ಹೈನೋದ್ಯಮವನ್ನು ನಷ್ಟದಾಯಕವನ್ನಾಗಿಸಿದವರು ಯಾರು?

Update: 2021-11-15 05:35 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಭಾರತದ ಆರ್ಥಿಕತೆಯನ್ನು ಮೇಲೆತ್ತಬೇಕಾದರೆ ಏನು ಮಾಡಬೇಕು? ಮೊದಲು ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಬೇಕು. ಆ ಬಳಿಕ ಅದನ್ನು ಮೇಲೆತ್ತುವುದಕ್ಕೆ ಉಪಾಯವನ್ನು ಹುಡುಕಬೇಕು. ಇದು ಸಂಘಪರಿವಾರ ಮತ್ತು ಬಿಜೆಪಿಯ ಅರ್ಥಶಾಸ್ತ್ರ. ಈ ದೇಶದ ಆರ್ಥಿಕತೆಯನ್ನು ಸರ್ವ ಪ್ರಯತ್ನದ ಮೂಲಕ ಪಾತಾಳಕ್ಕೆ ತಳ್ಳಿ ಇದೀಗ ದನದ ಸೆಗಣಿ, ಮೂತ್ರದ ಮೂಲಕ ಆರ್ಥಿಕತೆಯನ್ನು ಮೇಲೆತ್ತುವ ಕನಸನ್ನು ಬಿಜೆಪಿಯ ನಾಯಕರು ಕಾಣುತ್ತಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾಣ್ ಅವರು ಸಭೆಯೊಂದರಲ್ಲಿ ಮಾತನಾಡುತ್ತಾ ಗೋವಿನ ಸೆಗಣಿ ಮತ್ತು ಮೂತ್ರದಿಂದಾಗಿ ಈ ದೇಶದ ಆರ್ಥಿಕತೆಯನ್ನು ಬಲಪಡಿಸಬಹುದು. ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕು ಎಂದು ಅವರು ಕರೆ ನೀಡಿದ್ದಾರೆ. ಹಾಗೆಯೇ ಸಣ್ಣ ರೈತರು ಮತ್ತು ಜಾನುವಾರು ಮಾಲಕರಿಗೆ ಹಸು ಸಾಕಣೆ ಹೇಗೆ ಲಾಭದಾಯಕವಾಗಬಹುದು ಎನ್ನುವುದರ ಬಗ್ಗೆಯೂ ಅಧ್ಯಯನ ನಡೆಸಬೇಕು ಎಂದು ಅವರು ಹೇಳಿದ್ದಾರೆ. ಈ ದೇಶದ ರೈತರಿಗೆ ಗೋಸಾಕಣೆಯ ಮೂಲಕ ಆರ್ಥಿಕತೆಯನ್ನು ಬಲಪಡಿಸಿಕೊಳ್ಳಬಹುದು ಎನ್ನುವುದನ್ನು ರಾಜಕಾರಣಿಗಳು ಮತ್ತು ಸಂಘಪರಿವಾರ ಕಲಿಸಬೇಕಾಗಿಲ್ಲ.

ಭಾರತದಲ್ಲಿ ಹೈನೋದ್ಯಮ ಇಂದು ನಿನ್ನೆಯದಲ್ಲ. ಇಲ್ಲಿ ತಲೆತಲಾಂತರಗಳಿಂದ ಗೋಸಾಕಣೆಯನ್ನೇ ವೃತ್ತಿಯನ್ನಾಗಿಸಿಕೊಂಡು ಬದುಕು ಕಟ್ಟಿಕೊಂಡು ಬಂದವರಿದ್ದಾರೆ. ವಿಶ್ವದ ಉಳಿದೆಲ್ಲ ದೇಶಗಳಿಗಿಂತ ಅತಿ ಹೆಚ್ಚು ಹಾಲು ಉತ್ಪಾದನೆ ಮತ್ತು ಬಳಕೆ ನಡೆಯುತ್ತಿರುವುದು ಭಾರತದಲ್ಲಿ. ಭಾರತದ ಒಟ್ಟು ದೇಶೀಯ ಉತ್ಪನ್ನದ ಸರಿ ಸುಮಾರು 4.2ರಷ್ಟು ಉತ್ಪನ್ನ ಹೈನೋದ್ಯಮದಿಂದ ಬರುತ್ತದೆ. ಗ್ರಾಮೀಣ ಭಾರತದಲ್ಲಿ ಜಾನುವಾರುಗಳು, ಗೋವುಗಳು ಎಂದರೆ ರೈತರ ಪಾಲಿಗೆ ಎರಡನೆಯ ಕರೆನ್ಸಿ ಇದ್ದ ಹಾಗೆ. ಹಟ್ಟಿಯಲ್ಲಿ ಒಂದೆರಡು ಅನುಪಯುಕ್ತ ಹಸುವಿದ್ದರೆ ರೈತರ ಪಾಲಿಗೆ ಅದೇನು ವ್ಯರ್ಥವಾಗುವುದಿಲ್ಲ . ಮಗಳ ಮದುವೆ, ಮನೆ ರಿಪೇರಿ ಅಥವಾ ಹೈನೋದ್ಯಮಕ್ಕೆ ಬೇಕಾದ ಮೂಲಭೂತ ಅಗತ್ಯಗಳನ್ನು ಆ ಹಸುಗಳನ್ನು ಮಾರಿಯೇ ತುಂಬಿಸಿಕೊಳ್ಳುತ್ತಾರೆ. ಆದರೆ ಇಂದು ಹೈನೋದ್ಯಮಕ್ಕೆ ಅತಿ ದೊಡ್ಡ ಸಮಸ್ಯೆಯೇ ಸರಕಾರವಾಗಿದೆ. ತಮ್ಮ ಜಾನುವಾರುಗಳನ್ನು ಯಾರಿಗೆ ಮಾರಬೇಕು, ಯಾರಿಗೆ ಮಾರಬಾರದು ಎನ್ನುವುದನ್ನು ಈ ವರೆಗೆ ರೈತರೇ ನಿರ್ಧರಿಸುತ್ತಿದ್ದರು. ಆದರೆ ಇಂದು ರೈತರಿಗೆ ತಾವು ಸಾಕಿದ ಜಾನುವಾರುಗಳನ್ನು ಮಾರುವ ಹಕ್ಕುಗಳಿಲ್ಲ. ರೈತರು ಸಾಕಿದ ಅನುಪಯುಕ್ತ ಜಾನುವಾರುಗಳನ್ನು ಯಾರಿಗೆ ಮಾರಬೇಕು, ಯಾರಿಗೆ ಮಾರಬಾರದು, ಯಾವಾಗ ಮಾರಬೇಕು ಎಂಬಿತ್ಯಾದಿಗಳನ್ನು ಸರಕಾರ ಮತ್ತು ಬೀದಿಯಲ್ಲಿ ಅಂಡಲೆಯುವ ನಕಲಿ ಗೋರಕ್ಷಕರು ತೀರ್ಮಾನಿಸುತ್ತಿದ್ದಾರೆ. ಪರಿಣಾಮವಾಗಿ, ಹಟ್ಟಿಯಲ್ಲಿದ್ದ ಗೋವುಗಳನ್ನು ಮಾರಲಾಗದೆ, ಅವುಗಳಿಗೆ ಆಹಾರವನ್ನು ನೀಡಲೂ ಆಗದೆ ನಷ್ಟ ಹೊಂದುತ್ತಿದ್ದಾರೆ. ಹಟ್ಟಿಯಲ್ಲಿ ಹಸುವಿದ್ದರೂ, ತನ್ನ ಬದುಕಿನ ಮೂಲಭೂತ ಅಗತ್ಯಕ್ಕಾಗಿ ಅದನ್ನು ಮಾರುವ ಹಕ್ಕನ್ನೇ ಕಳೆದುಕೊಂಡಿರುವ ಗ್ರಾಮೀಣ ರೈತರ ಆರ್ಥಿಕತೆಗೆ ಸರಕಾರವೇ ಅತಿ ದೊಡ್ಡ ಹೊಡೆತವನ್ನು ನೀಡಿದೆ. ಹೀಗೆ ಗೋವುಗಳನ್ನು ಸಾಕುತ್ತಿದ್ದ ರೈತರ ಬದುಕನ್ನು ಮೂರಾಬಟ್ಟೆ ಮಾಡಿ, ಇದೀಗ ಸರಕಾರವೇ 'ಗೋಸಾಕಣೆಗಾರರ ಆರ್ಥಿಕತೆಯನ್ನು ಮೇಲೆತ್ತಲು ಸಂಶೋಧನೆ ನಡೆಸಿ' ಎಂದು ಆದೇಶ ನೀಡುತ್ತಿದೆ.

 ಈ ದೇಶದ ಹೈನೋದ್ಯಮಕ್ಕೆ ಬಹುದೊಡ್ಡ ಇತಿಹಾಸವಿದೆ. ಹೈನೋದ್ಯಮವನ್ನು ರೈತರು ಕೇವಲ ಹಾಲಿಗೆ ಸೀಮಿತಗೊಳಿಸಿಲ್ಲ. ಚರ್ಮ, ಎಲುಬು, ಮಾಂಸ ಕೂಡ ಈ ಹೈನೋದ್ಯಮವನ್ನು ಬೆಸೆದುಕೊಂಡಿದೆ. ಮುಖ್ಯವಾಗಿ ಇಲ್ಲಿ ಚರ್ಮ, ಮಾಂಸಕ್ಕಾಗಿ ಯಾವ ರೈತರೂ ಗೋವುಗಳನ್ನು ಸಾಕುವುದಿಲ್ಲ ಎನ್ನುವುದನ್ನು ಗಮನಿಸಬೇಕು. ಹೈನೋದ್ಯಮದ ಸಂದರ್ಭದಲ್ಲಿ ಅನುಪಯುಕ್ತವಾದ ಗೋವುಗಳನ್ನಷ್ಟೇ ಅವರು ಇತರ ಪ್ರಯೋಜನಗಳಿಗೆ ಬಳಸುತ್ತಾರೆ. ಇದರಿಂದ ರೈತರು ನಷ್ಟ ಅನುಭವಿಸುವುದು ತಪ್ಪುತ್ತದೆ. ಜೊತೆಗೆ ಚರ್ಮೋದ್ಯಮವನ್ನು ಬೆಳೆಸಿ ಆರ್ಥಿಕತೆಗೆ ಕೊಡುಗೆಯನ್ನು ನೀಡುತ್ತಾರೆ. ಮಾಂಸಾಹಾರಿಗಳೂ ಈ ಹೈನೋದ್ಯಮ ಲಾಭದಾಯಕವಾಗಲು ತಮ್ಮದೇ ಕೊಡುಗೆಗಳನ್ನು ಕೊಡುತ್ತಾ ಬಂದಿದ್ದಾರೆ. ಅನುಪಯುಕ್ತ ಗೋವುಗಳನ್ನು ಆಹಾರಕ್ಕೆ ಬಳಸುವ ಮೂಲಕ ರೈತರಿಗೆ ಆರ್ಥಿಕವಾಗಿ ಸಹಾಯವಾಗುತ್ತಾರೆ. ಇದೇ ಸಂದರ್ಭದಲ್ಲಿ ಕಡಿಮೆ ದರದಲ್ಲಿ ಅತಿ ಹೆಚ್ಚು ಪೌಷ್ಟಿಕ ಆಹಾರವೂ ಅವರಿಗೆ ದೊರಕಿದಂತಾಗುತ್ತದೆ. ಪೌಷ್ಟಿಕ ಆಹಾರದ ಬೆಲೆಯೇರಿಕೆಗೆ ಗೋಮಾಂಸಾಹಾರ ಬಹುದೊಡ್ಡ ಪರಿಹಾರವಾಗಿತ್ತು. ಆದರೆ ಹೈನೋದ್ಯಮದಲ್ಲಿ ಸಂಬಂಧವೇ ಇಲ್ಲದ, ಗೋವುಗಳನ್ನು ಪೂಜಿಸುವ ಮಂದಿ ಹಸ್ತಕ್ಷೇಪ ನಡೆಸತೊಡಗಿದರೋ ಅಲ್ಲಿಂದ ಗೋಸಾಕಣೆ ದುಬಾರಿಯಾಗಿದೆ. ಜಾನುವಾರು ಮಾರಾಟಕ್ಕೆ ನಿಬಂಧನೆಗಳನ್ನು ಒಡ್ಡುವ ಮೂಲಕ ರೈತರು ತಮ್ಮದೇ ಗೋವುಗಳನ್ನು ಮಾರುವ ಹಕ್ಕನ್ನು ಕಳೆದುಕೊಂಡರು. ಕೇವಲ ಹಾಲನ್ನಷ್ಟೇ ಅವಲಂಬಿಸಿ ಗೋವುಗಳನ್ನು ಸಾಕುವಂತಿಲ್ಲ. ಇದು ನಷ್ಟದಾಯಕ.

ಜಾನುವಾರುಗಳ ಸಾಗಾಟವು ಕಷ್ಟವಾದವು. ಆದುದರಿಂದ ನಿಧಾನಕ್ಕೆ ಹೈನೋದ್ಯಮಗಳಿಂದಲೇ ಹಿಂದೆ ಸರಿಯುವಂತಹ ಸ್ಥಿತಿ ಅವರಿಗೆ ಎದುರಾಗಿದೆ. ರೈತರು ಇಂದು ತಾವು ಸಾಕಲಾರದ ಅನುಪಯುಕ್ತ ಹಸುಗಳನ್ನು ಪುಕ್ಕಟೆಯಾಗಿ ಗೋಶಾಲೆಗಳಿಗೆ ನೀಡುತ್ತಿದ್ದಾರೆ. ಗೋಶಾಲೆಗಳು ಈ ಗೋವುಗಳನ್ನು ಮುಂದಿಟ್ಟು ಸರಕಾರದಿಂದಲೂ, ಸಾರ್ವಜನಿಕರಿಂದಲೂ ದುಡ್ಡು ಬಾಚತೊಡಗಿದವು. ಈ ಗೋಶಾಲೆಗಳಿಂದ ಗೋವುಗಳು ನಿಗೂಢವಾಗಿ ಬೃಹತ್ ಗೋಮಾಂಸ ಸಂಸ್ಕರಣಾ ಘಟಕಗಳನ್ನು ಸೇರುತ್ತಿವೆ ಎಂದು ಈಗ ಆರೋಪಗಳು ಕೇಳಿ ಬರುತ್ತಿವೆ. ರೈತರಿಂದ ನೇರವಾಗಿ ಕಸಾಯಿ ಖಾನೆಗಳಿಗೆ ಹೋಗುತ್ತಿದ್ದ ಗೋವುಗಳು ಇದೀಗ ನಕಲಿ ಗೋರಕ್ಷಕರ ಮೂಲಕ ಹೋಗುತ್ತಿದೆ. ಈ ದೇಶದ ಆರ್ಥಿಕತೆಗೆ ಗೋಮಾಂಸ ರಫ್ತು ಬಹುದೊಡ್ಡ ಕೊಡುಗೆ ಕೊಡುತ್ತಿದೆ ಎನ್ನುವ ಅಂಶ ರಾಜಕಾರಣಿಗಳಿಗೆ ಗೊತ್ತಿಲ್ಲದೇ ಇರುವುದಲ್ಲ. ಆದುದರಿಂದಲೇ, ರೈತರಿಂದ ಗೋವುಗಳನ್ನು ಕಸಿದು, ದೇಶವಾಸಿ ಬಡವರಿಂದ ಮಾಂಸವನ್ನು ಕಸಿದು ಅವುಗಳನ್ನು ವಿದೇಶಗಳಿಗೆ ಮಾರುತ್ತಿದ್ದಾರೆ. ಬೃಹತ್ ಮಾಂಸ ಸಂಸ್ಕರಣಾ ಘಟಕಗಳಿಗೆ ಕಡಿಮೆ ದರದಲ್ಲಿ ಹೆಚ್ಚು ಗೋವುಗಳು ಸಿಗಲಿ ಎನ್ನುವ ಉದ್ದೇಶದಿಂದಲೇ ರೈತರಿಗೆ ಜಾನುವಾರ ಮಾರಾಟ ನಿಯಮಗಳನ್ನು ಹೇರಲಾಗಿದೆ. ಸೆಗಣಿ, ಮೂತ್ರಗಳಿಂದ ಗೊಬ್ಬರ ತಯಾರಿಸಲು ಸಾಧ್ಯ ಎನ್ನುವುದನ್ನು ರೈತರಿಗೆ ಚೌಹಾಣ್ ಕಲಿಸಬೇಕಾಗಿಲ್ಲ. ತಲೆತಲಾಂತರಗಳಿಂದ ಸಾವಯವ ಕೃಷಿಗಳನ್ನು ಮಾಡಿಕೊಂಡು ಬಂದಿರುವ ರೈತರಿಗೆ ಅದು ಚೆನ್ನಾಗಿ ಗೊತ್ತಿದೆ.

ಆದರೆ ಯಾವಾಗ ಹೈನೋದ್ಯಮ ಹಾಲಿಗಷ್ಟೇ ಸೀಮಿತವಾಗಿ ಚರ್ಮೋದ್ಯಮ, ಮಾಂಸೋದ್ಯಮದಿಂದ ಸಂಪರ್ಕವನ್ನು ಕಳಚಿಕೊಂಡಿತೋ ಆಗ ಅದು ನಷ್ಟದಾಯಕ ಉದ್ಯಮವಾಗಿ ಪರಿವರ್ತನೆಗೊಂಡಿತು. ಇಂದು ಸರಕಾರ ಸೆಗಣಿ, ಮೂತ್ರದಿಂದ ರೈತರಿಗೆ ಲಾಭ ಮಾಡಿಕೊಡುವ ಅಗತ್ಯವಿಲ್ಲ. ರೈತರಿಗೆ ಜಾನುವಾರುಗಳ ಮೇಲಿರುವ ಹಕ್ಕುಗಳನ್ನು ಮರಳಿಸಿದರೆ ಸಾಕು. ತಮ್ಮ ಹಟ್ಟಿಯಲ್ಲಿರುವ ಅನುಪಯುಕ್ತ ಗೋವುಗಳನ್ನು ಹೆಚ್ಚು ದರ ಸಿಗುವಲ್ಲಿ ಮಾರಾಟ ಮಾಡುವ ಅಧಿಕಾರ ಸಿಕ್ಕರೆ ಹೈನೋದ್ಯಮ ರೈತರಿಗೆ ಲಾಭದಾಯಕವಾಗುತ್ತದೆ. ಅಷ್ಟೇ ಅಲ್ಲ, ಇತರ ಉದ್ಯಮಗಳೂ ಇದಕ್ಕೆ ಪೂರಕವಾಗಿ ಬೆಳೆದು ಒಟ್ಟು ದೇಶದ ಆರ್ಥಿಕತೆ ಮೇಲೆದ್ದು ನಿಲ್ಲುತ್ತದೆ. ಜನರಿಗೂ ಪೌಷ್ಟಿಕ ಆಹಾರವನ್ನು ಮುಕ್ತವಾಗಿ ಸೇವಿಸುವ ಅವಕಾಶ ಸಿಗುತ್ತದೆ. ಇತರ ಮಾಂಸಾಹಾರಗಳ ಬೆಲೆಯೂ ಇಳಿಕೆಯಾಗಿ ಹಸಿವಿನ ಸಮಸ್ಯೆ ಇಳಿಮುಖವಾಗುತ್ತದೆ. ಹಾಲಿನ ಜೊತೆಗೆ ಬರೇ ಸೆಗಣಿ, ಮೂತ್ರವನ್ನಷ್ಟೇ ಹೈನೋದ್ಯಮ ಅವಲಂಬಿಸಿದರೆ, ಶೀಘ್ರದಲ್ಲೇ ಈ ದೇಶದ ಗ್ರಾಮೀಣ ಪ್ರದೇಶದ ಹೈನೋದ್ಯಮ ಮುಚ್ಚಿ ಹೋಗಿ, ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ಅದರ ಲಾಭವನ್ನು ತನ್ನದಾಗಿಕೊಳ್ಳಬಹುದು. ಬಹುಶಃ ಸರಕಾರದ ಉದ್ದೇಶವೂ ಇದೇ ಇರಬೇಕು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News