‘ಗುಜರಾತ್ ಗಲಭೆ ಆರೋಪಿಗಳ ಜೊತೆ ಸಿಟ್ ಶಾಮೀಲು': ಝಕಿಯಾ ಆರೋಪಕ್ಕೆ ಸುಪ್ರೀಂಕೋರ್ಟ್ ಆಕ್ಷೇಪ

Update: 2021-11-16 17:25 GMT
photo:twitter/@newslaundry

 ಹೊಸದಿಲ್ಲಿ,ನ.16: 2002ರ ಗುಜರಾತ್ ಗಲಭೆಯ ತನಿಖೆ ನಡೆಸುತ್ತಿರುವ ಸಿಟ್ ತಂಡ ಹಾಗೂ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೆಲವು ಆರೋಪಿಗಳ ನಡುವೆ ನಂಟಿದ್ದುದೇ, ಅವರಿಗೆ ಕ್ಲೀನ್ ಚಿಟ್ ದೊರೆಯಲು ಸಾಧ್ಯವಾಯಿತು ಎಂದು ಅರ್ಜಿದಾರೆ ಝಕಿಯಾ ಜಾಫ್ರಿ ಆರೋಪಕ್ಕೆ ಸುಪ್ರೀಂಕೋರ್ಟ್ ಮಂಗಳವಾರ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಝಕಿಯಾ ಝಾಫ್ರಿ ಅವರು 2002ರ ಗುಜರಾತ್ ಗಲಭೆಯಲ್ಲಿ ಹತ್ಯೆಯಾದ ಮಾಜಿ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿಯಾಗಿದ್ದಾರೆ.

ನ್ಯಾಯಾಲಯವು ರಚಿಸಿದ ವಿಶೇಷ ತನಿಖಾ ತಂಡ (ಸಿಟ್)ದ ವಿರುದ್ಧ ಆರೋಪಿಗಳ ಜೊತೆ ಕೈಜೋಡಿಸಿದೆಯೆಂಬುದು ಕಟುವಾದ ಪದ ಬಳಕೆಯಾಗಿದೆ ಎಂದು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ ಹಾಗೂ ಸಿ.ಟಿ.ರಾಜ್ ಕುಮಾರ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ತಿಳಿಸಿತು. 2002ರ ಗುಜರಾತ್ ಗಲಭೆ ಆರೋಪಿಗಳ ಜೊತೆ ಸಿಟ್ ತಂಡವು ಶಾಮೀಲಾಗಿರುವುದಕ್ಕೆ ಸ್ಪಷ್ಟ ಪುರಾವೆಗಳಿವೆ ಎಂದು ಅರ್ಜಿದಾರರ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಹೇಳಿದರು. ಸಿಟ್ ಕೆಲವರನ್ನು ರಕ್ಷಿಸಲು ಯತ್ನಿಸುತ್ತಿದೆಯೇ ಎಂದವರು ಪ್ರಶ್ನಿಸಿದರು.

‘‘ ಆರೋಪಿಗಳ ಜೊತೆ ಪೊಲೀಸರು ಕೈಜೋಡಿಸಿರಲೂ ಬಹುದು. ಹೀಗಿರುವಾಗ ನ್ಯಾಯಾಲಯದಿಂದ ನೇಮಕಗೊಂಡ ಸಿಟ್, ಶಾಮೀಲಾಗಿದೆ ಎಂದು ಹೇಗೆ ಹೇಳುವಿರಿ?. ಕೋರ್ಟ್ನಿಂದ ರಚನೆಯಾದ ಆರೋಪಿಗಳ ಜೊತೆ ಸಿಟ್ ಶಾಮೀಲಾಗಿದೆಯೆಂಬ ಪದ ಬಳಕೆಯು ಅತ್ಯಂತ ಕಟುವಾದುದು" ಎಂದು ನ್ಯಾಯಾಧೀಶರು ತಿಳಿಸಿದರು.

ಅದಕ್ಕುತ್ತರಿಸಿದ ಸಿಬಲ್, ಸಿಟ್ ಬಗ್ಗೆ ತನಿಖೆ ನಡೆಯಬೇಕಾಗಿದೆ. ಅದು ತನ್ನ ಕರ್ತವ್ಯವನ್ನು ನಿರ್ವಹಿಸಿಲ್ಲ. ಸಿಟ್ ಕೇವಲ ವಿಎಚ್‌ಪಿ, ಬಜರಂಗದಳ, ಆರೆಸ್ಸೆಸ್ ಕಾರ್ಯಕರ್ತರನ್ನು ರಕ್ಷಿಸುವ ಕೆಲಸವನ್ನಷ್ಟೇ ಮಾಡುತ್ತಿದೆ ಎಂದರು.

ಆರೋಪಿಗಳ ಜೊತೆ ಸಿಟ್ ಕೈಜೋಡಿಸಿರುವುದಕ್ಕೆ ಸ್ಪಷ್ಟವಾದ ಪುರಾವೆಗಳಿವೆ. ರಾಜಕೀಯ ವರ್ಗ ಕೂಡಾ ಇದರಲ್ಲಿ ಶಾಮೀಲಾಗಿದೆ. ಗುಜರಾತ್ ಗಭೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ಹಾಗೂ ಕುಟುಕು ಕಾರ್ಯಾಚರಣೆಯ ಟೇಪ್ ಗಳ ಬಗ್ಗೆ ಸಿಟ್ ಯಾವುದೇ ತನಿಖೆ ನಡೆಸಿಲ್ಲ ಮತ್ತು ಮೊಬೈಲ್ ಫೋನ್‌ಗಳನ್ನು ಅದು ವಶಪಡಿಸಿಕೊಂಡಿಲ್ಲ. ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ಎಫ್ಐಆರ್ ಪ್ರತಿಗಳನ್ನು ನೀಡಲಾಗಿಲ್ಲವೆಂದವರು ತಿಳಿಸಿದರು.

ಆರೋಪಿಗಳ ಜೊತೆ ಕೈಜೋಡಿಸಿದ ಸಿಟ್ ಅಧಿಕಾರಿಗಳಿಗೆ ಉತ್ತಮ ಪುರಸ್ಕಾರಗಳನ್ನು ನೀಡಲಾಗಿದೆ ಎಂದರು. ಸಿಟ್ ನ ವರಿಷ್ಠರನ್ನು ಸೈಪ್ರಸ್ಗೆ ರಾಯಭಾರಿಯಾಗಿ ನೇಮಿಸಲಾಗಿದೆ. ಆರೋಪಿಗಳ ಜೊತೆ ಸಂಭಾಷಣೆ ನಡೆಸಿರುವುದನ್ನು ಪೊಲೀಸ್ ವರಿಷ್ಠರ ಕರೆ ದಾಖಲೆಗಳು ತೋರಿಸಿವೆ. ಆನಂತರ ಅವರನ್ನು ಗುಜರಾತ್ ನ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಲಾಯಿತು ಎಂದು ಸಿಬಲ್ ತಿಳಿಸಿದರು.

 2002ರ ಫೆಬ್ರವರಿ 28ರಂದು ಅಹ್ಮದಾಬಾದ್ ನ ಗುಲ್ಬರ್ಗ ಸೊಸೈಟಿ ವಸತಿ ಸಂಕೀರ್ಣದ ಮೇಲೆ ಸಾವಿರಕ್ಕೂ ಅಧಿಕ ಸಂಖ್ಯೆಯ ಜನರಿದ್ದ ಗುಂಪೊಂದು ನಡೆಸಿ, ಎಹ್ಸಾನ್ ಜಾಫ್ರಿ ಸೇರಿದಂತೆ 68 ಮಂದಿಯನ್ನು ಹತ್ಯೆ ಮಾಡಿತ್ತು.

ಘಟನೆ ನಡೆದು ಹತ್ತು ವರ್ಷಗಳಾದ ಬಳಿಕ ಅಂದರೆ 2012ರಲ್ಲಿ ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಿತು. ಯಾವುದೇ ವಿಚಾರಣಾಯೋಗ್ಯ ಸಾಕ್ಷಾಧಾರಗಳಿಲ್ಲದ ಕಾರಣ ನೀಡಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರ 63 ಮಂದಿಯನ್ನು ದೋಷಮುಕ್ತಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News