ನನ್ನ ಮಗನನ್ನು ಪೋಲಿಸರು ಕೊಂದು ಉಗ್ರ ಪಟ್ಟ ಕಟ್ಟಿದರು: ಉಗ್ರನನ್ನು ಕಲ್ಲಿನಿಂದ ಜಜ್ಜಿ ಕೊಂದ ಖ್ಯಾತಿಯ ಲತೀಫ್ ಆರೋಪ

Update: 2021-11-17 06:34 GMT
ಅಬ್ದುಲ್ ಲತೀಫ್ (Photo credit: NDTV)

ಶ್ರೀನಗರ: ಶ್ರೀನಗರದಲ್ಲಿ ಸೋಮವಾರ ನಡೆದಿದ್ದ ಎನ್‌ಕೌಂಟರ್ ನಲ್ಲಿ ಪೊಲೀಸರು ಉಗ್ರರೆಂಬ ಹಣೆಪಟ್ಟಿ ಕಟ್ಟಿ ಸಾಯಿಸಿದ ನಾಲ್ಕು ಮಂದಿಯಲ್ಲಿ ತನ್ನ ಪುತ್ರನೂ ಸೇರಿದ್ದಾನೆಂದು ಜಮ್ಮು ಕಾಶ್ಮೀರದ ರಂಬನ್ ಜಿಲ್ಲೆಯ ಗ್ರಾಮವೊಂದರಲ್ಲಿ 2005ರಲ್ಲಿ ಕಲ್ಲಿನಿಂದ ಹೊಡೆದು ಉಗ್ರನೊಬ್ಬನನ್ನು ಸಾಯಿಸಿ ಸುದ್ದಿಯಾಗಿದ್ದ ಅಬ್ದುಲ್ ಲತೀಫ್ ಮಗ್ರೆ ಆರೋಪಿಸಿದ್ದಾರೆ.

ಆದರೆ ಲತೀಫ್ ಪುತ್ರ 24 ವರ್ಷದ ಅಮೀರ್ ಮಗ್ರೆ ಒಬ್ಬ 'ಹೈಬ್ರಿಡ್' ಉಗ್ರ ಎಂದು ಪೊಲೀಸರು ಆರೋಪಿಸಿದ್ದಾರೆ. ಶ್ರೀನಗರದ ವಾಣಿಜ್ಯ ಸಂಕೀರ್ಣವೊಂದರೊಳಗೆ ನಡೆದ ಎನ್‌ಕೌಂಟರ್‌ನಲ್ಲಿ ಅಮೀರ್ ಹತ್ಯೆಗೀಡಾಗಿದ್ದ.

"ನಾನು ಕಲ್ಲಿನಿಂದ ಉಗ್ರನೊಬ್ಬನನ್ನು ಸಾಯಿಸಿದ್ದೇನೆ. ನಾನು ಉಗ್ರರ ಗುಂಡುಗಳನ್ನು ಎದುರಿಸಿದ್ದೇನೆ. ನನ್ನ ಸೋದರ ಸಂಬಂಧಿಯನ್ನು ಉಗ್ರರು ಹತ್ಯೆಗೈದಿದ್ದಾರೆ. ನಾವು 11 ವರ್ಷ ನಮ್ಮ ಮನೆಯಿಂದ ದೂರವುಳಿಯಬೇಕಾಯಿತು. ನನ್ನ ಮಕ್ಕಳನ್ನು ರಹಸ್ಯ ಸ್ಥಳಗಳಲ್ಲಿರಿಸಿ ಕಷ್ಟದಿಂದ ಅವರನ್ನು ಬೆಳೆಸಿದ್ದೇನೆ. ಆದರೂ ಉಗ್ರನೊಬ್ಬನನ್ನು ಕಲ್ಲಿನಿಂದ ಹೊಡೆದು ಸಾಯಿಸಿದ ನನ್ನ ಪುತ್ರನಿಗೇ ಉಗ್ರನೆಂಬ ಹಣೆಪಟ್ಟಿ ಕಟ್ಟಿ ಸಾಯಿಸಲಾಗಿದೆ,'' ಎಂದು ಲತೀಫ್ ನೋವಿನಿಂದ ಹೇಳಿದ್ದಾರೆ.

ಅಂತ್ಯಸಂಸ್ಕಾರಕ್ಕೆ ಪುತ್ರನ ಕಳೇಬರವನ್ನೂ ಪೊಲೀಸರು ನೀಡುತ್ತಿಲ್ಲ ಎಂದು ಅವರು ದೂರಿದ್ದಾರೆ.

ಸೋಮವಾರದ ಎನ್‌ಕೌಂಟರ್‌ನಲ್ಲಿ ವಾಣಿಜ್ಯ ಸಂಕೀರ್ಣದ ಮಾಲಕ ಸೇರಿದಂತೆ ಇಬ್ಬರು ಉದ್ಯಮಿಗಳು ಕೂಡ ಹತ್ಯೆಗೀಡಾಗಿದ್ದಾರೆ. ಅವರಿಬ್ಬರು ಉಗ್ರರ ಬೆಂಬಲಿಗರು ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News