಡೆಯುತ್ತಿದೆ. ಅಪಘಾತದಿಂದ ಮೃತಪಟ್ಟ ರೈತರ ಪ್ರಕರಣಕ್ಕೆ ಆದ್ಯತೆ ಕೊಡದೆ, ಅಪಘಾತ ನಡೆದ ಬಳಿಕ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಆಸಕ್ತರಾಗಿದ್ದಾರೆ. ಅವರನ್ನು ಅತ್ಯಾಸಕ್ತಿಯಿಂದ ಬಂಧಿಸುತ್ತಿದ್ದಾರೆ. ಈ ಮೂಲಕ ಅವರ ಉದ್ದೇಶ ಏನು ಎನ್ನುವುದು ಸ್ಪಷ್ಟವಾಗಿದೆ. ಸಿಎಎ ಪ್ರತಿಭಟನಾಕಾರರನ್ನು ದಿಲ್ಲಿಗಲಭೆಯಲ್ಲಿ ಸಿಲುಕಿಸಿದಂತೆಯೇ, ಇಲ್ಲಿ, ಹಿಂಸಾಚಾರವನ್ನು ಮುಂದಿಟ್ಟುಕೊಂಡು ರೈತರಿಗೆ ಕಿರುಕುಳ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಕಾರು ಹರಿಸಿದ ಪ್ರಕರಣದ ತನಿಖೆ ಕಾಟಾಚಾರಕ್ಕಷ್ಟೇ ನಡೆಯುತ್ತಿದೆ. ಈಗಾಗಲೇ ಇದು ಸುಪ್ರೀಂಕೋರ್ಟ್‌ಗೂ ಮನವರಿಕೆಯಾಗಿರುವುದರಿಂದ ಸ್ವತಂತ್ರ ಸಂಸ್ಥೆಗೆ ತನಿಖೆಯನ್ನು ವಹಿಸುವುದರಿಂದಷ್ಟೇ ಮೃತರಿಗೆ ನ್ಯಾಯ ಸಿಕ್ಕೀತು. ಇಲ್ಲವಾದರೆ, ತನಿಖೆಯ ಹೆಸರಿನಲ್ಲಿ ಇರುವ ಸಾಕ್ಷಗಳು ನಾಶವಾಗಿ, ಆರೋಪಿಗಳು ಸುಲಭದಲ್ಲಿ ಕಾನೂನಿನ ಕುಣಿಕೆಯಿಂದ ಪಾರಾಗಿ ಬಿಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News