ವಾಯು ಮಾಲಿನ್ಯ ನಿಯಂತ್ರಿಸಲು 3 ದಿನದೊಳಗೆ ಕ್ರಮ ಕೈಗೊಳ್ಳಿ: ಕೇಂದ್ರಕ್ಕೆ ಸೂಚಿಸಿದ ಸುಪ್ರೀಂಕೋರ್ಟ್

Update: 2021-11-24 17:50 GMT

ಹೊಸದಿಲ್ಲಿ: ವಾಯುಮಾಲಿನ್ಯದಿಂದ ದಿಲ್ಲಿಯಲ್ಲಿ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್, ವಾಯು ಗುಣಮಟ್ಟ ಮತ್ತೆ ಹದಗೆಡಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. "ನಾವು ಗಾಳಿಯ ದಿಕ್ಕಿನೊಂದಿಗೆ ಹೋಗಲು ಸಾಧ್ಯವಿಲ್ಲ. ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು?" ಎಂದು ಕೇಂದ್ರ ಸರಕಾರವನ್ನು ಕೇಳಿದೆ. ಮುಂದಿನ ಮೂರು ದಿನಗಳವರೆಗೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಆದೇಶಿಸಿದೆ.

ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಗಾಳಿಯ ಗುಣಮಟ್ಟ ಸುಧಾರಿಸುವ ನಿರೀಕ್ಷೆಯಿದೆ. ನಾವು ಮೂರು ದಿನಗಳ ನಂತರ ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ" ಎಂದು ಅವರು ಹೇಳಿದರು.

‘‘ಇದು ರಾಷ್ಟ್ರ ರಾಜಧಾನಿ. ನಾವು ಜಗತ್ತಿಗೆ ರವಾನಿಸುತ್ತಿರುವ ಸಂದೇಶವನ್ನು ನೋಡಿ. ಪೂರ್ವ ನಿರೀಕ್ಷಣೆಯಿಂದ ಮಾತ್ರ ಈ ಚಟುವಟಿಕೆಗಳನ್ನು ನಿಲ್ಲಿಸಲು ಸಾಧ್ಯ. ಆಗ ಮಾತ್ರ ವಾಯು ಮಾಲಿನ್ಯ ಗಂಭೀರ ಸ್ಥಿತಿಗೆ ತಲುಪದು’’ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ ಹಾಗೂ ಸೂರ್ಯಕಾಂತ್ ಅವರನ್ನು ಕೂಡ ಒಳಗೊಂಡ ಪೀಠ ಹೇಳಿದೆ.

ಮುಂದಿನ ಎರಡು-ಮೂರು ದಿನಗಳ ಕಾಲ ವಾಯು ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಮುಂದುವರಿಸುವಂತೆ ನ್ಯಾಯಾಲಯ ಕೇಂದ್ರಕ್ಕೆ ಸೂಚಿಸಿದೆ.

"ನಾವು ಈ ಪ್ರಕರಣವನ್ನು ಮುಚ್ಚಲು ಹೋಗುವುದಿಲ್ಲ, ಈಗ ಮಾಲಿನ್ಯ ಕಡಿಮೆಯಾದರೂ ನಾವು ಈ ಪ್ರಕರಣವನ್ನು ಆಲಿಸುತ್ತೇವೆ ಹಾಗೂ ನಿರ್ದೇಶನಗಳನ್ನು ನೀಡುತ್ತೇವೆ. ಮುಂದಿನ ಮೂರು ದಿನಗಳವರೆಗೆ ಕ್ರಮಗಳನ್ನು ತೆಗೆದುಕೊಳ್ಳಿ. ನಾವು ಅರ್ಜಿಯನ್ನು ಸೋಮವಾರ ಮತ್ತೆ ಆಲಿಸುತ್ತೇವೆ. ಪರಿಸ್ಥಿತಿ ಸುಧಾರಿಸಿದರೆ ಕೆಲವು ನಿಷೇಧಗಳನ್ನು ತೆಗೆದುಹಾಕಿ" ಎಂದು ನ್ಯಾಯಾಲಯ ಹೇಳಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ, ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠವು ಇಂದು ಅರ್ಜಿಯ ವಿಚಾರಣೆ ನಡೆಸಿತು.

ಸುಪ್ರೀಂ ಕೋರ್ಟ್ ಮುಂದಿನ ನವೆಂಬರ್ 29 ರಂದು ಪ್ರಕರಣದ ವಿಚಾರಣೆ ನಡೆಸಲಿದೆ.

'ಕೇಂದ್ರ, ರಾಜ್ಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ?'

ದಿಲ್ಲಿಯ ವಾಯು ಮಾಲಿನ್ಯದ ಕುರಿತು ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳನ್ನು ಬುಧವಾರ ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಬೆಳೆ ತ್ಯಾಜ್ಯ ಸುಡುವುದನ್ನು ತಡೆಯಲು ಅಧಿಕಾರಿಗಳು ಏಕೆ ಶಾಶ್ವತ ಪರಿಹಾರವನ್ನು ಕಂಡುಕೊಂಡಿಲ್ಲ ಎಂದು ಕೇಳಿದೆ.

ಸಣ್ಣ ಮತ್ತು ಅತಿಸಣ್ಣ ರೈತರಿಗೆ ಹುಲ್ಲು ತೆಗೆಯುವ ಯಂತ್ರಗಳನ್ನು ಉಚಿತವಾಗಿ ನೀಡಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಬೆಳೆ ತ್ಯಾಜ್ಯ  ಸುಡುವಿಕೆಗೆ ಪರಿಹಾರ ನೀಡದ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, "ನಾವು ಸಮಸ್ಯೆಗಳನ್ನು ಚರ್ಚಿಸಲು ಸಾಮಾನ್ಯ ಜ್ಞಾನವನ್ನು ಬಳಸುತ್ತಿದ್ದೇವೆ. ಕೇಂದ್ರ ಮತ್ತು ರಾಜ್ಯ ಆಡಳಿತಶಾಹಿ ಏನು ಮಾಡುತ್ತಿದೆ? ಅವರು ಏಕೆ ಹೊಲಗಳಿಗೆ ಹೋಗಬಾರದು, ರೈತರೊಂದಿಗೆ ಮಾತನಾಡಬಾರದು. ವಿಜ್ಞಾನಿಗಳೊಂದಿಗೆ ಮಾತನಾಡಿ ಕಳೆ ಸುಡುವುದನ್ನು ತಡೆಯಲು ಶಾಶ್ವತ ಪರಿಹಾರವನ್ನು ರೂಪಿಸಬಾರದು ಎಂದು ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News