ರಾಜ್ಯದ 68 ಸ್ಥಳಗಳಲ್ಲಿ ಎಸಿಬಿ ದಾಳಿ: ಅಧಿಕಾರಿಗಳ ಮನೆಗಳಲ್ಲಿ ಚಿನ್ನದ ಖಜಾನೆ!

Update: 2021-11-24 15:21 GMT

ಬೆಂಗಳೂರು, ನ.24: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪ ಬೆನ್ನೆಲ್ಲೆ ರಾಜ್ಯ ಸರಕಾರದ ವಿವಿಧ ಇಲಾಖೆಗಳ 15 ಸರಕಾರಿ ಅಧಿಕಾರಿಗಳ ಮನೆ, ಕಚೇರಿಗಳು ಒಳಗೊಂಡಂತೆ ಒಟ್ಟು 68 ಸ್ಥಳಗಳ ಮೇಲೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ ತನಿಖಾಧಿಕಾರಿಗಳು, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ, ಚಿನ್ನಾಭರಣ, ದುಬಾರಿ ಬೆಲೆಯ ವಸ್ತುಗಳು ಸೇರಿದಂತೆ ಅಪಾರ ಸಂಪತ್ತು ಪತ್ತೆಹಚ್ಚಿದ್ದಾರೆ.

ಬುಧವಾರ ಮುಂಜಾನೆಯೇ ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 503 ಎಸಿಬಿ ತನಿಖಾಧಿಕಾರಿಗಳು 68 ತಂಡಗಳೊಂದಿಗೆ ಈ ಕಾರ್ಯಾಚರಣೆ ನಡೆಸಿ, ಸರಕಾರಿ ಅಧಿಕಾರಿ, ನೌಕರರ ಅಕ್ರಮ ಸಂಪತ್ತು ಬಯಲಿಗೆ ಎಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಬುರ್ಗಿಯ ಜಿಲ್ಲೆಯಲ್ಲಿರುವ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಎಸ್.ಎಂ.ಬಿರಾದರ್ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಕಲಬುರ್ಗಿಯಲ್ಲಿ 2 ಮನೆ, ಬೆಂಗಳೂರಿನಲ್ಲಿ 1 ನಿವೇಶನ, 3 ಕಾರುಗಳು, ಬೈಕ್, ಸ್ಕೂಲ್ ಬಸ್, 2 ಟ್ರಾಕ್ಟರ್, 54.50 ಲಕ್ಷ ರೂ.ನಗದು, ಚಿನ್ನಾಭರಣ, 36 ಎಕರೆ ಕೃಷಿ ಜಮೀನು, 15 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.

ಗದಗ ಜಿಲ್ಲೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ನಿವಾಸದ ಮೇಲೆ ದಾಳಿ ನಡೆಸಿದಾಗ ಶಿವಮೊಗ್ಗ ನಗರದಲ್ಲಿ 2 ಮನೆ, ವಿವಿಧ ಕಡೆಗಳಲ್ಲಿ 4 ನಿವೇಶನಗಳು, 9 ಕೆ.ಜಿ 400 ಗ್ರಾಂ ಚಿನ್ನದ ಬಿಸ್ಕೆಟ್ ಹಾಗೂ ಚಿನ್ನಾಭರಣ, 3 ಕೆ.ಜಿ ಬೆಳ್ಳಿ, ಎರಡು ಕಾರುಗಳು, ಮೂರು ಬೈಕ್, 8 ಎಕರೆ ಕೃಷಿ ಜಮೀನು, 15.94 ಲಕ್ಷ ರೂ. ನಗದು, 20 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಕೆಆರ್ ಪೇಟೆ ಸಬ್ ಡಿವಿಜನ್ ಎಚ್‍ಎಲ್‍ಬಿಸಿ-3 ಕಾರ್ಯಪಾಲಕ ಅಭಿಯಂತರ ಕೆ.ಶ್ರೀನಿವಾಸ್ ಮನೆಯಲ್ಲಿ ಮೈಸೂರಿನಲ್ಲಿ ಒಂದು ವಾಸದ ಮನೆ, ಫ್ಲಾಟ್, ಎರಡು ನಿವೇಶನ, 4 ಎಕರೆ 34 ಗುಂಟೆ ಕೃಷಿ ಜಮೀನು, ನಂಜನಗೂಡಿನಲ್ಲಿ 1 ಫಾರ್ಮ್ ಹೌಸ್, ಎರಡು ಕಾರು, ಎರಡು ಬೈಕ್, 1 ಕೆಜಿ ಚಿನ್ನಾಭರಣಗಳು, 8 ಕೆ.ಜಿ 840 ಗ್ರಾಂ ಬೆಳ್ಳಿ, 9.85 ಲಕ್ಷ ರೂ. ನಗದು, ವಿವಿಧ ಬ್ಯಾಂಕ್‍ಗಳಲ್ಲಿ 22 ಲಕ್ಷ ರೂ.ಗಳ ಠೇವಣಿ ಹಾಗೂ 8 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಬೆಳಕಿಗೆ ಬಂದಿವೆ.

ಮಂಗಳೂರು ಮಹಾನಗರ ಪಾಲಿಕೆಯ ಸ್ಮಾರ್ಟ್ ಸಿಟಿ ಕಾರ್ಯಪಾಲಕ ಅಭಿಯಂತರ ಕೆ.ಎಸ್.ಲಿಂಗೇಗೌಡ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿ, ಶೋಧ ಕಾರ್ಯ ಕೈಗೊಂಡಾಗ, ಮಂಗಳೂರಿನಲ್ಲಿ ಒಂದು ವಾಸದ ಮನೆ, ಚಾಮರಾಜನಗರ ಮತ್ತು ಮಂಗಳೂರಿನಲ್ಲಿ 3 ನಿವೇಶನ, ಎರಡು ಕಾರು, ಒಂದು ಬೈಕ್, 1 ಕೆಜಿ ಬೆಳ್ಳಿ ಆಭರಣ, 10 ಲಕ್ಷ ರೂ. ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಸಕಾಲ ಮಷಿನ್ ಆಡಳಿತಾಧಿಕಾರಿ ಎಲ್.ಸಿ.ನಾಗರಾಜ್ ಅವರ ನಿವಾಸ ಹಾಗೂ ಬೆಂಗಳೂರಿನ ಬಹುಮಹಡಿಗಳ ಕಟ್ಟಡದ ಕಚೇರಿ ಮೇಲಿನ ದಾಳಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಒಂದು ವಾಸದ ಮನೆ ಹಾಗೂ ನಿವೇಶನ, ನೆಲಮಂಗಲದಲ್ಲಿ ಒಂದು ವಾಸದ ಮನೆ, ನೆಲಮಂಗಲ ತಾಲೂಕಿನಲ್ಲಿ 11 ಎಕರೆ 26 ಗುಂಟೆ ಜಮೀನು, ನೆಲಮಂಗಲದಲ್ಲಿ ಕೈಗಾರಿಕಾ ಉದ್ದೇಶದ ಒಂದು ಕಟ್ಟಡ, 3 ಕಾರುಗಳು, 1.76 ಕೆಜಿ ಚಿನ್ನಾಭರಣಗಳು, 7 ಕೆ.ಜಿ 284 ಗ್ರಾಂ ಬೆಳ್ಳಿ ಸಾಮಾನುಗಳು, 43 ಲಕ್ಷ ರೂ. ನಗದು, ಸುಮಾರು 14 ಲಕ್ಷರೂ.ಗಳ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಬಿಬಿಎಂಪಿ ಬಾಲಕ ಮತ್ತು ಬಾಲಕಿಯರ ಪ್ರೌಢಶಾಲೆಯ ಡಿ ಗ್ರೂಪ್ ನೌಕರ ಜಿ.ವಿ.ಗಿರಿ ಮನೆಯಲ್ಲಿ ಬೆಂಗಳೂರು ನಗರದಲ್ಲಿ 6 ವಾಸದ ಮನೆಗಳು, 4 ಕಾರುಗಳು, 4 ಬೈಕ್, 8 ಕೆಜಿ ಬೆಳ್ಳಿ ಸಾಮಾನುಗಳು, 1.18 ಲಕ್ಷ ನಗದು ಹಣ ಹಾಗೂ ಸುಮಾರು 15 ಲಕ್ಷ ರೂ.ಬೆಲೆಬಾಳುವ ಗೃಹೋಪಯೋಗಿ ವಸ್ತುಗಳ ದಾಖಲೆ ಪತ್ರಗಳು ಪತ್ತೆಯಾಗಿವೆ.

ಯಲಹಂಕ ಸರಕಾರಿ ಆಸ್ಪತ್ರೆಯ ಪಿಸಿಯೋಥೆರಪಿಸ್ಟ್ ಎಸ್.ಎಸ್. ರಾಜಶೇಖರ್ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದಾಗ ಯಲಹಂಕದ ಮಾರಸಂದ್ರದಲ್ಲಿ 1 ಫ್ಲಾಟ್, ಶಿವನಹಳ್ಳಿಯಲ್ಲಿ 2 ಅಂತಸ್ತಿನ ಒಂದು ಫ್ಲಾಟ್ ಮತ್ತು ತಳ ಮಹಡಿಯಲ್ಲಿ ಖಾಸಗಿ ಆಸ್ಪತ್ರೆ, ಯಲಹಂಕದ ಮೈಲನಹಳ್ಳಿಯಲ್ಲಿ ಒಂದು ನಿವೇಶನ, ಒಂದು ಕಾರು, ಬೈಕ್ ವಾಹನ ಹಾಗೂ ಸುಮಾರು 4 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಘಟಕದ ಮಾಜಿ ಅಧ್ಯಕ್ಷರೂ ಆದ ಬಿಬಿಎಂಪಿ ಪ್ರಥಮ ದರ್ಜೆ ಸಹಾಯಕ ಮಾಯಣ್ಣ ಅವರ ನಿವಾಸದ ಮೇಲೆ ದಾಳಿ ನಡೆಸಿದಾಗ ಬೆಂಗಳೂರಿನಲ್ಲಿ ನಾಲ್ಕು ಮನೆ, ವಿವಿಧೆಡೆ ಆರು ನಿವೇಶನಗಳು, ಎರಡು ಎಕರೆ ಕೃಷಿ ಭೂಮಿ, ಎರಡು ಬೈಕ್, ಒಂದು ಕಾರು, 59 ಸಾವಿರ ರೂ. ನಗದು, 10 ಲಕ್ಷ ರೂ ನಿಶ್ಚಿತ ಠೇವಣಿ(ಎಫ್‍ಡಿ), ಉಳಿತಾಯ ಖಾತೆ(ಎಸ್‍ಬಿ)ಯಲ್ಲಿ 1.50 ಲಕ್ಷ ರೂ. ಸುಮಾರು 600 ಗ್ರಾಂ ಚಿನ್ನಾಭರಣ, 3 ಸ್ಥಳಗಳಲ್ಲಿ ಬೇನಾಮಿ ಆಸ್ತಿ ಹಾಗೂ ಸುಮಾರು 12 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಬೆಳಕಿಗೆ ಬಂದಿವೆ.

ಬಳ್ಳಾರಿಯ ನಿವೃತ್ತ ಸಬ್ ರಿಜಿಸ್ಟ್ರಾರ್ ಕೆ.ಎಸ್.ಶಿವಾನಂದ್ ಅವರ ಮನೆ ಮೇಲೆ ದಾಳಿ ನಡೆಸಿದಾಗ ಮಂಡ್ಯ ನಗರದಲ್ಲಿ ಒಂದು ಮನೆ, ಬೆಂಗಳೂರಿನಲ್ಲಿ ಒಂದು ನಿವೇಶನ, ಒಂದು ಕಾರು, 2 ಬೈಕ್, ಶಕ್ರಪುರ ಗ್ರಾಮದಲ್ಲಿ 1 ವಾಣಿಜ್ಯ ಸಂಕೀರ್ಣ, ಬಳ್ಳಾರಿ ಜಿಲ್ಲೆಯ ಮೋಕಾ ಗ್ರಾಮದಲ್ಲಿ ಸುಮಾರು 7 ಎಕರೆ ಕೃಷಿ ಜಮೀನು, ಹಾಗೂ ಸುಮಾರು 8 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ಗೋಕಾಕಿನ ಹಿರಿಯ ಮೋಟಾರು ನಿರೀಕ್ಷಕ ಸದಾಶಿವ ರಾಯಪ್ಪ ಮರಲಿಂಗಣ್ಣನವರ್ ನಿವಾಸ ಹಾಗೂ ಕಚೇರಿಯಲ್ಲಿ ನಡೆಸಿದ ದಾಳಿ ಸಂದರ್ಭದಲ್ಲಿ ಬೆಳಗಾವಿ ನಗರದಲ್ಲಿ 1 ವಾಸದ ಮನೆ, 22 ಎಕರೆ ಕೃಷಿ ಜಮೀನು, 1 ಕೆ.ಜಿ 135 ಗ್ರಾಂ ಚಿನ್ನಾಭರಣ, ನಗದು ಹಣ 8.22 ಲಕ್ಷ ರೂ. ನಗದು, 5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿರುತ್ತವೆ. 

ಸಹಕಾರ ಇಲಾಖೆಯ ರಾಯಬಾಗ್ ಅಭಿವೃದ್ಧಿ ಅಧಿಕಾರಿ ಅಡವಿ ಸಿದ್ದೇಶ್ವರ ಕಾರೆಪ್ಪ ಮಸ್ತಿ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದಾಗ ಬೈಲಹೊಂಗಲ ನಗರದಲ್ಲಿ 2 ವಾಸದ ಮನೆ, 4 ನಿವೇಶನಗಳು, 4 ಕಾರುಗಳು, 6 ಬೈಕ್, 263 ಗ್ರಾಂ ಚಿನ್ನಾಭರಣ, 945 ಗ್ರಾಂ ಬೆಳ್ಳಿ ಸಾಮಾನುಗಳು, 1.50 ಲಕ್ಷ ರೂ. ನಗದು, ಬ್ಯಾಂಕ್ ಠೇವಣಿ ಮತ್ತು ಷೇರ್‍ಗಳು, ಸುಮಾರು 5 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. 

ಬೆಳಗಾವಿಯ ಹೆಸ್ಕಾಂ ಲೈನ್ ಮೆಕಾನಿಕ್ ಗ್ರೇಡ್-2 ಅಧಿಕಾರಿ ನಾಥಾಜಿ ಪೀರಾಜಿ ಪಾಟೀಲ ಮನೆ ಮತ್ತು ಕಚೇರಿಯಲ್ಲಿ ಬೆಳಗಾವಿ ನಗರದಲ್ಲಿ 1 ವಾಸದ ಮನೆ, ಬೆಳಗಾವಿ ನಗರದಲ್ಲಿ 2 ನಿವೇಶನ, ಒಂದು ಕಾರು, ಒಂದು ಬೈಕ್, 239 ಗ್ರಾಂ ಚಿನ್ನಾಭರಣ, 1 ಕೆ.ಜಿ 803 ಗ್ರಾಂ ಬೆಳ್ಳಿ ಸಾಮಾನುಗಳು, 38 ಸಾವಿರ ರೂ.ನಗದು, 20 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ದೊಡ್ಡಬಳ್ಳಾಪುರ ಕಸಬಾ-2 ರಾಜಸ್ವ ನಿರೀಕ್ಷಕ ಲಕ್ಷ್ಮೀನರಸಿಂಹಯ್ಯ ನಿವಾಸದಲ್ಲಿ ವಿವಿಧೆಡೆ 5 ವಾಸದ ಮನೆಗಳು, 6 ನಿವೇಶನಗಳು, ದೊಡ್ಡಬಳ್ಳಾಪುರ ತಾಲೂಕಿನಲ್ಲಿ 25 ಗುಂಟೆ ಜಮೀನು, 765 ಗ್ರಾಂ ಚಿನ್ನಾಭರಣ, 15 ಕೆ.ಜಿ ಬೆಳ್ಳಿ ಸಾಮಾನುಗಳು, ಒಂದು ಕಾರು, ಎರಡು ಬೈಕ್‍ಗಳು, ನಗದು ಹಣ 1.13 ಲಕ್ಷ ರೂ.ಬೆಳಕಿಗೆ ಬಂದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿವೃತ್ತ ಯೋಜನಾ ನಿರ್ದೇಶಕ ಆರ್.ಎನ್.ವಾಸುದೇವ್ ಬಳಿ ಬೆಂಗಳೂರಿನಲ್ಲಿ 5 ವಾಸದ ಮನೆಗಳು, ನೆಲಮಂಗಲ ತಾಲ್ಲೂಕಿನ ಸೋಂಪುರ ಗ್ರಾಮದಲ್ಲಿ 4 ಮನೆಗಳು, ಬೆಂಗಳೂರು ನಗರದಲ್ಲಿ 8 ನಿವೇಶನಗಳು, ನೆಲಮಂಗಲ ಹಾಗೂ ಮಾಗಡಿ ತಾಲೂಕಿನಲ್ಲಿ ಒಟ್ಟು 10 ಎಕರೆ 20 ಗುಂಟೆ ಕೃಷಿ ಜಮೀನು, 850 ಗ್ರಾಂ ಚಿನ್ನಾಭರಣಗಳು, 9 ಕೆಜಿ 500 ಗ್ರಾಂ ಬೆಳ್ಳಿ ಸಾಮಾನುಗಳು, ನಗದು ಹಣ 15 ಲಕ್ಷ ರೂ. ಸುಮಾರು 98 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ.

ನಂದಿನಿ ಹಾಲು ಉತ್ಪನ್ನ ಪ್ರಧಾನ ವ್ಯವಸ್ಥಾಪಕ ಬಿ.ಕೃಷ್ಣಾರೆಡ್ಡಿ ಅವರ ಬಳಿ ವಿವಿಧ ನಗರದಲ್ಲಿ 3 ವಾಸದ ಮನೆಗಳು, ವಿವಿಧ ಕಡೆಗಳಲ್ಲಿ 9 ನಿವೇಶನಗಳು, ಚಿಂತಾಮಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಒಟ್ಟು 5 ಎಕರೆ 30 ಗುಂಟೆ ಕೃಷಿ ಜಮೀನು, ಹೊಸಕೋಟೆ ತಾಲೂಕಿನಲ್ಲಿ 1 ಪೆಟ್ರೋಲ್ ಬಂಕ್, 383 ಗ್ರಾಂ ಚಿನ್ನಾಭರಣ, 3.395 ಗ್ರಾಂ ಬೆಳ್ಳಿ ಸಾಮಾನುಗಳು, ನಗದು ಹಣ 3 ಲಕ್ಷ ರೂ. ಪತ್ತೆಯಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ಅಧಿಕೃತ ಮೂಲಗಳು ತಿಳಿಸಿವೆ.

ಪೈಪ್‍ನಲ್ಲಿತ್ತು ಕಂತೆ ಕಂತೆ ನೋಟು!

ಕಲಬುರ್ಗಿಯ ಗುಬ್ಬಿ ಕಾಲನಿಯಲ್ಲಿರುವ ಲೋಕೋಪಯೋಗಿ ಇಲಾಖೆ ಕಿರಿಯ ಇಂಜಿನಿಯರ್ ಎಸ್.ಎಂ.ಬಿರಾದರ್ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳ ದಾಳಿ ನಡೆಸಿದಾಗ ಮನೆಯ ಹೊರಭಾಗದ ಪೈಪ್‍ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿದೆ.

ಬುಧವಾರ ಬೆಳಗಿನ ಜಾವ ಎಸಿಬಿ ಅಧಿಕಾರಿಗಳು ಮನೆಯ ಮೇಲೆ ದಾಳಿ ನಡೆಸಿದಾಗ ಅನುಮಾನಗೊಂಡ ಶಾಂತಗೌಡ 10 ನಿಮಿಷ ಬಾಗಿಲು ತೆರೆಯದೆ ಸತಾಯಿಸಿದ್ದರು. ಈ ವೇಳೆ ಪೈಪ್‍ನಲ್ಲಿ ಹಣ, ಚಿನ್ನಾಭರಣವನ್ನು ಬಿಸಾಕಿದ್ದಾರೆ ಎಂದು ತಿಳಿದುಬಂದಿದೆ.

ಮನೆಯನ್ನು ತಪಾಸಣೆ ನಡೆಸಿದ ಅಧಿಕಾರಿಗಳಿಗೆ ಪೈಪ್‍ನಲ್ಲಿ ಹಣ ಇರುವುದು ಗೊತ್ತಾಗಿ, ಕಾರ್ಮಿಕರೊಬ್ಬರನ್ನು ಕರೆತಂದು ಹಣವನ್ನು ಹೊರತೆಗೆದು ಲೆಕ್ಕಹಾಕಿದರು.

ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ

ಹಿರಿಯ ಅಧಿಕಾರಿಯೊಬ್ಬರು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ನಾನು ಪ್ರಾಮಾಣಿಕವಾಗಿ ಇದ್ದು, ಪದೇ ಪದೇ ನನ್ನ ಮೇಲೆ ದಾಳಿ ಮಾಡಿದ್ದಾರೆ. ಇಂತಹ ದಾಳಿಗೆ ಭಯ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ.

-ಎಲ್.ಸಿ.ನಾಗರಾಜ್, ಸಕಾಲ ಮಷಿನ್ ಆಡಳಿತಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News