ಒಮೈಕ್ರಾನ್‌ನಿಂದ ಕೋವಿಡ್ ಸೋಂಕು ಉಲ್ಬಣದ ಸಾಧ್ಯತೆ; ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

Update: 2021-11-30 17:18 GMT

ಜಿನೆವಾ, ನ.30: ಒಮೈಕ್ರಾನ್ ಪ್ರಬೇಧದಿಂದ ಜಾಗತಿಕ ಅಪಾಯದ ಪ್ರಮಾಣ ಅತ್ಯಧಿಕವಾಗಿದ್ದು ಒಮೈಕ್ರಾನ್‌ನಿಂದಾಗಿ ಕೊರೋನ ವೈರಸ್ ಸೋಂಕು ಪ್ರಕರಣ ತೀವ್ರ ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸೋಮವಾರ ಎಚ್ಚರಿಸಿದೆ.

ಕೆಲ ದಿನದ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಒಮೈಕ್ರಾನ್ ಬಗ್ಗೆ ಗಣನೀಯ ಅನಿಶ್ಚಿತತೆ ಉಳಿದುಕೊಂಡಿದೆ. ಆದರೆ ಈ ರೂಪಾಂತರವು ಪ್ರತಿರೋಧಕ ವ್ಯವಸ್ಥೆಯಿಂದ ನುಣುಚಿಕೊಂಡು ಒಬ್ಬರಿಂದ ಇನ್ನೊಬ್ಬರಿಗೆ ತೀವ್ರಗತಿಯಲ್ಲಿ ಪ್ರಸಾರವಾಗುವ ಸಾಮರ್ಥ್ಯ ಹೊಂದಿರುವ ಸಾಧ್ಯತೆಯಿದೆ. ಈ ಗುಣಲಕ್ಷಣ ಹೊಂದಿರುವುದರಿಂದ ಮುಂದಿನ ದಿನದಲ್ಲಿ ಕೊರೋನ ಸೋಂಕು ಮತ್ತೆ ಉಲ್ಬಣಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ . ಜಾಗತಿಕ ಅಪಾಯದ ಪ್ರಮಾಣ ಅತ್ಯಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ನಾವು ಈಗ ಭಯಪಟ್ಟಿರುವ ರೀತಿಯಲ್ಲಿ ಒಮೈಕ್ರಾನ್ ಪ್ರಬೇಧ ಅಪಾಯಕಾರಿ ಎಂದು ಸಾಬೀತಾದರೆ, ದುರ್ಬಲ ವರ್ಗದ ಜನಸಂಖ್ಯೆಯ ಮೇಲೆ ಹಾಗೂ ಕಡಿಮೆ ಲಸಿಕಾಕರಣ ಸಾಧಿಸಿದ ಬಡದೇಶಗಳ ಮೇಲೆ ಗಣನೀಯ ಪರಿಣಾಮವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಕೊರೋನ ಸೋಂಕನ್ನು ನಿಯಂತ್ರಿಸಿರುವುದಾಗಿ ನಮ್ಮಲ್ಲಿ ಹಲವರು ಭಾವಿಸಿದ್ದರು. ಆದರೆ ಸೋಂಕು ಇನ್ನೂ ತೊಲಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರಾಸ್ ಗೆಬ್ರೆಯೇಸಸ್ ಹೇಳಿದ್ದಾರೆ.

ಈ ಮಧ್ಯೆ, ನೂತನ ರೂಪಾಂತರ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ಜಪಾನ್, ಮೊರೊಕ್ಕೊ, ಅಮೆರಿಕ, ಇಸ್ರೇಲ್, ಯುರೋಪಿಯನ್ ಯೂನಿಯನ್ ಸದಸ್ಯ ದೇಶಗಳು ದಕ್ಷಿಣ ಆಫ್ರಿಕಾದಿಂದ ಬರುವ ಪ್ರಯಾಣಿಕರನ್ನು ನಿಷೇಧಿಸುವ ಘೋಷಣೆ ಮಾಡಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News