ಗೋಶಾಲೆಗಳೆಂಬ ಅನಗತ್ಯ ಆರ್ಥಿಕ ಹೊರೆಗಳು!

Update: 2021-11-17 08:13 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶದ ಆರ್ಥಿಕತೆ ಮುಳುಗುವ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ, ಮುಳುಗುವವನ ಕೊರಳಿಗೆ ಗುಂಡುಕಲ್ಲು ಕಟ್ಟಿದರೆ ಹೇಗಿರುತ್ತದೆ? ವಿವಿಧ ರಾಜ್ಯಗಳು ಗೋರಕ್ಷಣೆಯ ಹೆಸರಿನಲ್ಲಿ ಗೋಶಾಲೆಗಳನ್ನು ತೆರೆಯಲು ಹೊರಟಿರುವುದು ಮುಳುಗುತ್ತಿರುವ ದೇಶದ ಆರ್ಥಿಕತೆಯ ಕೊರಳಿಗೆ ಇನ್ನೊಂದು ಗುಂಡು ಕಲ್ಲು ಕಟ್ಟಿದಂತೆಯೇ ಆಗಿದೆ. ನೋಟು ನಿಷೇಧದ ಬಳಿಕ ದೇಶವು ಭಾರೀ ಆರ್ಥಿಕ ಕುಸಿತವನ್ನು ಕಂಡಿದೆ. ಕೊರೋನ ಮತ್ತು ಲಾಕ್‌ಡೌನ್ ಈ ಸ್ಥಿತಿಯನ್ನು ಇನ್ನಷ್ಟು ಚಿಂತಾಜನಕ ಮಟ್ಟಕ್ಕೆ ಒಯ್ದಿದೆ. ಶಿಕ್ಷಣ, ಆರೋಗ್ಯ, ಆಹಾರ ಮೊದಲಾದ ಸಾಮಾಜಿಕ ಸೇವಾ ವಲಯಕ್ಕೆ ಹೂಡುವುದಕ್ಕೆ ಸರಕಾರದ ಬಳಿ ಆರ್ಥಿಕ ಶಕ್ತಿಯಿಲ್ಲವಾಗಿದೆ. ಇಂತಹ ಸಂದರ್ಭದಲ್ಲಿ, ಸರಕಾರ ಅನುಪಯುಕ್ತ ಗೋವುಗಳನ್ನು ರೈತರ ಕೈಯಿಂದ ಕಿತ್ತು ತಾನೇ ಸಾಕಲು ಹೊರಟಿರುವುದು ಪರಮ ಮೂರ್ಖತನದ ಇನೊಂದು ಹೆಜ್ಜೆಯಾಗಿದೆ. ರಾಜ್ಯದಲ್ಲಿ ಸರಕಾರ ಜಿಲ್ಲೆಗೊಂದು ಗೋಶಾಲೆ ನಿರ್ಮಾಣದ ಘೋಷಣೆಯನ್ನು ಮಾಡಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಗೋಶಾಲೆ ಸ್ಥಾಪನೆಗೆ ಜಮೀನು ಕೊಡುವ ಪ್ರಕ್ರಿಯೆ ಶುರುವಾಗಿದೆ. ಹಾಗೆಯೇ ಸುಮಾರು 15 ಕೋಟಿ ರೂಪಾಯಿಗಳನ್ನು ಗೋಶಾಲೆ ಸ್ಥಾಪನೆ ಪ್ರಕ್ರಿಯೆಗೆ ಬಿಡುಗಡೆ ಮಾಡಿದೆ.

ಇದೇ ಸಂದರ್ಭದಲ್ಲಿ ಕೆಲವು ಖಾಸಗಿ ಗೋಶಾಲೆಗಳೂ ಗೋರಕ್ಷಣೆಯ ಹೆಸರಿನಲ್ಲಿ ವಿವಿಧ ರೂಪದಲ್ಲಿ ಸರಕಾರಿ ಅನುದಾನಗಳನ್ನು ಕಸಿದುಕೊಳ್ಳುತ್ತಿವೆ. ಆದರೆ ಸರಕಾರ ಬಿಡುಗಡೆ ಮಾಡಿದ 15 ಕೋಟಿ ರೂಪಾಯಿಯಿಂದ ಗೋಶಾಲೆಗಳ ಸ್ಥಾಪನೆ ಸಾಧ್ಯವಿಲ್ಲ. ಆ ಅನುಪಯುಕ್ತ ಗೋವುಗಳಿಗೆ ಸರಕಾರ ಪ್ರತಿದಿನ ಹುಲ್ಲು ಆಹಾರಗಳನ್ನು ನೀಡಬೇಕು. ಅದರ ಮೇಲ್ ಉಸ್ತುವಾರಿಗೆ ಸಿಬ್ಬಂದಿಗಳಿಗೆ ವೇತನ ನೀಡಬೇಕು. ಹಾಗೆಯೇ ಗೋಶಾಲೆಗಳ ನಿರ್ವಹಣೆ ಎಷ್ಟರಮಟ್ಟಿಗೆ ಪ್ರಾಮಾಣಿಕವಾಗಿ ನಡೆಯುತ್ತಿದೆ, ಗೋವುಗಳನ್ನು ಹೇಗೆ ನೋಡಿಕೊಳ್ಳಲಾಗುತ್ತಿದೆ ಎನ್ನುವುದರ ಬಗ್ಗೆಯೂ ಕಣ್ಣಿಡಬೇಕು. ಇದಕ್ಕಾಗಿ ಸರಕಾರ ಪ್ರತಿ ವರ್ಷ ಹಲವು ಕೋಟಿ ರೂಪಾಯಿಗಳನ್ನು ವ್ಯಯ ಮಾಡಬೇಕಾಗುತ್ತದೆ. ಆದರೆ ಇದರಿಂದ ಸರಕಾರಕ್ಕೆ ಬರುವ ಆದಾಯ ಮಾತ್ರ ಶೂನ್ಯ. ಗೋಶಾಲೆಗಳಲ್ಲಾದರೂ ಈ ಗೋವುಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತದೆಯೇ ಎಂದು ನೋಡಿದರೆ ಅದೂ ಇಲ್ಲ. ದೇಶಾದ್ಯಂತ ಹಲವು ಗೋಶಾಲೆಗಳಲ್ಲಿ ಗೋವುಗಳು ಸರಿಯಾದ ನಿರ್ವಹಣೆಯಿಲ್ಲದೆ, ಆಹಾರವಿಲ್ಲದೆ ಸಾಯುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಗೋಶಾಲೆಗಳಿಂದಲೇ ಈ ಗೋವುಗಳು ನಿಗೂಢವಾಗಿ ಮಾಯವಾಗುತ್ತಿವೆ. ಹೀಗೆ ಮಾಯವಾದ ಗೋವುಗಳು ಎಲ್ಲಿಗೆ ಹೋಗುತ್ತವೆ ಎನ್ನುವುದರ ಬಗ್ಗೆಯೂ ಮಾಹಿತಿಯಿಲ್ಲ. ಗೋವುಗಳಿಗೆ, ರೈತರಿಗೆ, ಜನಸಾಮಾನ್ಯರಿಗೆ ಯಾವ ರೀತಿಯಲ್ಲೂ ಪ್ರಯೋಜನವಿಲ್ಲದ, ಈ ನಾಡಿನ ಅರ್ಥವ್ಯವಸ್ಥೆಗೆ ಯಾವ ರೀತಿಯಲ್ಲೂ ಪೂರಕವಲ್ಲದ ಈ ಗೋಶಾಲೆಗಳೆಂಬ ಹೊರೆಯನ್ನು ಸರಕಾರ ತನ್ನ ಕೊರಳಿಗೆ ಕಟ್ಟಿಕೊಳ್ಳುವುದು ಎಷ್ಟು ಸರಿ? ಎನ್ನುವುದು ಇದೀಗ ಸಾರ್ವಜನಿಕರ, ಆರ್ಥಿಕ ತಜ್ಞರ ಪ್ರಶ್ನೆಯಾಗಿದೆ.

ಸರಕಾರ ಯಾವ ಕಾರಣಕ್ಕಾಗಿ ಗೋಶಾಲೆಗಳನ್ನು ತೆರೆಯುತ್ತಿವೆ. ಇದು ನಿಜಕ್ಕೂ ಈ ರಾಜ್ಯದ ರೈತರ ಅಗತ್ಯವೇ? ಅನುಪಯುಕ್ತ ಗೋವುಗಳನ್ನು ನಿರ್ವಹಣೆ ಮಾಡುವುದಕ್ಕೆ ಗೋಶಾಲೆಗಳು ಬೇಕು ಎಂದು ಯಾವತ್ತಾದರೂ ಈ ನಾಡಿನ ರೈತರು ಸರಕಾರವನ್ನು ಕೇಳಿದ್ದಿದೆಯೇ? ತಮ್ಮ ಹತ್ತು ಹಲವು ಸಮಸ್ಯೆಗಳನ್ನು ಮುಂದಿಟ್ಟು ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವುಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ. ಆದರೆ ರೈತರು ಎಂದೂ ‘ಅನುಪಯುಕ್ತ ಗೋವುಗಳನ್ನು ನಿರ್ವಹಿಸಲು ಗೋಶಾಲೆಗಳು ಬೇಕು’ ಎಂದು ಸರಕಾರವನ್ನು ಒತ್ತಾಯಿಸಿರಲಿಲ್ಲ. ಸರಕಾರ ತಾನಾಗಿಯೇ ಗೋಶಾಲೆಗಳ ಬಗ್ಗೆ ಆಸಕ್ತಿ ತೋರಿಸುತ್ತಿದೆ. ಗೋಶಾಲೆಗಳನ್ನು ನಿರ್ಮಾಣ ಮಾಡುವಂತಹ ಅನಿವಾರ್ಯತೆ ಸರಕಾರಕ್ಕೆ ಹುಟ್ಟಿದ್ದು ಹೇಗೆ? ಜೀವಮಾನದಲ್ಲಿ ಎಂದಿಗೂ ಗೋವುಗಳನ್ನು ಸಾಕದ ಶೇ. 2ರಷ್ಟು ಜನರ ಬೇಡಿಕೆಯ ಮೇರೆಗೆ ಗೋಹತ್ಯೆಯನ್ನು ನಿಲ್ಲಿಸುವುದಕ್ಕಾಗಿ ಸರಕಾರ ಮಾಡಿದ ಜಾನುವಾರು ಮಾರಾಟ ವಿರೋಧಿ ಕಾನೂನು ಎಲ್ಲ ಸಮಸ್ಯೆಗಳಿಗೆ ಕಾರಣ. ಇದು ಅವೈಜ್ಞಾನಿಕವಾದ ಕಾನೂನು ಮಾತ್ರವಲ್ಲ, ಪ್ರಕೃತಿಯ ಉಪಯೋಗ ಸರಪಣಿಯನ್ನು ತುಂಡರಿಸುವ ಪ್ರಯತ್ನ. ಈ ಪ್ರಯತ್ನ ರೈತರಿಗೆ, ಮಾಂಸಾಹಾರಿಗಳಿಗೆ, ವ್ಯಾಪಾರಿಗಳಿಗೆ, ಬೃಹತ್ ಉದ್ಯಮಗಳಿಗೆ ಭಾರೀ ಹಾನಿಯನ್ನು ಉಂಟು ಮಾಡುತ್ತಿದೆ. ಮಾತ್ರವಲ್ಲ, ಜನಸಾಮಾನ್ಯರಿಗಾಗಿ ವ್ಯಯ ಮಾಡಬೇಕಾದ ಖಜಾನೆಯ ಹಣವನ್ನು, ಯಾವ ಪ್ರತ್ಯುತ್ಪನ್ನವೂ ಇಲ್ಲದ ಗೋಶಾಲೆಗಳಿಗೆ ವಿನಿಯೋಗಿಸಬೇಕಾದ ಅನಿವಾರ್ಯವನ್ನು ಸರಕಾರಕ್ಕೆ ತಂದಿಟ್ಟಿದೆ.

ಈ ಹಿಂದೆ ಹಟ್ಟಿಯಲ್ಲಿ ಅನುಪಯುಕ್ತ ಗೋವುಗಳಿದ್ದರೆ ಅವುಗಳನ್ನು ರೈತರೇ ನಿರ್ವಹಿಸುತ್ತಿದ್ದರು. ಅದರ ಸರ್ವ ಹಕ್ಕು ರೈತರದಾಗಿತ್ತು. ಅವರದನ್ನು ಯಾರಿಗೆ ಬೇಕಾದರೂ ಮಾರುವ ಅಧಿಕಾರ ಹೊಂದಿದ್ದರು. ಅನುಪಯುಕ್ತ ಗೋವುಗಳು ರೈತರಿಗೆ ಆರ್ಥಿಕವಾಗಿ ನೆರವಾಗುತ್ತಿದ್ದವು. ಹಾಗೆಯೇ ಮಾಂಸಾಹಾರಿಗಳಿಗೆ, ಚರ್ಮೋದ್ಯಮಕ್ಕೆ ದೊಡ್ಡ ಮಟ್ಟದಲ್ಲಿ ಇದರಿಂದ ಸಹಾಯವಾಗುತ್ತಿತ್ತು. ಗೋವುಗಳೊಂದಿಗೆ ಸಂಬಂಧವೇ ಇಲ್ಲದ, ಗೋ ಸಾಕಣೆಯನ್ನು ಅರ್ಥಶಾಸ್ತ್ರದ ಭಾಗವಾಗಿ ಕಾಣದೆ ಧರ್ಮಶಾಸ್ತ್ರದ ಭಾಗವಾಗಿ ನೋಡಿದ ಶೇ. 2ರಷ್ಟಿರುವ ಜನರಿಗಾಗಿ ಇಂದು ಗೋರಕ್ಷಣೆ ಕಾಯ್ದೆ ಜಾರಿಯಾಗಿದೆ. ಸರಕಾರ ಯಾವ ರೀತಿಯಲ್ಲಿ ಗೋವುಗಳನ್ನು ರಕ್ಷಣೆ ಮಾಡಲು ಹೊರಟಿದೆ? ಗೋ ಸಂತತಿ ಉಳಿಯಬೇಕಾದರೆ ಹೈನೋದ್ಯಮ ಲಾಭದಾಯಕವಾಗಿರಬೇಕು. ಆಗ ರೈತರು ಹೆಚ್ಚು ಹೆಚ್ಚು ಗೋವುಗಳನ್ನು ಸಾಕುತ್ತಾರೆ. ಅದು ಬೇರೆ ಬೇರೆ ರೂಪದಲ್ಲಿ ಆರ್ಥಿಕ ವ್ಯವಹಾರವಾಗಿ ಚಲಾವಣೆಯಲ್ಲಿ ಇರಬೇಕು.

ಕೋಳಿ ತಿನ್ನುವುದರಿಂದ ಕೋಳಿಯ ಸಂತಾನ ಕಡಿಮೆಯಾಗುತ್ತದೆ ಎಂದು ಕೋಳಿಯ ಹತ್ಯೆಯನ್ನು ನಿಷೇಧಿಸಿದರೆ ಏನಾಗಬಹುದು? ಗೋಹತ್ಯೆಯಿಂದ ಗೋವುಗಳ ಸಂಖ್ಯೆ ಯಾವ ರೀತಿಯಲ್ಲೂ ಕಡಿಮೆಯಾಗುವುದಿಲ್ಲ. ಬದಲಿಗೆ ಹೆಚ್ಚುತ್ತದೆ. ಯಾಕೆಂದರೆ, ಯಾರೂ ಮಾಂಸಕ್ಕಾಗಿ ಗೋವುಗಳನ್ನು ಸಾಕುವುದಿಲ್ಲ. ಅನುಪಯುಕ್ತ ಗೋವುಗಳನ್ನಷ್ಟೇ ಮಾಂಸಾಹಾರಿಗಳಿಗೆ ಮಾರುತ್ತಾರೆ. ಇದು ಇತರ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿದೆ. ಇದೀಗ ಸರಕಾರದ ಕಾನೂನಿನಿಂದಾಗಿ ರೈತರು ತಮ್ಮ ಅನುಪಯುಕ್ತ ಗೋವುಗಳನ್ನು ಏನು ಮಾಡುವುದೆಂದು ಅರಿಯದೆ ಅತಂತ್ರರಾಗಿದ್ದಾರೆ. ಬಹುತೇಕ ರೈತರು ಅನುಪಯುಕ್ತ ಗೋವುಗಳನ್ನು ಬೀದಿಗೆ ಬಿಡುತ್ತಿದ್ದಾರೆ. ಈ ಗೋವುಗಳನ್ನು ಕಳ್ಳಸಾಗಣೆದಾರರು ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದಾರೆ. ಗೋಶಾಲೆಗಳು ಅವ್ಯವಹಾರಗಳ ಗೂಡಾಗಿವೆ. ಗೋಶಾಲೆಯ ಹೆಸರಿನಲ್ಲಿ ಸರಕಾರದ ಹಣ ಪೋಲಾಗುತ್ತಿದೆಯೇ ಹೊರತು, ಗೋವುಗಳಿಗೆ ಯಾವ ರೀತಿಯಲ್ಲೂ ಸಹಾಯವಾಗುತ್ತಿಲ್ಲ. ಗೋಶಾಲೆಗಳಲ್ಲಿ ಅನುಪಯುಕ್ತ ಹಸುಗಳು ಅನುಭವಿಸುವ ನರಕಕ್ಕಿಂತ ಅವುಗಳು ಕಸಾಯಿಖಾನೆಯಲ್ಲಿ ಒಂದೇ ಏಟಿಗೆ ಸಾಯುವುದೇ ಒಳ್ಳೆಯದು ಎನ್ನುವುದು ರೈತರ ಅಭಿಪ್ರಾಯವಾಗಿದೆ. ಸರಕಾರ ತಕ್ಷಣ ಗೋಶಾಲೆಗಳೆಲ್ಲವನ್ನು ಮುಚ್ಚಬೇಕು. ಅನುಪಯುಕ್ತ ಹಸುವಿನ ಹಕ್ಕು ಆಯಾ ರೈತರದ್ದು ಎಂದು ಘೋಷಿಸಬೇಕು. ಗೋಶಾಲೆಗಳಿಗೆ ಸುರಿಯುವ ಹಣವನ್ನು ಗೋವುಗಳನ್ನು ಸಾಕುವ ರೈತರಿಗೆ, ಸರಕಾರಿ ಶಾಲೆಗಳಿಗೆ, ಆಸ್ಪತ್ರೆಗಳಿಗೆ ವ್ಯಯಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News