ಎಸಿಬಿ ದಾಳಿ ಪ್ರಕರಣ: ನಿವೃತ್ತ ಅಧಿಕಾರಿ ಬಳಿ 30.65 ಕೋಟಿ ಅಕ್ರಮ ಸಂಪತ್ತು

Update: 2021-11-27 16:24 GMT

ಬೆಂಗಳೂರು, ನ.27: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಎಸಿಬಿ ದಾಳಿಗೆ ಗುರಿಯಾಗಿದ್ದ ಬೆಂಗಳೂರು ಗ್ರಾಮಾಂತರ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಆರ್.ಎನ್.ವಾಸುದೇವ್ ಬಳಿಬರೋಬ್ಬರಿ 30.65 ಕೋಟಿ ರೂಪಾಯಿಗೂ ಅಧಿಕ ಸಂಪತ್ತು ಪತ್ತೆಯಾಗಿದೆ.

ಸರಕಾರಿ ಸೇವೆಯಿಂದ ಕೆಲವೇ ತಿಂಗಳ ಹಿಂದೆ ನಿವೃತ್ತರಾಗಿದ್ದ ಆರ್.ಎನ್.ವಾಸುದೇವ್ ಮನೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಶೋಧ ಕಾರ್ಯ ನಡೆಸಿದ ಎಸಿಬಿ ತನಿಖಾಧಿಕಾರಿಗಳು, 26.78 ಕೋಟಿ ರೂ. ಸ್ಥಿರಾಸ್ತಿ, 3.87 ಕೋಟಿ ರೂ. ಚರಾಸ್ಥಿ ಸೇರಿದಂತೆ ಒಟ್ಟು, 30.65 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ ಮಾಡಿದ್ದು, ಇದು ಇವರ ಆದಾಯಕ್ಕಿಂತ ಶೇ.1,408ರಷ್ಟಿದೆ ಎಂದು ಎಸಿಬಿ ಅಂದಾಜಿಸಿದೆ.

ಆರ್.ಎನ್.ವಾಸುದೇವ್ ತನ್ನ ಪತ್ನಿ ಲಲಿತಾ ಹಾಗೂ ಪುತ್ರ ಹೆಸರಿನಲ್ಲಿ ಬರೋಬ್ಬರಿ 28 ಮನೆಗಳನ್ನು ನಿರ್ಮಾಣ ಮಾಡಿದ್ದಾರೆ. ನೆಲಮಂಗಲ ತಾಲೂಕು ವ್ಯಾಪ್ತಿಯಲ್ಲಿ ನಾಲ್ಕು ಎಕರೆಗೂ ಅಧಿಕ ಜಮೀನು ಖರೀದಿ ಮಾಡಿದ್ದಾರೆ. ಜತೆಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿಯೇ 16 ಖಾಲಿ ನಿವೇಶನಗಳನ್ನು ಖರೀದಿಸಿರುವ ಮಾಹಿತಿ ಬಹಿರಂಗವಾಗಿದೆ.

ಅದೇ ರೀತಿ, ದುಬಾರಿ ಬೆಲೆಯ 5 ಕಾರುಗಳು, 959 ಗ್ರಾಂ ಚಿನ್ನಾಭರಣ, 9 ಕೆಜಿ ಬೆಳ್ಳಿ, 17 ಲಕ್ಷ ರೂ.ನಗದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ 1.31 ಕೋಟಿ ರೂ.ಠೇವಣಿ ಸೇರಿದಂತೆ ಇನ್ನಿತರೆ ಸಂಪತ್ತು ಪತ್ತೆಯಾಗಿದ್ದು, ಈ ಸಂಬಂಧ ತನಿಖೆ ಮುಂದುವರೆಸಲಾಗಿದೆ ಎಂದು ಎಸಿಬಿ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News