ಪೊಲೀಸರ ಅಮಾನುಷ ಕೃತ್ಯದಿಂದ ಕೈ ಕಳೆದುಕೊಂಡ ಯುವಕ: ವಕೀಲ ಬಾಲನ್ ಆರೋಪ

Update: 2021-12-02 14:45 GMT

ಬೆಂಗಳೂರು, ಡಿ.2: ನಗರದಲ್ಲಿ ಪೊಲೀಸರ ಅಮಾನುಷ ಕೃತ್ಯದಿಂದ ಸಲ್ಮಾನ್ ಖಾನ್ ಎಂಬುವವರು ಕೈ ಕಳೆದುಕೊಂಡಿದ್ದಾರೆ. ಇದು ಪೊಲೀಸರ ವ್ಯವಸ್ಥಿತ ಅಪರಾಧಕ್ಕೆ ನಿದರ್ಶನವಾಗಿದ್ದು, ಸಲ್ಮಾನ್ ಖಾನ್ ಮುಸ್ಲಿಂ ಯುವಕನೆಂಬ ಕಾರಣಕ್ಕೆ ಈ ಪ್ರಕರಣವನ್ನು ಸರಕಾರವು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ವಕೀಲ ಬಾಲನ್ ಆರೋಪಿಸಿದ್ದಾರೆ. 

ಗುರುವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಸಲ್ಮಾನ್ ಖಾನ್ ಎಂಬ 20 ವರ್ಷದ ಯುವಕನನ್ನು ನ.27ರಂದು ಠಾಣೆಗೆ ಕರೆದುಕೊಂಡು ಹೋಗಿ ಎಫ್‍ಐಆರ್ ದಾಖಲಿಸದೆ, ಮೂರು ದಿನಗಳವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದಾರೆ. ಅಲ್ಲದೆ, ಸಿಸಿಟಿವಿ ದೃಶ್ಯಾವಳಿಗಳು ಸಹ ಠಾಣೆಯಲ್ಲಿ ಲಭ್ಯವಿಲ್ಲ. ಬ್ಯಾಟರಿ ಕಳ್ಳತನದ ಪ್ರಕರಣದಲ್ಲಿ ಸಲ್ಮಾನ್ ಖಾನ್‍ನನ್ನು ಪೊಲೀಸರು ಠಾಣೆಗೆ ಕರೆದುಕೊಂಡು ಹೋಗಿ, ಬಗೆಹರಿಯದ ಪ್ರಕರಣಕ್ಕೆ ಸಿಲುಕಿಸುವ ಸಲುವಾಗಿ, ವರ್ತೂರು ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಸೋಮಶೇಖರ್ ಸೇರಿದಂತೆ ಠಾಣಾ ಸಿಬ್ಬಂದಿ ಅಮಾನುಷವಾಗಿ ಆತನ ಕೈಯನ್ನು ಬೂಟುಕಾಲಿನಲ್ಲಿ ಒದ್ದು ಗಾಯಗೊಳಿಸಿದ್ದಾರೆ. ಪರಿಣಾಮವಾಗಿ ಆತನ ಕೈಯನ್ನು ಕತ್ತರಿಸಲಾಗಿದೆ. ಇದು ಎಐಎಲ್‍ಎಜೆ(ದಿ ಆಲ್ ಇಂಡಿಯಾ ಲಾಯರ್ಸ್ ಆಸೋಸಿಯೇಷನ್ ಫಾರ್ ಜಸ್ಟೀಸ್)ನ ಸತ್ಯಶೋಧನಾ ವರದಿಯಲ್ಲಿ ಬಹಿರಂಗವಾಗಿದೆ ಎಂದು ಸ್ಪಷ್ಟಪಡಿಸಿದರು. 

ಸಲ್ಮಾನ್ ಖಾನ್ ಮೇಲೆ ನಡೆದಿರುವ ಅಮಾನುಷ ಪ್ರಕರಣದ ಕುರಿತು ವರ್ತೂರು ಪೊಲೀಸ್ ಠಾಣೆಯ ಸಿಬ್ಬಂದಿ ತಮಗಿಷ್ಟ ಬಂದಂತೆ ಮಾತನಾಡುತ್ತಾರೆ. ಆತನನ್ನು ಕಳ್ಳತನ ಪ್ರಕರಣದಲ್ಲಿ ಬಂದಿಸಿ, ಈಗ ಡ್ರಗ್ಸ್ ಸೇವನೆಯ ಆರೋಪ ಮಾಡುತ್ತಿರುವುದು ಪೊಲೀಸರು ವ್ಯವಸ್ಥಿತವಾಗಿ ಪ್ರಕರಣವನ್ನು ಮುಚ್ಚುತ್ತಿದ್ದಾರೆ ಎಂದು ಸ್ಪಷ್ಟವಾಗುತ್ತಿದೆ. ಪೊಲೀಸ್ ಠಾಣೆಗಳು ರಿಯಲ್ ಎಸ್ಟೇಟ್ ಏಜಿನ್ಸಿ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಬಡವರನ್ನು ಠಾಣೆಗಳಿಗೆ ಕರೆ ತಂದು ಕ್ರೂರವಾಗಿ ಹಿಂಸಿಸಿ, ಹಣ ಸುಲಿಗೆ ಮಾಡುತ್ತಿವೆ. ಸಲ್ಮಾನ್‍ನ ಪ್ರಕರಣವು ಅಂತದ್ದೆ ಆಗಿದ್ದು, ದುರಾಷ್ಟವಶಾತ್ ಪ್ರಕರಣ ಇಂತಹ ದುಸ್ಥಿತಿಗೆ ಬಂದಿದೆ ಎಂದರು.

ಗೋಷ್ಠಿಯಲ್ಲಿ ಎನ್‍ಸಿಎಚ್‍ಆರ್‍ಓ(ನ್ಯಾಷನಲ್ ಕಾನ್ಫಡರೇಷನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಜೇಷನ್)ನ ಕಾರ್ಯದರ್ಶಿ ಮಲ್ಲೇಶ್ ಮತ್ತು ವಕೀಲೆ ಮಾನ್ವಿ ಉಪಸ್ಥಿತರಿದ್ದರು. 

ಪೊಲೀಸರದ್ದೆ ತಪ್ಪು: ಸತ್ಯಶೋಧನಾ ವರದಿ

ಸಲ್ಮಾನ್ ಖಾನ್ ಪ್ರಕರಣದ ಸತ್ಯಶೋಧನಾ ವರದಿಯಲ್ಲಿ ಸಂಪೂರ್ಣವಾಗಿ ಪೊಲೀಸರದ್ದೆ ತಪ್ಪು ಎಂದು ತಿಳಿದು ಬಂದಿದೆ. ಆದುದರಿಂದ ಪ್ರಕರಣದ ಆರೋಪಿಗಳ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗ, ಪೊಲೀಸ್ ಆಯುಕ್ತರು ಹಾಗೂ ಅಲ್ಪಸಂಖ್ಯಾತ ಆಯೋಗವು ಕೂಡಲೇ ಕ್ರಮ ವಹಿಸಬೇಕು. ಐಪಿಸಿ ಸೆಕ್ಷನ್ 220, 330 ಮತ್ತು 331ರ ಅನ್ವಯ ಪ್ರಕರಣ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಹಾಗೆಯೇ ಸಲ್ಮಾನ್ ಖಾನ್ ಕುಟುಂಬಕ್ಕೆ 50ಲಕ್ಷ ರೂ.ಗಳನ್ನು ಪರಿಹಾರವಾಗಿ ನೀಡಬೇಕು. ಅಲ್ಪಸಂಖ್ಯಾತರೆಂಬ ಕಾರಣಕ್ಕೆ ಪ್ರಕರಣವನ್ನು ಯಾವುದೇ ಕಾರಣಕ್ಕೂ ಕೈ ಬಿಡಬಾರದು.

-ಶಿಲ್ಪ, ಸದಸ್ಯೆ, ಎಐಎಲ್‍ಎಜೆ    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News