​ಆರು ಮಂದಿ ಗಣ್ಯರಿಗೆ ಇನ್ಫೋಸಿಸ್ ಪ್ರಶಸ್ತಿ ಗೌರವ

Update: 2021-12-03 02:52 GMT

ಬೆಂಗಳೂರು: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಆರು ಮಂದಿಗೆ ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಕೋವಿಡ್-19 ಸಾಂಕ್ರಾಮಿಕ, ಹವಾಮಾನ ಬದಲಾವಣೆ ಮತ್ತು ಅಣು ವಿದ್ಯುತ್, ಲೈಂಗಿಕ ದೌರ್ಜನ್ಯ ಮತ್ತು ನ್ಯಾಯಶಾಸ್ತ್ರ ಸೇರಿದಂತೆ ವಿಶ್ವ ಇಂದು ಪ್ರಮುಖವಾಗಿ ಎದುರಿಸುತ್ತಿರುವ ಸಮಸ್ಯೆಗಳ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಚಿನ್ನದ ಪದಕ, ಪ್ರಶಸ್ತಿ ಫಲಕ ಮತ್ತು ಒಂದು ಲಕ್ಷ ಡಾಲರ್ ಬಹುಮಾನ ಮೊತ್ತವನ್ನು ಒಳಗೊಂಡಿದೆ. ಪ್ರಶಸ್ತಿ ಪುರಸ್ಕೃತರಲ್ಲಿ ಮೂವರು ಬೆಂಗಳೂರಿನವರು. ಪ್ರಶಸ್ತಿ ವಿಜೇತರಲ್ಲಿ ಡಾ.ಚಂದ್ರಶೇಖರ ನಾಯರ್, ಮೊಲ್ಬಿಯೊ ಡಯಾಗ್ನೊಸ್ಟಿಕ್ಸ್ ನಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿ. ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪಿಸಿಆರ್ ಆಧರಿತ ವೈದ್ಯಕೀಯ ರೋಗ ಪತ್ತೆಗೆ ಟ್ರೂನಾಟ್ ಎಂಬ ಪಾಯಿಂಟ್ ಆಫ್ ಕೇರ್ ಟೆಸ್ಟಿಂಗ್ ಪ್ಲಾಟ್‌ಫಾರ್ಮ್ ಅಭಿವೃದ್ಧಿಪಡಿಸಿದ್ದಕ್ಕಾಗಿ ಈ ಗೌರವ ಅವರಿಗೆ ಸಂದಿದೆ. ಈ ಸಾಧನ ಟಿಬಿ ಸೇರಿದಂತೆ 30ಕ್ಕೂ ಹೆಚ್ಚು ರೋಗಗಳನ್ನು ಒಂದು ಗಂಟೆಯಲ್ಲಿ ಪತ್ತೆ ಮಾಡಬಲ್ಲದು.

ಮಾನವಿಕ ಶಾಸ್ತ್ರದಲ್ಲಿ ಪ್ರಶಸ್ತಿ ಪುರಸ್ಕೃತರಾಗಿರುವ ಪೋರ್ಚುಗಲ್‌ನ ಲಿಸ್ಬೆನ್ ವಿವಿಯ ಸಮಾಜ ವಿಜ್ಞಾನಸಂಸ್ಥೆಯ ಡಾ.ಅಂಜೆಲಾ ಬರೇಟ್ಟೊ ಕ್ಸೇವಿಯರ್ ಅವರು, ಭಾರತದಲ್ಲಿ ಪೋರ್ಚ್‌ಗೀಸ್ ಸಾಮ್ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಗೋವಾದಲ್ಲಿ ನಡೆದ ಮತಾಂತರ ಹಾಗೂ ಹಿಂಸೆ ಬಗ್ಗೆ ಸಂಶೋಧನೆ ಮತ್ತು ವಿಶ್ಲೇಷಣೆ ನಡೆಸಿದ್ದಾರೆ.

ಜೀವ ವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿ ಪಡೆದ ಬೆಂಗಳೂರಿನ ರಾಷ್ಟ್ರೀಯ ಜೀವವಿಜ್ಞಾನಗಳ ಸಂಸ್ಥೆಯ ಪ್ರೊ. ಮಹೇಶ್ ಶಂಕರ್ ಸವನ್ನಾಗಳನ್ನು ಅರ್ಥ ಮಾಡಿಕೊಳ್ಳುವಿಕೆಯಲ್ಲಿ ಸಂಶೋಧನೆ ನಡೆಸಿದ್ದು, ಈ ಹುಲ್ಲುಗಾವಲಿನ ಸಂರಕ್ಷಣಾ ಕಾರ್ಯತಂತ್ರದ ಮೇಲೆ ಪರಿಣಾಮ ಬೀರುವಂಥದ್ದು. ಗಣಿತ ವಿಜ್ಞಾನದಲ್ಲಿ ಬೆಂಗಳೂರಿನ ಮೈಕ್ರೋಸಾಫ್ಟ್ ಸಂಶೋಧನಾ ಪ್ರಯೋಗಾಲಯದ ಡಾ.ನೀರಜ್ ಕಯಾಲ್ ಪ್ರಶಸ್ತಿ ಪಡೆದಿದ್ದಾರೆ. ಆಲ್ಜಿಬ್ರಿಕ್ ಕಂಪ್ಯುಟೇಶನ್ ಕ್ಷೇತ್ರದ ಸಾಧನೆಗಾಗಿ ಈ ಗೌರವ ಸಂದಿದೆ.

ಭೌತವಿಜ್ಞಾನದಲ್ಲಿ ಭುವನೇಶ್ವರದ ಎನ್‌ಐಎಸ್‌ಇಆರ್‌ನ ಪ್ರೊ. ಡಾ.ಬೇದಾಂಗದಾಸ್ ಮೊಹಾಂತಿ ಪ್ರಶಸ್ತಿಗೆ ಪಾತ್ರರಾಗಿದ್ದರೆ, ಸಮಾಜ ವಿಜ್ಞಾನ ಕ್ಷೇತ್ರದಲ್ಲಿ ದೆಹಲಿ ಜವಾಹರಲಾಲ್ ನೆಹರೂ ವಿವಿಯ ಕಾನೂನು ಮತ್ತು ಆಡಳಿತ ಅಧ್ಯಯನ ಕೇಂದ್ರದ ಡಾ.ಪ್ರತೀಕ್ಷಾ ಬಕ್ಷಿ ಗೌರವಕ್ಕೆ ಪಾತ್ರರಾಗಿದ್ದಾರೆ. ಲೈಂಗಿಕ ದೌರ್ಜನ್ಯ ಮತ್ತು ನ್ಯಾಯಶಾಸ್ತ್ರ ಕ್ಷೇತ್ರದಲ್ಲಿ ಅವರು ನಡೆಸಿದ ಸಂಶೋಧನೆಯನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News