ಕೇರಳದ ಅನುಪಮಾಗೆ ಕೊನೆಗೂ ಜಯ: ಆಂಧ್ರದಿಂದ ತಂದಿದ್ದ ಮಗು ಆಕೆಯದ್ದೇ ಎಂದು ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತು

Update: 2021-11-24 05:29 GMT

ತಿರುವನಂತಪುರಂ: ಕೇರಳದ ಅನುಪಮಾ ಮತ್ತಾಕೆಯ ಸಂಗಾತಿ ಅಜಿತ್ ಗೆ ದೊಡ್ಡ ಸಮಾಧಾನ ತರುವ ಬೆಳವಣಿಗೆಯಲ್ಲಿ ದೂರದ ಆಂಧ್ರ ಪ್ರದೇಶದ ದಂಪತಿಯೊಂದಕ್ಕೆ ದತ್ತು ನೀಡಲಾಗಿದ್ದ ಮಗುವೊಂದರ ನಿಜವಾದ ಹೆತ್ತವರು ಅವರೆಂದು ಡಿಎನ್‌ಎ ಪರೀಕ್ಷೆ ಸಾಬೀತುಪಡಿಸಿದೆ. ಮಕ್ಕಳ ಕಲ್ಯಾಣ ಸಮಿತಿ ಡಿಎನ್‌ಎ ಪರೀಕ್ಷೆಗೆ ಆದೇಶಿಸಿದ ನಂತರ ತಿರುವನಂತಪುರಂನ ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿಯಲ್ಲಿ ಇಬ್ಬರು ಡಿಎನ್‌ಎ ಪರೀಕ್ಷೆಗೊಳಗಾಗಿದ್ದಾರೆ.

ಆದಷ್ಟು ಬೇಗ ಮಗು ತಮ್ಮ ಮಡಿಲು ಸೇರಬಹುದು ಎಂದು ಹೇಳಿರುವ ಅನುಪಮಾ ತಮ್ಮ ಬೇಡಿಕೆ ಈಡೇರುವ ತನಕ  ಹೋರಾಡುವುದಾಗಿ ಹೇಳಿದ್ದಾರೆ. ಮಗುವಿನ ಅಪಹರಣ ಹಾಗೂ ದತ್ತು ನೀಡಿಕೆ ಹಿಂದೆ ಯಾರೆಲ್ಲಾ ಇದ್ದಾರೆಂಬ ಕುರಿತು ಸೂಕ್ತ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ ಎಂದು thenewsminute.com ವರದಿ ಮಾಡಿದೆ.

ಅಕ್ಟೋಬರ್ 19, 2020ರಂದು ಗಂಡು ಮಗುವಿಗೆ ಅನುಪಮಾ ಜನ್ಮ ನೀಡಿದ್ದರು. ಆದರೆ ಅನುಮತಿಯಿಲ್ಲದೆ ಆಕೆಯ ಹೆತ್ತವರು ಮಗುವನ್ನು ದತ್ತು ನೀಡಿದ್ದರು. ಆ ಸಮಯ ಆಕೆಗೆ ವಿವಾಹವಾಗಿರದೇ ಇದ್ದುದೇ ಇದಕ್ಕೆ ಕಾರಣ ಹಾಗೂ ಆಕೆಯ ಹೆತ್ತವರಿಗೆ ಆಕೆ ಹಾಗೂ ಅಜಿತ್ ನಡುವಿನ ಸಂಬಂಧವೂ ಇಷ್ಟವಿರಲಿಲ್ಲ. ಅನುಪಮಾ ಸೋದರಿಯ ವಿವಾಹವಾದ ನಂತರವಷ್ಟೇ ಅವರಿಬ್ಬರ ಸಂಬಂಧ ಒಪ್ಪುವುದಾಗಿಯೂ ಹೇಳಿದ್ದ ಕುಟುಂಬ ಆಕೆಯ ಮಗುವನ್ನು ಆಕೆಯ ಅರಿವಿಗಿಲ್ಲದಂತೆ ಇಲೆಕ್ರ್ಟಾನಿಕ್ ತೊಟ್ಟಿಲಿನಲ್ಲಿ ತ್ಯಜಿಸಿತ್ತು.

ಮಗುವನ್ನು ನಂತರ ಆಂಧ್ರದ ದಂಪತಿಗೆ ದತ್ತು ನೀಡಲಾಗಿತ್ತು. ಮಗುವನ್ನು ಕೇರಳ ರಾಜ್ಯ  ಮಕ್ಕಳ ಕಲ್ಯಾಣ ಮಂಡಳಿಯ ಮುಖಾಂತರ  ದತ್ತು ನೀಡಲಾಗಿತ್ತು ಎಂದು ಅನುಪಮಾ ಸಲ್ಲಿಸಿದ ದೂರಿನನ್ವಯ ಕುಟುಂಬ ನ್ಯಾಯಾಲಯವೊಂದು ದತ್ತು ಪ್ರಕ್ರಿಯೆಗೆ ತಡೆ ಹೇರಿತ್ತು. ನಂತರ ಮಕ್ಕಳ ಕಲ್ಯಾಣ ಸಮಿತಿಯ ಸೂಚನೆಯಂತೆ ಮಗುವನ್ನು ಅಧಿಕಾರಿಗಳು ಆಂಧ್ರದಿಂದ ಕೇರಳಕ್ಕೆ ಕರೆತಂದಿದ್ದರು.

ಅನುಪಮಾ ಅವರ ತಂದೆ ಸ್ಥಳೀಯ ಸಿಪಿಐಎಂ ನಾಯಕರಾಗಿರುವುದರಿಂದ ಈ ಪ್ರಕರಣದಲ್ಲಿ ತಮಗೆ ಯಾವುದೇ ಸಹಕಾರ ದೊರೆತಿರಲಿಲ್ಲ ಎಂದು ಅನುಪಮಾ ದೂರಿದ್ದರು. ಘಟನೆಯ ಇಲಾಖಾ ತನಿಖೆಗೆ ಸರಕಾರ ಆದೇಶಿಸಿತ್ತಲ್ಲದೆ ಪೆರೂರುಕ್ಕಡ ಪೊಲೀಸರ ಪ್ರಕಾರ ಅನುಪಮಾ ಅವರ ಹೆತ್ತವರು, ಸೋದರಿ, ಸೋದರಿಯ ಪತಿ ಹಾಗೂ ತಂದೆಯ ಇಬ್ಬರು ಸ್ನೇಹಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಕಾನೂನು ಸಲಹೆಗಾಗಿ ಕಾಯುತ್ತಿರುವುದರಿಂದ ಕ್ರಮಕ್ಕೆ ವಿಳಂಬವಾಗಿದೆ ಎಂದೂ ಪೊಲೀಸರು ಹೇಳಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News