​ಒಂದೂವರೆ ಗಂಟೆ ಅಮೆರಿಕದ ಅಧ್ಯಕ್ಷರಾದ ಕಮಲಾ ಹ್ಯಾರಿಸ್ !

Update: 2021-11-20 18:26 GMT
ಕಮಲಾ ಹ್ಯಾರಿಸ್ (Photo - PTI)

ಹೊಸದಿಲ್ಲಿ,ನ.20: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಶುಕ್ರವಾರ ವಾಡಿಕೆಯಂತೆ ಕೊಲೊನಸ್ಕೊಪಿ ವೈದ್ಯಕೀಯ ತಪಾಸಣೆಯ ಸಂದರ್ಭದಲ್ಲಿ 1 ತಾಸು 25 ನಿಮಿಷಗಳ ಕಾಲ ಅನಾಸ್ತೇಸಿಯಾಕ್ಕೆ ಒಳಗಾಗಬೇಕಾಗಿದ್ದರಿಂದ ಅವರು ತನ್ನ ಅಧ್ಯಕ್ಷೀಯ ಅಧಿಕಾರವನ್ನು ತಾತ್ಕಾಲಿಕವಾಗಿ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ಗೆ ಹಸ್ತಾಂತರಿಸಿದ್ದರು.

ಅಮೆರಿಕದ ಪ್ರಪ್ರಥಮ ಮಹಿಳಾ, ಪ್ರಪ್ರಥಮ ಕಪ್ಪು ಜನಾಂಗೀಯ ಹಾಗೂ ಪ್ರಪ್ರಥಮ ದಕ್ಷಿಣ ಏಶ್ಯ ಮೂಲದ ಉಪಾಧ್ಯಕ್ಷೆಯೆಂಬ ದಾಖಲೆಯನ್ನು ನಿರ್ಮಿಸಿರುವ ಕಮಲಾ ಹ್ಯಾರಿಸ್ ತಾತ್ಕಾಲಿಕವಾಗಿ ಅಧ್ಯಕ್ಷೀಯ ಅಧಿಕಾರವನ್ನು ವಹಿಸುವ ಮೂಲಕ ಇನ್ನೊಂದು ಹೊಸ ದಾಖಲೆ ನಿರ್ಮಿಸಿದ್ದಾರೆ. ಬೈಡೆನ್ ಅವರು ಅನಾಸ್ತೇಸಿಯಾದಲ್ಲಿದ್ದ ಸಮಯ ಕಮಲಾ ಹ್ಯಾರಿಸ್ ಅವರು ವೆಸ್ಟ್ ವಿಂಗ್‌ನಲ್ಲಿರುವ ತನ್ನ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದ್ದರು ಎಂದು ಅಧಿಕೃತ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಬೈಡೆನ್ ಅವರು ವೈದ್ಯಕೀಯ ತಪಾಸಣೆಗೆ ಒಳಗಾದ ಬಳಿಕ ಶ್ವೇತಭವನವು ಹೇಳಿಕೆಯೊಂದನ್ನು ನೀಡಿದ್ದು, ‘ ಅಮೆರಿಕ ಅಧ್ಯಕ್ಷರು ಇಂದು ಬೆಳಗ್ಗೆ 11:35ರ ವೇಳೆಗೆ ಉಪಾಧ್ಯಕ್ಷೆ ಹಾಗೂ ಶ್ವೇತಭವನ ಅಧಿಕಾರಿಗಳ ಜೊತೆ ಮಾತನಾಡಿದರು. ಅಮೆರಿಕ ಅಧ್ಯಕ್ಷ ಉಲ್ಲಸಿತರಾಗಿದ್ದಾರೆ ಹಾಗೂ ಆ ಸಮಯದಲ್ಲಿ ಅವರು ಅವರು ಕರ್ತವ್ಯಕ್ಕೆ ಮರಳಿದ್ದಾರೆ. ತನ್ನ ಉಳಿದ ದೈಹಿಕ ತಪಾಸಣೆಗಾಗಿ ಅವರು ವಾಲ್ಟರ್‌ರೀಡ್‌ನ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲಿದ್ದಾರೆ’’ ಎಂದು ಅದು ಹೇಳಿದೆ.

79 ವರ್ಷ ವಯಸ್ಸಿನ ಬೈಡನ್ ಅವರು ಅಮೆರಿಕದ ಅಧ್ಯಕ್ಷರಾದ ಬಳಿಕ ತನ್ನ ಚೊಚ್ಚಲ ದೈಹಿಕ ತಪಾಸಣೆಗಾಗಿ ವಾಲ್ಟರ್ ರೀಡ್ ವೈದ್ಯಕೀಯ ಕೇಂದ್ರಕ್ಕೆ ಶುಕ್ರವಾರ ಬೆಳಗ್ಗೆ ಆಗಮಿಸಿದ್ದರು’’ ಎಂದು ಶ್ವೇತಭವನ ವಿವರಿಸಿದೆ.

ವೈದ್ಯಕೀಯ ಚಿಕಿತ್ಸೆ ಅಥವಾ ತಪಾಸಣೆಗಾಗಿ ಅಮೆರಿಕ ಅಧ್ಯಕ್ಷರು ಅನಾಸ್ತೇಸಿಯಾವನ್ನು ಬಳಸಬೇಕಾದ ಸಂದರ್ಭದಲ್ಲಿ ಉಪಾಧ್ಯಕ್ಷರು, ಅಧ್ಯಕ್ಷೀಯ ಅಧಿಕಾರವನ್ನು ಪಡೆಯುವುದು ಅಮೆರಿಕದಲ್ಲಿ ಸಾಮಾನ್ಯವಾಗಿದೆ. ಈ ಹಿಂದೆ ಜಾರ್ಜ್ ಬುಶ್ ಅವರು ಅಮೆರಿಕ ಅಧ್ಯಕ್ಷರಾಗಿದ್ದಾಗ ಕೆಲವು ಬಾರಿ ಅವರು ಕೊಲೋನೊ ಸ್ಕೋಪಿ ತಪಾಸಣೆಗೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಆಗಿನ ಉಪಾಧ್ಯಕ್ಷ ಡಿಕ್ ಚೆನೆ ಅವರು ಅಧ್ಯಕ್ಷೀಯ ಅಧಿಕಾರವನ್ನು ನಿರ್ವಹಿಸಿದ್ದರು.

ಹ್ಯಾರಿಸ್ ಅವರಿಗೆ ತಾತ್ಕಾಲಿಕವಾಗಿ ಅಧ್ಯಕ್ಷೀಯ ಅಧಿಕಾರವನ್ನು ಹಸ್ತಾಂತರಿಸುವುದಕ್ಕಾಗಿ ಬೈಡೆನ್ ಅವರು ಈ ಬಗ್ಗೆ ಸದನದ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹಾಗೂ ಡೆಮಾಕ್ರಾಟಿಕ್ ಸೆನೆಟರ್ ಪ್ಯಾಟ್ರಿಕ್ ಲಿಯಾಹಿ ಅವರಿಗೆ ಪತ್ರವನ್ನು ಬರೆದು ಕಳುಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News