ಶಿವರಾಮ ಕಾರಂತ ಬಡಾವಣೆ: 300 ಕಟ್ಟಡ ಶೀಘ್ರ ಸಕ್ರಮ: ಚಂದ್ರಶೇಖರ್

Update: 2021-12-02 18:58 GMT

ಬೆಂಗಳೂರು, ಡಿ.2: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸುತ್ತಿರುವ ಡಾ.ಶಿವರಾಮ ಕಾರಂತ ಬಡಾವಣೆಯ ಅಧಿಸೂಚಿತ ಪ್ರದೇಶದಲ್ಲಿರುವ 300 ಕಟ್ಟಡಗಳು ಸದ್ಯದಲ್ಲೇ ಸಕ್ರಮಗೊಳ್ಳಲಿವೆ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ್ ತಿಳಿಸಿದ್ದಾರೆ.

ಗುರುವಾರ ನಗರದ ಬಿಡಿಎ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೊದಲನೆ ಹಂತದಲ್ಲಿ 300 ಕಟ್ಟಡಗಳನ್ನು ಸಕ್ರಮಗೊಳಿಸಲು ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಹಂತಹಂತವಾಗಿ ಸಮಿತಿಗೆ ದಾಖಲೆ ಸಲ್ಲಿಸಿದ ಎಲ್ಲ 6,200 ಕಟ್ಟಡಗಳನ್ನು ಸುಪ್ರೀಂಕೋರ್ಟ್ ಸಕ್ರಮಗೊಳಿಸುವ ಮುನ್ಸೂಚನೆ ಇದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುಪ್ರೀಂ ಆದೇಶನ್ವಯ ಬಡಾವಣೆಗೆ 3,546 ಎಕರೆ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಈ ಪ್ರಕ್ರಿಯೆಗೂ ಮೊದಲು ಈ ಜಾಗದಲ್ಲಿ ಈಗಾಗಲೇ ನಿರ್ಮಾಣ ಆಗಿರುವ ವಾಸದ ಮನೆ, ವಾಣಿಜ್ಯ ಕಟ್ಟಡಗಳ ಮಾಲಕರಿಗೆ ಪರಿಹಾರ ಏನೆಂಬುದನ್ನು ಪರಿಶೀಲಿಸಲು, ಕಟ್ಟಡಗಳ ದಾಖಲೆ ಪಡೆಯಲು ಸುಪ್ರೀಂಕೋರ್ಟ್ ಸಮಿತಿ ರಚನೆ ಮಾಡಿತ್ತು ಎಂದರು.

2014 ರಿಂದ 2018ಕ್ಕೆ ಮೊದಲು ಕಾನೂನುಬದ್ಧವಾಗಿ ಅನುಮತಿ ಪಡೆದು ಕಟ್ಟಿದ ಕಟ್ಟಡಗಳನ್ನು ಸಕ್ರಮಗೊಳಿಸಲು ಎಲ್ಲ ಕಟ್ಟಡ ಮಾಲಕರಿಂದ ದಾಖಲೆಗಳನ್ನು ಪಡೆಯಲಾಯಿತು. ಅಲ್ಲದೇ 2018ಕ್ಕೆ ಮೊದಲೇ ಜಾಗ ಖರೀದಿಸಿದ್ದರೂ ಹಣಕಾಸಿನ ಕಾರಣದಿಂದಾಗಿ ತಡವಾಗಿ ನಿರ್ಮಾಣ ಆದ ಕಟ್ಟಡಗಳ ದಾಖಲೆಗಳನ್ನೂ ಪಡೆಯಲಾಗಿದೆ ಎಂದು ಹೇಳಿದರು.

ಒಟ್ಟು 1,624 ಕಟ್ಟಡಗಳ ಮಾಹಿತಿ ಬಂದಿದ್ದು, ಈ ಪೈಕಿ 13 ಲೇಔಟ್, ಎರಡು ಗ್ರೂಪ್ ಹೌಸಿಂಗ್ ಸ್ಕೀಮ್ ಮಾತ್ರ ಅನುಮತಿ ಪಡೆದಿವೆ(ಬಿಬಿಎಂಪಿ ಹಾಗೂ ಬಿಡಿಎಯಿಂದ). ಇದನ್ನು ಸಕ್ರಮಗೊಳಿಸಿ ಭೂಸ್ವಾಧೀನಕ್ಕೆ ಈ ಜಾಗ ಪಡೆಯದಂತೆ ಕೈಬಿಡಲಾಗಿದೆ. ಆದರೆ, ಹಲವಾರು ಮಾಲಕರು ಈ ಅವಧಿಯಲ್ಲಿ ಅನುಮತಿ ಪಡೆಯದೇ ಅಥವಾ ಗ್ರಾಮ ಪಂಚಾಯತ್‍ನಿಂದ ಅನುಮತಿ ಪಡೆದವರ ಕಟ್ಟಡಗಳನ್ನೂ ಸಕ್ರಮಗೊಳಿಸಲು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದು ಬಹಳ ದೊಡ್ಡ ವಿಚಾರ. ಇದು ಎಲ್ಲ ಬಡ ಸಾಮಾನ್ಯ ವರ್ಗದವರಿಗೆ ತಮ್ಮ ಸೂರು ಉಳಿಸಿಕೊಳ್ಳಲು ನೆರವಾಗಿದೆ ಎಂದ ಅವರು ನುಡಿದರು.

ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳನ್ನು ಒಟ್ಟು ಮೂರು ವಿಧಗಳಲ್ಲಿ ವಿಭಜಿಸಲಾಗಿದ್ದು, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ನಿರ್ಮಿಸಿರುವ ಕಟ್ಟಡಗಳು, ಸಕ್ಷಮವಲ್ಲದ ಸ್ಥಳೀಯ ಪ್ರಾಧಿಕಾರದಿಂದ (ಗ್ರಾಮ ಪಂಚಾಯಿತಿಗಳು) ಅನುಮತಿ ಪಡೆದು ನಿರ್ಮಿಸಿರುವ ಕಟ್ಟಡಗಳು ಹಾಗೂ ಯಾವುದೇ ಅನುಮತಿಯನ್ನು ಪಡೆಯದೇ ನಿರ್ಮಿಸಿರುವ ಕಟ್ಟಡಗಳೆಂದು ಗುರುತಿಸಲಾಗಿದೆ. ಇವುಗಳಲ್ಲಿ ಪ್ರತಿಯೊಂದನ್ನು ಸಹ ಕೂಲಂಕಷವಾಗಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಎಲ್ಲರಿಗೂ ನ್ಯಾಯ ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯ ನಿವೃತ್ತ ಐಎಎಸ್ ಅಧಿಕಾರಿ ಜೈಕರ್ ಜೆರೋಮ್ ಸೇರಿದಂತೆ ಪ್ರಮುಖರಿದ್ದರು.


ಬಡಾವಣೆ ಪ್ರಕ್ರಿಯೆ, ಇನ್ನಿತರೆ ಮಾಹಿತಿಗಾಗಿ ಸಾರ್ವಜನಿಕರು ವೆಬ್‍ಸೈಟ್ https://jcc-skl.in ಗೆ ಭೇಟಿ ನೀಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News