ಬೆಂಗಳೂರಿನಲ್ಲಿ ಬೀಡು ಬಿಟ್ಟ ಎಸಿಬಿ

Update: 2021-11-24 13:35 GMT

ಬೆಂಗಳೂರು, ನ.23: ಭಾರಿ ಪ್ರಮಾಣದ ಅವ್ಯವಹಾರ ದೂರುಗಳನ್ನು ಆಧರಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಕಚೇರಿ ಮೇಲಿನ ದಾಳಿ ಪ್ರಕರಣ ಸಂಬಂಧ ತನಿಖೆ ಮುಂದುವರೆಸಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಮಂಗಳವಾರ 5 ಕಚೇರಿಗಳಲ್ಲಿ ಶೋಧ ಕಾರ್ಯ ಕೈಗೊಂಡಿತು.

ಇಲ್ಲಿನ ಆರ್‍ಟಿ ನಗರದಲ್ಲಿನ ಬಿಡಿಎ ಉತ್ತರ ವಿಭಾಗದ ಕಚೇರಿ, ವಿಜಯನಗರದ ಪಶ್ಚಿಮ ವಿಭಾಗದ ಕಚೇರಿ, ಎಚ್‍ಎಸ್‍ಆರ್ ಲೇಔಟ್‍ನ ಪೂರ್ವ ವಿಭಾಗ, ಬನಶಂಕರಿಯಲ್ಲಿನ ದಕ್ಷಿಣ ವಿಭಾಗದ ಬಿಡಿಎ ಅಧಿಕಾರಿಗಳ ಕಚೇರಿಗಳಲ್ಲಿ ಶೋಧ ಕಾರ್ಯ ನಡೆಸಿ, ಹಲವು ದಾಖಲೆಗಳನ್ನು ಜಪ್ತಿ ಮಾಡಿದರು.

ಬಗೆದಷ್ಟು ಅಕ್ರಮ: ಮಂಗಳವಾರ ಶೋಧ ಕಾರ್ಯ ಸಂದರ್ಭದಲ್ಲಿ ಉತ್ತರಹಳ್ಳಿ ಹೋಬಳಿಯ ಭಾರತ್ ಎಚ್‍ಬಿಸಿಎಸ್ ಲೇಔಟ್‍ನ ನಾಗರಿಕ ಸೌಲಭ್ಯ ನಿವೇಶನ(ಸಿ.ಎ.ಸೈಟ್)ಗಳನ್ನು ನಾಗರಿಕ ಸೌಲಭ್ಯಗಳ ಉದ್ದೇಶಕ್ಕಾಗಿ ಸಂಘ ಸಂಸ್ಥೆಗಳಿಗೆ ಹಂಚಿಕೆ ಮಾಡಿದ್ದು, ಈ ಸಂಘ ಸಂಸ್ಥೆಗಳು ಉದ್ದೇಶಿತ ಸೌಲಭ್ಯಗಳಿಗಾಗಿ ಬಳಕೆ ಮಾಡಿಕೊಳ್ಳದೆ ಷರತ್ತುಗಳ ಉಲ್ಲಂಘನೆ ಕಂಡುಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆದಿದೆ. 
ಇಲ್ಲಿನ ಎಚ್‍ಎಸ್‍ಆರ್ ಲೇಔಟಿನ 3ನೆ ಸೆಕ್ಟರ್ ಮತ್ತು ಬೆಂಗಳೂರು ನಗರ, ಮುಂದುವರೆದ ಮಹಾಲಕ್ಷ್ಮೀ ಬಡಾವಣೆ, ಸಿಎ ನಿವೇಶನಗಳನ್ನು ನಾಗರಿಕ ಸೌಲಭ್ಯ ನಿವೇಶನ(ಸಿಎ ಸೈಟ್)ಗಳನ್ನು ಬಿಡಿಎ ಅನುಮೋದಿತ ನಕ್ಷೆ ರೀತ್ಯಾ ಕಟ್ಟಡವನ್ನು ನಿರ್ಮಾಣ ಮಾಡದೇ ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದೆ.

ಅದೇ ರೀತಿ, ಕಡತಗಳ ಪರಿಶೀಲನೆಯಿಂದ ನಿವೇಶನ ಹಂಚಿಕೆದಾರರಿಗೆ ಹಂಚಿಕೆಯಾದ ಸ್ಥಳದಲ್ಲಿ ಹಂಚಿಕೆ ಮಾಡದೇ ನಿಯಮ ಬಾಹಿರವಾಗಿ ಬೇರೆ ಕಡೆಗಳಲ್ಲಿ ಹಂಚಿಕೆ ಮಾಡಿ ಅವ್ಯವಹಾರ ಮಾಡಿರುವುದು ಗೊತ್ತಾಗಿದೆ.
ಹಳೆಯ ಬಡಾವಣೆಗಳಲ್ಲಿ ದೊಡ್ಡ ನಿವೇಶನಗಳನ್ನು ಯಾರಿಗೂ ಸಹ ಹಂಚಿಕೆ ಮಾಡದೇ ಹಾಗೆಯೇ ಖಾಲಿ ಬಿಟ್ಟು ತಾತ್ಕಾಲಿಕವಾಗಿ ಖಾಸಗಿ ವ್ಯಕ್ತಿಗಳಿಗೆ ಶೆಡ್‍ಗಳನ್ನು ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟು ಸರಕಾರಕ್ಕೆ ನಷ್ಟವನ್ನು ಮಾಡಿರುವ ಪ್ರಕರಣಗಳು ತನಿಖೆಯಲ್ಲಿ ಬಯಲಿಗೆ ಬಂದಿವೆ.

ಪ್ರಮುಖವಾಗಿ ಜಮೀನು ಮಾಲಕರಿಂದ ಜಮೀನನ್ನು ಭೂ ಸ್ವಾಧೀನ ಪಡಿಸಿಕೊಂಡು ಜಮೀನು ಮಾಲಕರಿಗೆ ಪರಿಹಾರವನ್ನು ನೀಡಿ, ಭೂ ಮಾಲಕರಿಗೆ ಹಂಚಿಕೆಯಾಗಿದ್ದ ನಿವೇಶನಗಳನ್ನು ವಾಪಸ್ಸು ಬಿಡಿಎಗೆ ವಶಪಡಿಸಿಕೊಳ್ಳದೇ ಬೇರೆಯವರಿಗೆ ಹಂಚಿಕೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

ಮೂಲೆ ನಿವೇಶನ(ಕಾರ್ನರ್ ಸೈಟ್)ಗಳನ್ನು ಹರಾಜು ಪ್ರಕ್ರಿಯೆ ಮುಖಾಂತರ ಮಾರಾಟ ಮಾಡಬೇಕಾಗಿರುತ್ತದೆ. ಆದರೆ, ಹರಾಜು ಪ್ರಕ್ರಿಯೆ ಮಾಡದೇ ಮೂಲೆ ನಿವೇಶನ(ಕಾರ್ನರ್ ಸೈಟ್)ಗಳನ್ನು ಹಂಚಿಕೆ ಮಾಡಿ ಸರಕಾರಕ್ಕೆ ನಷ್ಟವನ್ನುಂಟು ಮಾಡಿರುವ ಪ್ರಕರಣವೂ ಪತ್ತೆಯಾಗಿದೆ. 
ವಿಭಾಗ ಕಚೇರಿಗಳಲ್ಲಿ ಕಡತಗಳ ಸಂಖ್ಯೆಯ ಆಧಾರದ ಮೇಲೆ ಖಚಿತ ಅಳತೆ ರೆಕಾರ್ಡ್ ಅನ್ನು ನಿರ್ವಹಣೆ ಮಾಡಬೇಕಾಗಿರುತ್ತದೆ. ಆದರೆ, ವಿಭಾಗ ಕಚೇರಿಗಳಲ್ಲಿ ಖಚಿತ ಅಳತೆಯ ರೆಕಾರ್ಡ್‍ಗಳನ್ನು ನಿರ್ವಹಣೆ ಮಾಡದಿರುವುದು ಕಂಡುಬಂದಿದೆ. 

ಮತ್ತೊಂದೆಡೆ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸಂಬಂಧಪಟ್ಟಂತೆ ಭೂ ಸ್ವಾಧೀನಪಡಿಸಿಕೊಂಡು, ಪರಿಹಾರವನ್ನು ನೈಜ ಜಮೀನು ಮಾಲಕರಿಗೆ ನೀಡದೇ 3ನೆ ವ್ಯಕ್ತಿಗೆ ನೀಡಿರುವುದು ಕಂಡುಬಂದಿದೆ. ಒಟ್ಟಿನಲ್ಲಿ ಎಸಿಬಿ ದಾಳಿ ನಡೆಸಿದ ದಿನದಿಂದ ಇದುವರೆಗೂ ಬಿಡಿಎ ಬಹುಕೋಟಿ ಅಕ್ರಮಗಳು ಬಯಲಿಗೆ ಬಂದಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ಅಧಿಕೃತ ಮೂಲಗಳು ತಿಳಿಸಿವೆ.

ದಾಳಿ ಹಿನ್ನೆಲೆ 

ಭಾರಿ ಪ್ರಮಾಣದ ಅವ್ಯವಹಾರ ಮತ್ತು ಭ್ರಷ್ಟಾಚಾರ ನಡೆಯುತ್ತಿರುವ ದೂರುಗಳನ್ನು ಆಧರಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕಚೇರಿ ಮೇಲೆ ನ.19ರಂದು ಎಸಿಬಿ ಆಡಳಿತ ವಿಭಾಗದ ಎಸ್ಪಿಗಳಾದ ಅಬ್ದುಲ್ ಅಹದ್, ಉಮಾ ಪ್ರಶಾಂತ್, ಯತೀಶ್ ಚಂದ್ರ ಹಾಗೂ ಐವರು ಡಿವೈಎಸ್‍ಪಿಗಳು, 12 ಇನ್‍ಸ್ಪೆಕ್ಟರ್‍ಗಳು, 50 ಸಿಬ್ಬಂದಿ ದಾಳಿ ನಡೆಸಿ ಶೋಧ ಕಾರ್ಯ ಕೈಗೊಂಡಿದ್ದಾರೆ.

ಎರಡು ದಿನದ ಬಳಿಕ ದಾಳಿ

ನ.19ರಂದು ದಾಳಿ ನಡೆಸಿದ್ದ ಎಸಿಬಿ ತನಿಖಾಧಿಕಾರಿಗಳು ಶನಿವಾರದವರೆಗೂ ಶೋಧ ಕಾರ್ಯ ಕೈಗೊಂಡಿದ್ದರು. ಆನಂತರ ಎರಡು ದಿನಗಳ ಕಾಲ ಸರಕಾರಿ ರಜೆ ಇದ್ದ ಹಿನ್ನೆಲೆ ಬಿಡಿಎ ಕಚೇರಿಯ ಎಲ್ಲ ಪ್ರವೇಶ ದ್ವಾರಗಳನ್ನೂ ಬಂದ್ ಮಾಡಿ, ಮೊಹರು ಹಾಕಲಾಗಿತ್ತು. ಮಂಗಳವಾರ ಮತ್ತೆ ಎಸಿಬಿ ತನಿಖಾಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದರು.

ದೂರು ಸಲ್ಲಿಕೆಗೆ ಎಸಿಬಿ ಮನವಿ

ಬಿಡಿಎನಿಂದ ವಂಚನೆ ಹಾಗೂ ಅನ್ಯಾಯಕ್ಕೆ ಒಳಗಾಗಿರುವ ಸಾರ್ವಜನಿಕರು ದಾಖಲೆಗಳ ಸಮೇತ ಲಿಖಿತ ದೂರು ಸಲ್ಲಿಸುವಂತೆ ಎಸಿಬಿ ಅಧಿಕಾರಿಗಳು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News