ಕಲಾವಿದನ ಚಿತ್ರಪಟದಲ್ಲಿ ಚರಿತ್ರೆ ಅಡಕ: ನಾಗತಿಹಳ್ಳಿ ಚಂದ್ರಶೇಖರ್

Update: 2021-11-30 05:31 GMT

ಬೆಂಗಳೂರು, ನ.29: ಚಿತ್ರಕಲೆ ಕಲಾವಿದರಿಗೆ ಚರಿತ್ರೆ, ವರ್ತಮಾನ, ಭವಿಷ್ಯತ್ ಮತ್ತು ಸಮಕಾಲೀನ ವಿದ್ಯಮಾನಗಳನ್ನು ಏಕಕಾಲದಲ್ಲಿ ಬೇರೆ ಬೇರೆ ನೆಲೆಯಲ್ಲಿ ಹೇಳುವ ಶಕ್ತಿ ಇದೆ ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ. 

ಸೋಮವಾರ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ಏಳು ದಿನಗಳ ಕಾಲ ನಡೆಯಲಿರುವ ವಿವಿಧ ವೃತ್ತಿಯಲ್ಲಿರುವ ನುರಿತ ಹವ್ಯಾಸಿ ಕಲಾವಿದರ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಚಿತ್ರ ಕಲಾವಿದರು, ಕಲೆಯ ಮೂಲಕ ಪ್ರಕೃತಿ, ಹೂವು, ಬೆಟ್ಟ, ಪರ್ವತಗಳನ್ನು ಶಾಶ್ವತವಾಗಿ ಇಡುತ್ತಾರೆ. ಒಬ್ಬ ಕಲಾವಿದನ ಚಿತ್ರಪಟದ ಮೂಲಕ ಇಡೀ ಸಮಾಜ, ದೇಶ ಅರ್ಥವಾಗುತ್ತದೆ ಎಂದು ಹೇಳಿದರು. 

ಯಾವುದೇ ಕಲಾವಿದ ಬೇರೆ ಬೇರೆ ಹಿನ್ನೆಲೆಯಲ್ಲಿ ಬಂದರೆ ಆಯಾ ಕ್ಷೇತ್ರವನ್ನು ತಮ್ಮ ಕಲೆಯ ಮೂಲಕ ಅಭಿವ್ಯಕ್ತಪಡಿಸುತ್ತಾರೆ. ಈ ಚಿತ್ರ ಪ್ರದರ್ಶನದಲ್ಲಿ ವೈದ್ಯಕೀಯ ಕ್ಷೇತ್ರದ ಡಾ.ರುದ್ರಪ್ರಸಾದ್, ಸಾಫ್ಟ್‍ವೇರ್ ಕ್ಷೇತ್ರದ ಶಾಲಿನಿ, ಉದ್ಯಮ ಕ್ಷೇತ್ರದ ಪ್ರಕಾಶ್ ನಾರಾಯಣ್ ತಮ್ಮದೇ ಚಿಂತನೆಗಳನ್ನು ತಮ್ಮ ಚಿತ್ರಕಲೆಯಲ್ಲಿ ಬಿಂಬಿಸಿದ್ದಾರೆ ಎಂದರು. 

ವೃತ್ತಿಯ ಜತೆಗೆ ತಮ್ಮ ಹವ್ಯಾಸವನ್ನು ಪ್ರಬಲಗೊಳಿಸಿದ್ದಾರೆ. ಡಾ.ರುದ್ರಪ್ರಸಾದ್ ವೈದ್ಯಕೀಯ ಕ್ಷೇತ್ರದ ಅನುಭವಗಳನ್ನು ಬಿಂಬಿಸಿದ್ದಾರೆ. ಖಾಸಗಿ ಕಂಪೆನಿಯೊಂದರ ನಿವೃತ್ತ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಅಜಿತ್‍ಪಾಲ್ ಆರು ಮಂದಿ ಕಲಾವಿದರ ಕಲಾ ಕುಂಚದ ಕೈಚಳಕವನ್ನು ಕಂಡು ಪ್ರಶಂಸೆ ವ್ಯಕ್ತಪಡಿಸಿದರು. 

ವಿಶೇಷವಾಗಿ ಎಕ್ಸ್ ಪ್ರೋರಿಯಾ ಪ್ರದರ್ಶನದಲ್ಲಿ ತಮ್ಮ ಚಿತ್ರಪಟಗಳ ಮಾರಾಟದಿಂದ ಬಂದ ಹಣವನ್ನು serve together foundationನ ಮೂಲಕ ಬಡ, ದುರ್ಬಲ, ಅಸಹಾಯಕರ ಸೇವೆಗಳಿಗೆ ಒದಗಿಸುತ್ತಿರುವುದಾಗಿ ಡಾ.ರುದ್ರಪ್ರಸಾದ್ ತಿಳಿಸಿದರು. ಡಿಸೆಂಬರ್ 5ರವರೆಗೆ ಎಕ್ಸ್‍ಪ್ರೋರಿಯಾ ಚಿತ್ರಕಲಾ ಪ್ರದರ್ಶನ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News