ಎಫ್‌ಎಸ್‌ಎಲ್‌ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ: ಹೈಕೋರ್ಟ್

Update: 2021-11-18 18:27 GMT

ಬೆಂಗಳೂರು, ನ.18: ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಬಾಕಿಯಿರುವ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯನ್ನು ತುರ್ತಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ  ರಾಜ್ಯದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ(ಎಫ್‌ಎಸ್‌ಎಲ್) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ಕಾರ್ಯನಿರ್ವಹಣೆ ಸುಲಲಿತಗೊಳಿಸುವಂತೆ ಹೈಕೋರ್ಟ್, ರಾಜ್ಯ ಸರಕಾರಕ್ಕೆ ನಿರ್ದೇಶಿಸಿದೆ.

ಎಫ್‌ಎಸ್‌ಎಲ್‌ನಿಂದ ಪರೀಕ್ಷಾ ವರದಿಗಳನ್ನು ಪಡೆಯುವುದು ನಾಲ್ಕು ವರ್ಷಗಳಷ್ಟು ವಿಳಂಬ ಆಗುತ್ತಿರುವುದನ್ನು ಗಮನಿಸಿದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ, ರಾಜ್ಯ ಸರಕಾರಕ್ಕೆ ಈ ನಿರ್ದೇಶನ ನೀಡಿದೆ. 

ಆ.13ರ ವಿಚಾರಣೆಯಂದು ನ್ಯಾಯಾಲಯ ನೀಡಿದ್ದ ಮಧ್ಯಂತರ ನಿರ್ದೇಶನಗಳಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ಸಲ್ಲಿಸಿದ್ದ ಅನುಪಾಲನಾ ವರದಿಯನ್ನು ಪರಿಶೀಲಿಸಿದ ಪೀಠವು ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಕಾಗದದ ಮೇಲೆ ಮಾತ್ರ ನ್ಯಾಯಾಲಯದ ಆದೇಶವನ್ನು ಪಾಲಿಸಲಾಗಿದೆಯೇ ವಿನಹ ಆದೇಶದಲ್ಲಿ ಉಲ್ಲೇಖಿಸಲಾಗಿರುವ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು ಮತ್ತು ಇತರೆ ಅಧಿಕಾರಿಗಳ ಹುದ್ದೆಗಳನ್ನು ತುಂಬಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. 

ಎಫ್‌ಎಸ್‌ಎಲ್‌ನಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬುವುದರಿಂದ ರಾಜ್ಯದಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡಲು ಅನುಕೂಲವಾಗುತ್ತದೆ ಎಂದು ಆದೇಶದಲ್ಲಿ ಹೇಳಿರುವ ಪೀಠವು ಆದೇಶವನ್ನು ಸಂಪೂರ್ಣವಾಗಿ ಪಾಲನೆ ಮಾಡಲು ಆರು ವಾರಗಳ ಕಾಲಾವಕಾಶ ನೀಡಿದೆ.

ರಾಜ್ಯದ ವಿವಿಧ ಎಫ್‌ಎಸ್‌ಎಲ್‌ಗಳಲ್ಲಿ 3 ಜಂಟಿ ನಿರ್ದೇಶಕರು, 18 ಸಹಾಯಕ ನಿರ್ದೇಶಕರು, 35 ಹಿರಿಯ ವೈಜ್ಞಾನಿಕ ಅಧಿಕಾರಿಗಳು ಮತ್ತು 138 ವೈಜ್ಞಾನಿಕ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಸರ್ಕಾರ ತಿಳಿಸಿದೆ. ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ ವಿಧಿವಿಜ್ಞಾನದ ವರದಿ ಪಡೆಯಲು ಒಂದು ವರ್ಷ, ಕಂಪ್ಯೂಟರ್/ಮೊಬೈಲ್/ಆಡಿಯೊ ವಿಧಿವಿಜ್ಞಾನ ವರದಿ ಪಡೆಯಲು ಒಂದೂವರೆ ವರ್ಷ ಮತ್ತು ವಂಶವಾಹಿ ಪರೀಕ್ಷಾ ವರದಿ ಪಡೆಯಲು ಸರಾಸರಿ ಒಂದೂವರೆ ವರ್ಷ ಅಗತ್ಯವಿದೆ ಎಂದು ರಾಜ್ಯ ಸರಕಾರವು ಅಫಿಡವಿಟ್‌ನಲ್ಲಿ ವಿವರಣೆ ನೀಡಿದೆ.

ನ್ಯಾಯಾಲಯಕ್ಕೆ ಸಲಹೆ ಮಾಡಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು (ಕೆಎಸ್‌ಎಲ್‌ಎಸ್‌ಎ) ಹಿರಿಯ ವಕೀಲ ವಿ.ಎ.ಅರಬಟ್ಟಿ ಅವರನ್ನು ನೇಮಿಸಿದೆ. ವಿಚಾರಣೆಯ ಸಂದರ್ಭದಲ್ಲಿ ಅರಬಟ್ಟಿ ಅವರು ಸರಕಾರವು ನ್ಯಾಯಾಲಯದ ಆದೇಶ ಪಾಲಿಸಿಲ್ಲ ಎಂದು ಪೀಠದ ಗಮನ ಸೆಳೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News