ಕೇಂದ್ರ ಸಚಿವ ಅಜಯ್ ಮಿಶ್ರಾರನ್ನು ಈ ಹಿಂದೆಯೇ ವಜಾಗೊಳಿಸಬೇಕಿತ್ತು: ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್

Update: 2021-11-27 16:41 GMT
ಕೇಂದ್ರ ಸಚಿವ ಅಜಯ್ ಮಿಶ್ರಾ/ಸತ್ಯಪಾಲ್ ಮಲಿಕ್

ಶಿಲ್ಲಾಂಗ್: ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ 'ತೇನಿ' ಅವರನ್ನು ಈ ಹಿಂದೆಯೇ ವಜಾ ಮಾಡಬೇಕಿತ್ತು ಹಾಗೂ  ನರೇಂದ್ರ ಮೋದಿ ಸರಕಾರದಲ್ಲಿ ಅವರ ಮುಂದುವರಿಕೆ ಉತ್ತರ ಪ್ರದೇಶದ ಮುಂಬರುವ ಚುನಾವಣೆಗಳ ಮೇಲೆ  ಅದರಲ್ಲೂ ಲಖಿಂಪುರ ಖೇರಿಯಲ್ಲಿ ಖಂಡಿತವಾಗಿ ಪರಿಣಾಮ ಬೀರುತ್ತದೆ ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

"ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರು ತುಂಬಾ ಸಕ್ರಿಯರಾಗಿದ್ದಾರೆ. ಆದರೆ ಅವರು ಕೆಲವೊಮ್ಮೆ ಕೆಟ್ಟ ಜನರನ್ನು ರಕ್ಷಿಸುತ್ತಾರೆ ಎಂದು ಜನರು ಭಾವಿಸುತ್ತಾರೆ. ಅವರ ಪ್ರಚೋದನಕಾರಿ ಭಾಷಣದ ತಕ್ಷಣವೇ ಮಿಶ್ರಾ ಅವರನ್ನು ವಜಾ ಮಾಡಬೇಕಿತ್ತು'' ಎಂದು  ಗುರುವಾರ ರಾಜಭವನದಲ್ಲಿ theprint ಗೆ ನೀಡಿದ ಸಂದರ್ಶನದಲ್ಲಿ ಮಲಿಕ್ ಹೇಳಿದರು.

ಮಿಶ್ರಾ ಅವರು ರೈತರಿಗೆ ಬೆದರಿಕೆ ಹಾಕಿರುವ ಕುರಿತು ಮಲಿಕ್ ಉಲ್ಲೇಖಿಸಿದ್ದಾರೆ.

ಸಚಿವರ ಬೆದರಿಕೆಯ ವೀಡಿಯೊ ಕ್ಲಿಪ್ ರೈತರನ್ನು ಕೆರಳಿಸಿತು. ಸಚಿವರೊಂದಿಗೆ ಘರ್ಷಣೆಗೆ ಕಾರಣವಾಯಿತು ಎಂದು ಹೇಳಲಾಗಿದೆ. ಇದು ಅಕ್ಟೋಬರ್ 3 ರಂದು ಲಖಿಂಪುರ ಖೇರಿಯಲ್ಲಿ ಎಂಟು ಜನರ ಸಾವಿನಲ್ಲಿ ಕೊನೆಗೊಂಡಿತು.

ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಆ ದಿನ ಪ್ರತಿಭಟನಾ ನಿರತ ರೈತರ ಗುಂಪಿಗೆ ಢಿಕ್ಕಿ ಹೊಡೆದ ಬೆಂಗಾವಲು ಪಡೆ ವಾಹನದಲ್ಲಿದ್ದರು ಎನ್ನಲಾಗಿದೆ.

ಮಿಶ್ರಾ ಅವರನ್ನು ವಜಾಗೊಳಿಸುವಂತೆ ಮೋದಿ ಸರಕಾರದ ಮೇಲೆ ರೈತ ಸಂಘಟನೆಗಳಿಂದ ಹೆಚ್ಚುತ್ತಿರುವ ಒತ್ತಡದ ಮಧ್ಯೆ ಕೇಂದ್ರ ಸಚಿವರ ರಾಜೀನಾಮೆ ಬೇಡಿಕೆಗೆ ಮೇಘಾಲಯ ರಾಜ್ಯಪಾಲರು ಬೆಂಬಲ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News