ಒಮೈಕ್ರಾನ್ ಭೀತಿ: ಬೆಂಗಳೂರು ರೈಲು ನಿಲ್ದಾಣಗಳಲ್ಲಿ ಹೆಚ್ಚಿದ ಪ್ರಯಾಣಿಕರ ದಟ್ಟಣೆ

Update: 2021-12-02 02:21 GMT
ಫೈಲ್ ಫೋಟೊ

ಬೆಂಗಳೂರು: ಹೊಸ ಒಮೈಕ್ರಾನ್ ಪ್ರಬೇಧದಿಂದಾಗಿ ಕೊರೋನ ಸಾಂಕ್ರಾಮಿಕ ಉಲ್ಬಣಿಸುವ ಭೀತಿಯ ಬೆನ್ನಲ್ಲೇ ಬೆಂಗಳೂರು ವಿಭಾಗದ ಬಹುತೇಕ ಎಲ್ಲ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ದಿಢೀರನೇ ಹೆಚ್ಚಳವಾಗಿದೆ.

ದಿನಕ್ಕೆ ಸರಾಸರಿ 2 ರಿಂದ 2.5 ಲಕ್ಷ ಪ್ರಯಾಣಿಕರು ನಿಲ್ದಾಣಗಳಲ್ಲಿ ಈ ಮುನ್ನ ಕಂಡುಬರುತ್ತಿದ್ದರು. ಆದರೆ ಇದೀಗ ಪ್ರಯಾಣಿಕರ ಸಂಖ್ಯೆ 3 ಲಕ್ಷ ದಾಟಿದೆ. ಹೊಸ ವೈರಸ್ ಪ್ರಬೇಧದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಲವು ರಾಜ್ಯಗಳು ಹೊಸ ನಿರ್ಬಂಧಗಳನ್ನು ಘೋಷಿಸಿದ್ದು ವಲಸೆ ವರ್ಗದಲ್ಲಿ ಆತಂಕ ಮೂಡಿಸಿದೆ.

ಪ್ರತಿ ರೈಲುಗಳು ಭರ್ತಿಯಾಗುತ್ತಿದ್ದು, ಕಾಯಂ ರೈಲುಗಳಲ್ಲಿ ದೊಡ್ಡ ವೆಯ್ಟಿಂಗ್‌ ಲಿಸ್ಟ್ ಬೆಳೆಯುತ್ತಲೇ ಇದೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. "ಸಾರ್ವಜನಿಕರಿಂದ ತುರ್ತು ಕೋಟಾದಡಿ ಆಸನಗಳನ್ನು ಹಂಚಿಕೆ ಮಾಡುವಂತೆ ಮನವಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಣಿಜ್ಯ ಇಲಾಖೆಗೆ ಸಮಸ್ಯೆಯಾಗಿದೆ. ಸೋಮವಾರದಿಂದ ಇಂಥ ಮನವಿಗಳು ದಿಢೀರನೇ ಹೆಚ್ಚಿವೆ" ಎಂದು ಅವರು ವಿವರಿಸಿದ್ದಾರೆ.

"ಪ್ರಯಾಣಿಕರ ಸಂಖ್ಯೆ ಒಂದೇ ಸಮನೆ ಏರುತ್ತಲೇ ಇದೆ. ಇದು ಅನಿರೀಕ್ಷಿತ ಹಾಗೂ ಈ ಬಗ್ಗೆ ಯಾವ ಸುಳಿವೂ ಇರಲಿಲ್ಲ. ದೀಪಾವಳಿ ಮತ್ತು ನವರಾತ್ರಿ ಹಬ್ಬದ ಬಳಿಕ ಇಂಥ ದಟ್ಟಣೆಯನ್ನು ನಾವು ನಿರೀಕ್ಷಿಸಿರರಿಲ್ಲ. ಬಹುಶಃ ಸುಧೀರ್ಘ ಅವಧಿಯಿಂದ ಇದುವರೆಗೆ ಪ್ರಯಾಣಿಸದ ಬಹುತೇಕ ಮಂದಿ ಇದೀಗ ತೆರಳುತ್ತಿದ್ದಾರೆ" ಎಂದು ಮತ್ತೊಬ್ಬ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ ವೈರಸ್‌ನ ಹೊಸ ಪ್ರಬೇಧದ ಬಗೆಗಿನ ಚರ್ಚೆ ಹಾಗೂ ಲಾಕ್‌ಡೌನ್ ಭೀತಿಗಳು ಈ ಬೆಳವಣಿಗೆಗೆ ಕಾರಣವಿರಬಹುದು. ಆದರೆ ಖಚಿತ ಕಾರಣ ಗೊತ್ತಿಲ್ಲ ಎಂದು ಮತ್ತೊಬ್ಬ ರೈಲ್ವೆ ಅಧಿಕಾರಿ ಹೇಳಿದ್ದಾರೆ. ಆದರೆ ನಿಲ್ದಾಣಗಳಲ್ಲಿ ದಟ್ಟಣೆ ಹೆಚ್ಚಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
ಯಶವಂತಪುರ ಮತ್ತು ಕಂಟೋನ್ಮೆಂಟ್‌ನಿಂದ ಗುವಾಹತಿಗೆ ತೆರಳುವ ರೈಲು ಹಾಗೂ ಯಶವಂತಪುರ- ಹೌರಾ ರೈಲುಗಳಿಗೆ ಟಿಕೆಟ್ ಕಾಯ್ದಿರಿಸುವುದು ಹೆಚ್ಚುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News