ಅರುಣಾಚಲಪ್ರದೇಶ, ಡೋಕಾಲ ಸಮೀಪ ಚೀನಾದಿಂದ ವಸತಿ ನಿರ್ಮಾಣ: ಉಪಗ್ರಹ ಚಿತ್ರಗಳಲ್ಲಿ ಬಹಿರಂಗ

Update: 2021-11-18 18:00 GMT

ಹೊಸದಿಲ್ಲಿ, ನ. 17: ಚೀನಾ ಅರುಣಾಚಲಪ್ರದೇಶದಲ್ಲಿ ಕಟ್ಟಡ ಸಂಕೀರ್ಣಗಳನ್ನು ಹಾಗೂ ಸಿಕ್ಕಿಂನ ಡೋಕಾಲ ಸಮೀಪದ ಭೂತಾನ್‌ನ ಭೂಪ್ರದೇಶದಲ್ಲಿ ಹಲವು ಗ್ರಾಮಗಳನ್ನು ನಿರ್ಮಾಣ ಮಾಡಿರುವುದು ಬುಧವಾರ ಸಂಜೆ ಬಿಡುಗಡೆಗೊಂಡ ಉಪಗ್ರಹ ಚಿತ್ರಗಳಲ್ಲಿ ಬಹಿರಂಗವಾಗಿದೆ. ಭಾರತ-ಭೂತಾನ್-ಚೀನಾ ಸೇರುವ ಕೇಂದ್ರದ ಸಮೀಪ ಇರುವ ಡೋಕಾಲ ಪ್ರಸ್ಥಭೂಮಿಯಲ್ಲಿ 2017ರಲ್ಲಿ ಭಾರತ ಹಾಗೂ ಚೀನಾ ಸೇನಾ ಪಡೆಗಳ ನಡುವೆ 74 ದಿನಗಳ ಕಾಲ ಮುಖಾಮುಖಿ ಸಂಭವಿಸಿತ್ತು. 

ಅರುಣಾಚಲ ಪ್ರದೇಶದಲ್ಲಿ ನಿರ್ಮಾಣವಾದ ಕಟ್ಟಡ ಸಂಕೀರ್ಣಗಳ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಸೇನೆ, ಚೀನಾ ವಾಸ್ತವ ನಿಯಂತ್ರಣ ರೇಖೆಯ ಉತ್ತರದಲ್ಲಿರುವ ಚೀನಾ ಭೂಭಾಗದಲ್ಲಿ ಈ ಕಟ್ಟಡ ಸಂಕೀರ್ಣಗಳನ್ನು ನಿರ್ಮಾಣ ಮಾಡಿದೆ ಎಂದು ಪ್ರತಿಪಾದಿಸಿದೆ. ಉಪಗ್ರಹ ಚಿತ್ರ ಪರಿಣಿತರು ಬುಧವಾರ ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ ಫೋಟೊಗಳಲ್ಲಿ ಚೀನಾ ಭೂತಾನ್‌ನಲ್ಲಿ 100 ಚದರ ಕಿ.ಮೀ. (24,700 ಎಕರೆಗೂ ಅಧಿಕ)ಗೂ ಅಧಿಕ ಪ್ರದೇಶದಲ್ಲಿ ಹಲವು ಗ್ರಾಮಗಳನ್ನು ನಿರ್ಮಾಣ ಮಾಡಿರುವುದು ಕಂಡು ಬಂದಿದೆ. 

‘‘ಡೋಕಾಲ ಸಮೀಪದ ಭೂತಾನ್ ಹಾಗೂ ಚೀನ ನಡುವಿನ ವಿವಾದಾತ್ಮಕ ಭೂಪ್ರದೇಶದ 100 ಕಿ.ಮೀ. ವ್ಯಾಪ್ತಿಯಲ್ಲಿ 2020-21ರ ನಡುವೆ ಹಲವು ಹೊಸ ಗ್ರಾಮಗಳನ್ನು ನಿರ್ಮಾಣ ಮಾಡಿರುವುದು ಕಂಡು ಬಂದಿದೆ. ಇದು ಚೀನಾದ ಹೊಸ ಒಪ್ಪಂದದ ಭಾಗವೇ? ಅಥವಾ ಚೀನಾದ ಭೂಭಾಗದ ಹಕ್ಕು ಸ್ಥಾಪನೆಯೇ ?’’ ಎಂದು ಬೇಹುಗಾರಿಗೆ ವಿಶ್ಲೇಷಣೆ ನಡೆಸುವ ಜಾಗತಿಕ ಸಂಘಟನೆ ‘ದಿ ಇಂಟೆಲ್ ಲ್ಯಾಬ್’ ನ ಸಂಶೋಧಕರು ಟ್ವೀಟ್ ಮಾಡಿದ್ದಾರೆ. 

2020 ಮೇ ಹಾಗೂ 2021 ನವೆಂಬರ್ ನಡುವೆ ನಾಲ್ಕು ಗ್ರಾಮಗಳನ್ನು ನಿರ್ಮಿಸಲಾಗಿದೆ. ಈ ಪ್ರದೇಶದಲ್ಲಿ ಈಗ ಕೂಡ ನಿರ್ಮಾಣ ಚಟುವಟಿಕೆಗಳು ಮುಂದುವರಿದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಈ ಅವಧಿಯಲ್ಲಿ ಚೀನಾ ಹಾಗೂ ಭೂತಾನ್ ತಮ್ಮ ನಡುವಿನ ಗಡಿ ವಿವಾದವನ್ನು ಬಗೆ ಹರಿಸಲು ಅಕ್ಟೋಬರ್‌ನಲ್ಲಿ ತಿಳಿವಳಿಕಾ ಒಪ್ಪಂದಕ್ಕೆ ಸಹಿ ಹಾಕಿದ್ದವು ಎಂದು ಚಿಂತನ ಚಿಲುಮೆ ‘ಆಬ್ಸರ್ವರ್ ರಿಸರ್ಚ್ ಫೌಂಡೇಶನ್’ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News