ಬಾಕಿ ವೇತನ ಕೇಳಿದ್ದಕ್ಕೆ ದಲಿತ ಕಾರ್ಮಿಕನ ಕೈ ಕತ್ತರಿಸಿದ ಮಾಲಕ

Update: 2021-11-21 18:33 GMT

ಭೋಪಾಲ, ನ. 21: ಬಾಕಿ ವೇತನ ಕೇಳಿದ್ದಕ್ಕೆ 45 ವರ್ಷದ ದಲಿತ ಕಾರ್ಮಿಕನೋರ್ವನ ಕೈಯನ್ನು ಆತನ ಮಾಲಕ ಕತ್ತರಿಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ದೋಲ್ಮಾವು ಗ್ರಾಮದಲ್ಲಿ ಶನಿವಾರ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಗಣೇಶ್ ಮಿಶ್ರಾ ಅವರ ಸಹೋದರ ರತ್ನೇಶ್ ಮಿಶ್ರಾ ಹಾಗೂ ಕೃಷ್ಣ ಕುಮಾರ್ ಮಿಶ್ರಾ ಅವರನ್ನು ಬಂಧಿಸಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ.

 ಸಂತ್ರಸ್ತ ಅಶೋಕ್ ಸಾಕೇತ್ ಪಾದ್ರಿ ಗ್ರಾಮದ ನಿವಾಸಿ. ಈತ ದೋಲ್ಮಾವು ಗ್ರಾಮದಲ್ಲಿ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಆದರೆ, ಮಾಲಕ ಗಣೇಶ್ ಮಿಶ್ರಾ ಬಾಕಿ ವೇತನ ನೀಡಲು ಸತಾಯಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಸಾಕೇತ್ ಇನ್ನೋರ್ವ ವ್ಯಕ್ತಿಯೊಂದಿಗೆ ತೆರಳಿ ಗಣೇಶ್ ಮಿಶ್ರಾ ಅವರನ್ನು ಶನಿವಾರ ಭೇಟಿಯಾಗಿ ಬಾಕಿ ವೇತನ ನೀಡುವಂತೆ ವಿನಂತಿಸಿದ್ದ. ಈ ಸಂದರ್ಭ ಅವರ ನಡುವೆ ವಾಗ್ವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ಮಿಶ್ರಾ ಹಾಗೂ ಇತರರು ಸಾಕೇತ್ ಮೇಲೆ ಹರಿತವಾದ ಆಯುಧಗಳಿಂದ ದಾಳಿ ನಡೆಸಿದರು. ಇದರಿಂದ ಸಾಕೇತ್ ಅವರ ಒಂದು ಕೈ ತುಂಡಾಯಿತು ಎಂದು ಉಪ ಪೊಲೀಸ್ ಅಧೀಕ್ಷಕ ಶಿವ ಕುಮಾರ್ ವರ್ಮಾ ತಿಳಿಸಿದ್ದಾರೆ.

ಆರೋಪಿಗಳು ತುಂಡಾದ ಕೈಯನ್ನು ಬಚ್ಚಿಡಲು ಪ್ರಯತ್ನಿಸಿದರು. ಅನಂತರ ಅದನ್ನು ಪತ್ತೆ ಹಚ್ಚಲಾಯಿತು ಎಂದು ವರ್ಮಾ ಹೇಳಿದ್ದಾರೆ.
ಪೊಲೀಸರು ಸಾಕೇತ್ನನ್ನು ತುಂಡಾದ ಕೈಗಳೊಂದಿಗೆ ಸಂಜಯ್ ಗಾಂಧಿ ಮೆಮೋರಿಯಲ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ತುಂಡಾದ ಕೈಯನ್ನು ಸಾಕೇತ್ಗೆ ಮರು ಜೋಡಿಸಿತು ಎಂದು ವರ್ಮಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News