ಭಾರತದ ಪ್ರಯಾಣಿಕರ ಮೇಲಿನ ನಿಷೇಧ ಹಿಂಪಡೆದ ಸೌದಿ ಅರೇಬಿಯಾ: ಕೇರಳ ಹೈಕೋರ್ಟ್‌ಗೆ ಕೇಂದ್ರ ಸರಕಾರ ಮಾಹಿತಿ

Update: 2021-11-29 18:40 GMT
Photo Courtesy  PTI

ಕೊಚ್ಚಿ, ನ. 29: ಭಾರತದ ಪ್ರಯಾಣಿಕರ ಮೇಲೆ ವಿಧಿಸಿದ್ದ ನಿಷೇಧವನ್ನು ಸೌದಿ ಅರೇಬಿಯಾ ಹಿಂಪಡೆದಿದೆ ಎಂದು ಕೇಂದ್ರ ಸರಕಾರ ಸೋಮವಾರ ಕೇರಳ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಅಂತಾರಾಷ್ಟ್ರೀಯವಾಗಿ ಸ್ವೀಕೃತವಾದ ಕೋವಿಡ್ ಲಸಿಕೆಯ ಮೂರನೇ ಡೋಸ್ ನೀಡುವಂತೆ ವ್ಯಕ್ತಿಯೋರ್ವರು ಮನವಿ ಸಲ್ಲಿಸಿದ್ದರು. ಈ ಡೋಸ್ ನೀಡದೇ ಇದ್ದರೆ, ತನಗೆ ಕೆಲಸ ಮಾಡಲು ಗಲ್ಫ್ ರಾಷ್ಟ್ರಗಳಿಗೆ ಹಿಂದಿರುಗಲು ಅಸಾಧ್ಯ ಎಂದು ಅವರು ಪ್ರತಿಪಾದಿಸಿದ್ದರು. ಈ ಮನವಿಯ ವಿಚಾರಣೆ ನಡೆಸಿದ ಸಂದರ್ಭ ಕೇಂದ್ರ ಸರಕಾರ ಉಚ್ಚ ನ್ಯಾಯಾಲಯಕ್ಕೆ ಈ ಮಾಹಿತಿ ನೀಡಿತು. ಸೌದಿ ಅರೇಬಿಯಾ ಮಾನ್ಯತೆ ನೀಡದ ಕೊವ್ಯಾಕ್ಸಿನ್‌ನ ಎರಡು ಡೋಸ್ ಅನ್ನು ಈ ವ್ಯಕಿ ಹಿಂದೆ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಕೋವಿಶೀಲ್ಡ್‌ನಂತಹ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಲಸಿಕೆಯ ಮೂರನೇ ಡೋಸ್ ಅನ್ನು ನೀಡಲು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿದ್ದರು.

ಕೋವಿಡ್ ಸಾಂಕ್ರಾಮಿಕ ರೋಗ ಹರಡುವ ಮುನ್ನ ದೂರುದಾರರು ಗಲ್ಫ್ ರಾಷ್ಟ್ರಗಳಲ್ಲಿ ವೆಲ್ಡರ್ ಆಗಿ ಕೆಲಸ ಮಾಡುತ್ತಿದ್ದರು. ರಾಜ್ಯ ನೀಡಿದ ಲಸಿಕೆಯ ಕಾರಣಕ್ಕೆ ಒಂದು ವೇಳೆ ನಾಗರಿಕರು ತಮ್ಮ ಜೀವನಾಧಾರವನ್ನು ಕಳೆದುಕೊಂಡರೆ, ಅವರ ಅಹವಾಲುಗಳಿಗೆ ಸ್ಪಂದಿಸುವುದು ಸರಕಾರದ ಕರ್ತವ್ಯವಲ್ಲವೇ ? ಎಂದು ಉಚ್ಚ ನ್ಯಾಯಾಲಯ ಈ ಹಿಂದೆ ಪ್ರಶ್ನಿಸಿತ್ತು. ಭಾರತದ ಮೇಲೆ ವಿಧಿಸಿದ್ದ ಪ್ರಯಾಣ ನಿಷೇಧವನ್ನು ಸೌದಿ ಅರೇಬಿಯಾ ಹಿಂಪಡೆದಿದೆ. ಆದುದರಿಂದ ಈ ಮನವಿ ನಿರುಪಯುಕ್ತ ಎಂದು ಕೇಂದ್ರ ಸರಕಾರ ಸೋಮವಾರ ನ್ಯಾಯಮೂರ್ತಿ ಪಿ.ಇ. ಕುಂಞಿಕೃಷ್ಣನ್ ಅವರಿಗೆ ತಿಳಿಸಿತು. ಈ ಪ್ರತಿಪಾದನೆಯನ್ನು ಗಣನೆಗೆ ತೆಗೆದುಕೊಂಡ ಉಚ್ಚ ನ್ಯಾಯಾಲಯ ಮನವಿಯನ್ನು ತಿರಸ್ಕರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News