'ಒಮೈಕ್ರಾನ್' ಭೀತಿ: ನೂತನ ಮಾರ್ಗಸೂಚಿ ಜಾರಿಗೊಳಿಸಿದ ಸರಕಾರ

Update: 2021-12-03 18:05 GMT

► ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶದಲ್ಲಿ 250 ರೂ., ಗ್ರಾಮೀಣ ಪ್ರದೇಶದಲ್ಲಿ 100 ರೂ.ದಂಡ

► ಜ.15ರವರೆಗೆ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದೂಡಿಕೆ

 ► ಪೋಷಕರು 2 ಡೋಸ್ ಕೋವಿಡ್ ಲಸಿಕೆ ಪಡೆದಿದ್ದರಷ್ಟೇ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಿಗೆ ಪ್ರವೇಶಾವಕಾಶ

ಬೆಂಗಳೂರು, ಡಿ.3: ರಾಜ್ಯದಲ್ಲಿ ಕೋವಿಡ್‍ನ ರೂಪಾಂತರಿ ಒಮೈಕ್ರಾನ್ ವೈರಸ್ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸರಕಾರಿ ನೌಕರರು, ಶಾಲಾ, ಕಾಲೇಜಿಗೆ ಹಾಜರಾಗುವ ಮಕ್ಕಳ(18 ವರ್ಷದೊಳಗಿನ) ಪೋಷಕರು, ಚಲನಚಿತ್ರ ಮಂದಿರ, ಮಾಲ್‍ಗಳಿಗೆ ಭೇಟಿ ನೀಡುವವರು ಕೋವಿಡ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಿ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ತಜ್ಞರು ಹಾಗೂ ಹಿರಿಯ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಶಾಲೆ, ಕಾಲೇಜುಗಳಲ್ಲಿ ಯಾವುದೆ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ. ಯಾವುದೇ ಸಮ್ಮೇಳನ, ಮದುವೆ ಮತ್ತಿತರ ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ ಸೇರುವ ಜನರ ಸಂಖ್ಯೆಯನ್ನು 500ಕ್ಕೆ ಸೀಮಿತಗೊಳಿಸಲಾಗಿದೆ ಎಂದರು.

ಶಾಲೆಗಳಲ್ಲಿ ಸದ್ಯಕ್ಕೆ ತರಗತಿಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗುವುದು. ಅದಾಗ್ಯೂ ಶಾಲೆಗಳಲ್ಲಿ ತೀವ್ರ ನಿಗಾ ವಹಿಸಲು ಸೂಚಿಸಲಾಗಿದೆ. ಸಿನೆಮಾ, ಮಾಲ್‍ಗಳಿಗೆ ಭೇಟಿ ನೀಡುವವರಿಗೆ, ಶಾಲಾ, ಕಾಳೇಜುಗಳಿಗೆ ಹಾಜರಾಗುವ ಮಕ್ಕಳ ಪೆÇೀಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದಿರಬೇಕು. ಅಲ್ಲದೆ, ಸರಕಾರಿ ನೌಕರರಿಗೆ ಲಸಿಕೆ ಪಡೆಯುವುದು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದರು.

ಒಮೈಕ್ರಾನ್ ರೂಪಾಂತರಿ ತಳಿಯ ವೈರಸ್ ನಿಂದ ಎರಡು ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆ. ಇಡೀ ವಿಶ್ವದಲ್ಲಿ ಸುಮಾರು 400 ಪ್ರಕರಣಗಳು ಈ ವರೆಗೆ ವರದಿಯಾಗಿದೆ. ಅಧಿಕೃತವಾಗಿ ಈ ಪ್ರಕರಣಗಳ ಕುರಿತು ಯಾವುದೇ ಅಧ್ಯಯನ ವರದಿ ಬಂದಿಲ್ಲ. ಆದರೆ ಅನೌಪಚಾರಿಕವಾಗಿ ದೊರೆತ ಮಾಹಿತಿಯ ಪ್ರಕಾರ ಈ ವೈರಸ್ ಸೋಂಕು ಹೆಚ್ಚು ತೀವ್ರ ಪರಿಣಾಮ ಬೀರಿಲ್ಲ. ಸೋಂಕಿತರಿಗೆ ಮೈಲ್ಡ್ ಸಿಂಟಮ್ಸ್ ಕಂಡು ಬಂದಿದೆ. ಸಾವಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಅಶೋಕ್ ತಿಳಿಸಿದರು.

ಈಗ ವರದಿಯಾಗಿರುವ ಎರಡೂ ಪ್ರಕರಣಗಳ ಪರೀಕ್ಷಾ ವರದಿಯನ್ನು ವಿಶ್ಲೇಷಿಸಿ ಸಲಹೆ ನೀಡುವಂತೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಗೆ ತಿಳಿಸಲಾಗಿದೆ. ಭಾರತ ಸರಕಾರಕ್ಕೆ ಪತ್ರ ಬರೆದು, ಎನ್‍ಸಿಬಿಎಸ್ ಪ್ರಯೋಗಾಲಯದ ವಿವರವಾದ ವರದಿ ಒದಗಿಸುವಂತೆ ಮನವಿ ಮಾಡಲಾಗುವುದು ಎಂದು ಅವರು ಹೇಳಿದರು.

ವಿಮಾನ ನಿಲ್ದಾಣದಲ್ಲಿ ಅಂತರ್‍ರಾಷ್ಟ್ರೀಯ ಪ್ರಯಾಣಿಕರಿಗೆ ಪರೀಕ್ಷೆ ನಡೆಸಿ, ನೆಗೆಟಿವ್ ವರದಿ ಬಂದ ನಂತರವೆ ಹೊರಗೆ ಕಳುಹಿಸಲಾಗುವುದು. ಪ್ರಯಾಣಿಕರ ಅನುಕೂಲಕ್ಕಾಗಿ ಪರೀಕ್ಷಾ ಯಂತ್ರಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತಿದೆ. ವಿಮಾನಯಾನ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ, ಪ್ರಯಾಣಿಕರಿಗೆ ಅರಿವು ಮೂಡಿಸುವಂತೆ ಸೂಚಿಸಲಾಗಿದೆ ಎಂದು ಅಶೋಕ್ ತಿಳಿಸಿದರು.

ಒಮೈಕ್ರಾನ್ ಜೊತೆಗೆ ಈಗಾಗಲೇ ಕಂಡು ಬಂದಿರುವ ಡೆಲ್ಟಾ ವೈರಸ್ ಸೋಂಕಿನ ಕುರಿತು ಸಹ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ನಸಿರ್ಂಗ್, ಅರೆವೈದ್ಯಕೀಯ ತರಬೇತಿ ಸಂಸ್ಥೆಗಳಲ್ಲಿ ಶೇ. 100 ರಷ್ಟು ಪರೀಕ್ಷೆ ನಡೆಸಬೇಕು. 65 ವರ್ಷ ಮೇಲಿನ ವ್ಯಕ್ತಿಗಳು ಹಾಗೂ ಇತರ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದು ಅಶೋಕ್ ತಿಳಿಸಿದರು.

ಪರೀಕ್ಷಾ ಸಾಮಥ್ರ್ಯ ಹಾಗೂ ಪರೀಕ್ಷಾ ಪ್ರಮಾಣದ ಗುರಿಯನ್ನು ಪ್ರತಿ ದಿನ ಒಂದು ಲಕ್ಷಕ್ಕೆ ಹೆಚ್ಚಿಸಲಾಗುವುದು. ವಿಶೇಷವಾಗಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆ ಹೆಚ್ಚಿಸಬೇಕೆಂದು ಸೂಚನೆ ನೀಡಲಾಗಿದೆ. ಇದಕ್ಕೆ ಅಗತ್ಯ ಮಾನವ ಸಂಪನ್ಮೂಲ ಒದಗಿಸಲು ತೀರ್ಮಾನಿಸಲಾಗಿದೆ. ಆರೋಗ್ಯ ಇಲಾಖೆ ಚಿಕಿತ್ಸಾ ಸೌಲಭ್ಯ ಒದಗಿಸಲು ಸಿದ್ಧತೆ ನಡೆಸಿಕೊಳ್ಳಬೇಕು. ಆಕ್ಸಿಜನೇಟೆಡ್ ಬೆಡ್‍ಗಳನ್ನು ಸಜ್ಜುಗೊಳಿಸಬೇಕು, ಆಕ್ಸಿಜನ್ ಪ್ಲಾಂಟ್‍ಗಳನ್ನು ಸಜ್ಜುಗೊಳಿಸಬೇಕು ಎಂದು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಆಕ್ಸಿಜನ್ ಲಭ್ಯತೆ, ಸಾಗಾಣಿಕೆ, ಪೂರೈಕೆ ಜಾಲವನ್ನು ಜಾಗೃತಗೊಳಿಸಬೇಕು. ಔಷಧಗಳ ಲಭ್ಯತೆ ಖಾತರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಸಂಪರ್ಕಿತರ ಪತ್ತೆಯ ಪ್ರಮಾಣ ಹೆಚ್ಚಿಸಲು ಸೂಚಿಸಲಾಗಿದೆ. ರಾಜ್ಯಾದ್ಯಂತ ನಿಯಂತ್ರಣ ಕೊಠಡಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ದಕ್ಷಿಣ ಆಫ್ರಿಕಾದಿಂದ ಪ್ರಯಾಣಿಸಿದ ಒಮೈಕ್ರಾನ್ ವೈರಸ್ ಸೋಂಕಿತ ವ್ಯಕ್ತಿಯ ಪರೀಕ್ಷಾ ವರದಿಗಳಲ್ಲಿ ವೈರುಧ್ಯ ಕಂಡು ಬಂದಿರುವ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಹೈ ಗ್ರೌಂಡ್ ಪೆÇಲೀಸರಿಗೆ ಸೂಚಿಸಲಾಗಿದೆ ಎಂದು ಅಶೋಕ್ ತಿಳಿಸಿದರು.

ಇತರ ಮಾರ್ಗಸೂಚಿಗಳು: ಟೆಸ್ಟ್(ಪರೀಕ್ಷೆ)-ಟ್ರಾಕ್(ಪತ್ತೆ)-ಟ್ರೀಟ್(ಚಿಕಿತ್ಸೆ)-ವ್ಯಾಕ್ಸಿನೇಷನ್(ಲಸಿಕಾಕರಣ) ಹಾಗೂ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿನ ಸಾಂಸ್ಕøತಿಕ ಚಟುವಟಿಕೆಗಳು, ಸಭೆ, ಸಮಾರಂಭಗಳನ್ನು 2022ನೆ ಸಾಲಿನ ಜನವರಿ 15ರವರೆಗೆ ಮುಂದೂಡಬೇಕು. ಶಾಲೆ, ಕಾಲೇಜುಗಳಿಗೆ ಹೋಗುವ 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ಬಿಬಿಎಂಪಿ ಸೇರಿದಂತೆ ನಗರ, ಪಟ್ಟಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿರುವವರಿಗೆ 250 ರೂ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 100 ರೂ.ದಂಡವನ್ನು ಸ್ಥಳೀಯ ಆಡಳಿತ ವಿಧಿಸಬೇಕು. ಕೇರಳ ಹಾಗೂ ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ಸ್ಥಾಪಿಸಲಾಗಿರುವ ಚೆಕ್‍ಪೋಸ್ಟ್‍ಗಳು ಎಂದಿನಂತೆ ಕಾರ್ಯನಿರ್ವಹಿಸಬೇಕು. ಮಾರ್ಗಸೂಚಿಗಳನ್ನು ಯಾರಾದರೂ ಉಲ್ಲಂಘಿಸಿದರೆ ಅವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಂತೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಬೆಳಗಾವಿಯಲ್ಲೆ ಅಧಿವೇಶನ

ರಾಜ್ಯ ಸರಕಾರ ಈಗಾಗಲೆ ನಿರ್ಧರಿಸಿರುವಂತೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಿಗದಿಯಂತೆ ಡಿಸೆಂಬರ್ 13 ರಿಂದ ಚಳಿಗಾಲದ ಅಧಿವೇಶನ ನಡೆಯಲಿದೆ.

-ಆರ್.ಅಶೋಕ್, ಕಂದಾಯ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News