ಐಎಂಎಫ್ ನ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಬಡ್ತಿ ಪಡೆದ ಮೈಸೂರು ಮೂಲದ ​ಗೀತಾ ಗೋಪಿನಾಥ್‌

Update: 2021-12-03 11:26 GMT
​ಗೀತಾ ಗೋಪಿನಾಥ್‌ (PTI)

ವಾಷಿಂಗ್ಟನ್ : ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿರುವ ಮೈಸೂರು ಮೂಲದ ಗೀತಾ ಗೋಪಿನಾಥ್, ಈ ಸಂಸ್ಥೆಯ ಎರಡನೇ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಲು ಸಜ್ಜಾಗಿದ್ದಾರೆ.

ಗೀತಾ ಅವರು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಉಪ ವ್ಯವಸ್ಥಾಪಕ ನಿರ್ದೇಶಕಿಯಾಗಿ ಬಡ್ತಿ ಪಡೆದಿದ್ದಾರೆ.

ಜೆಫ್ರಿ ಒಕಮೊಟೊ ಅವರಿಂದ ಈ ಹೊಣೆಗಾರಿಕೆಯನ್ನು ಗೀತಾ ಗೋಪಿನಾಥ್ ಪಡೆಯಲಿದ್ದಾರೆ ಎಂದು ಸಂಸ್ಥೆ ಗುರುವಾರ ಪ್ರಕಟಿಸಿದೆ.

ಐಎಂಎಫ್‌ನ ಮುಖ್ಯ ಅರ್ಥಶಾಸ್ತ್ರಜ್ಞರಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದ ಗೀತಾ ಗೋಪಿನಾಥ್, ಮೂರು ವರ್ಷಗಳ ಸಾರ್ವಜನಿಕ ಸೇವೆಯ ಬಳಿಕ ಮುಂದಿನ ಜನವರಿಯಲ್ಲಿ ಹಾರ್ವಡ್ ವಿಶ್ವವಿದ್ಯಾನಿಲಯಕ್ಕೆ ಮರು ಸೇರ್ಪಡೆಯಾಗುವುದಾಗಿ ಕಳೆದ ಅಕ್ಟೋಬರ್‌ನಲ್ಲಿ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಗೀತಾ ಅವರ ಹೊಸ ಹೊಣೆಗಾರಿಕೆ ಅಚ್ಚರಿ ಮೂಡಿಸಿದೆ.

ಸಂಸ್ಥೆಯ ಉನ್ನತ ವ್ಯವಸ್ಥಾಪನಾ ತಂಡದಲ್ಲಿ ಕೆಲ ಹೊಣೆಗಾರಿಕೆಗಳ ಮರುಹಂಚಿಕೆ ಮಾಡಲಾಗಿದೆ ಎಂದು ಐಎಂಎಫ್ ಪ್ರಕಟಿಸಿದೆ. ಸಂಪ್ರದಾಯದಂತೆ ಉಪ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಅಮೆರಿಕ ನಾಮಕರಣ ಮಾಡುತ್ತದೆ ಹಾಗೂ ಐಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಈ ನೇಮಕಾತಿ ಮಾಡುತ್ತಾರೆ. ಖಜಾನೆ ವಿಭಾಗ ಇದನ್ನು ದೃಢೀಕರಿಸಿದ ಬಳಿಕ ಅವರು ಹೊಣೆಗಾರಿಕೆಯನ್ನು ನಿಭಾಯಿಸುತ್ತಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕರು ಸರ್ವೇಕ್ಷಣೆ ಮತ್ತು ಸಂಬಂಧಿತ ನೀತಿಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿರುತ್ತಾರೆ ಹಾಗೂ ಗರಿಷ್ಠ ಗುಣಮಟ್ಟವನ್ನು ಕಾಪಾಡುವ ದೃಷ್ಟಿಯಿಂದ ಸಂಶೋಧನೆ ಮತ್ತು ಪ್ರಮುಖ ಪ್ರಕರಣೆಗಳ ಮೇಲ್ವಿಚಾರಣೆ ಹೊಂದಿರುತ್ತಾರೆ ಎಂದು ಐಎಂಎಫ್ ಹೇಳಿದೆ.

ಸಾಂಕ್ರಾಮಿಕದ ಅವಧಿಯಲ್ಲಿ ಮತ್ತು 2020ರ ಆರ್ಥಿಕ ಹಿಂಜರಿತದ ಅವಧಿಯಲ್ಲಿ ಐಎಂಎಫ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಗೋಪಿನಾಥ್ ಕಾರ್ಯ ನಿರ್ವಹಿಸಿದ್ದರು. ಹಾರ್ವರ್ಡ್ ವಿವಿಯಲ್ಲಿ 2005ರಿಂದ ಪ್ರಾಧ್ಯಾಪಕರಾಗಿರುವ ಅವರು, 2019ರಲ್ಲಿ ಐಎಂಎಫ್ ಸೇರಿದ್ದರು. 2020ರ ಮಾರ್ಚ್‌ನಲ್ಲಿ ಪ್ರಥಮ ಉಪ ಎಂಡಿ ಆಗಿ ಅಧಿಕಾರ ಸ್ವೀಕರಿಸಿದ ಒಕಮೊಟೊ ಖಾಸಗಿ ವಲಯಕ್ಕೆ ಮರಳುತ್ತಿರುವ ಹಿನ್ನೆಲೆಯಲ್ಲಿ ಗೀತಾ ಗೋಪಿನಾಥ್ ಅವರನ್ನುಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.

ಗೀತಾ ಗೋಪಿನಾಥ್ ಪರಿಚಯ: ಕೊಲ್ಕತ್ತಾದಲ್ಲಿ ಡಿಸೆಂಬರ್ 1970ರಲ್ಲಿ ಟಿ.ವಿ.ಗೋಪಿನಾಥ್ ಹಾಗೂ ವಿಜಯಲಕ್ಷ್ಮಿ ಅವರ ಮಗಳಾಗಿ ಜನಿಸಿ ತಮ್ಮ 9ನೇ ವಯಸ್ಸಿನಲ್ಲಿ ಮೈಸೂರಿಗೆ ಆಗಮಿಸಿದ ಗೀತಾ ಗೋಪಿನಾಥ್ ಅವರು, ನಗರದ ನಿರ್ಮಲಾ ಕಾನ್ವೆಂಟ್‍ನಲ್ಲಿ 10ನೇ ತರಗತಿವರೆಗೆ ವ್ಯಾಸಂಗ ಮಾಡಿ ಪದವಿ ಪೂರ್ವ ಶಿಕ್ಷಣವನ್ನು ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಮಹಾಜನ ಕಾಲೇಜಿನಲ್ಲಿ ಪಡೆದರು.

ನಂತರ ದಿಲ್ಲಿಯಲ್ಲಿ ಪದವಿ ಶಿಕ್ಷಣ ಮುಂದುವರಿಸಿದರು. ದಿಲ್ಲಿ ವಿಶ್ವವಿದ್ಯಾನಿಲಯಕ್ಕೆ ಬಿ.ಎ ಆನರ್ಸ್‍ನಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮವಾಗಿ ತೇರ್ಗಡೆಯಾಗಿದ್ದರು. ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ವಾಷಿಂಗ್‍ಟನ್ ವಿಶ್ವವಿದ್ಯಾನಿಲಯದಿಂದ ಎಂಎ ಪದವಿ ಪಡೆದರು. ನಂತರ 2001ರಲ್ಲಿ ಅರ್ಥಶಾಸ್ತ್ರದಲ್ಲಿ ಪಿ.ಎಚ್.ಡಿ ಪಡೆದರು. 'ಜಿ 20' ರಾಷ್ಟ್ರಗಳ ಶ್ರೇಷ್ಠ ವ್ಯಕ್ತಿಗಳ ಸಲಹಾ ತಂಡದ ಸದಸ್ಯರಾಗಿದ್ದುಕೊಂಡು ಭಾರತ ಹಣಕಾಸು ಇಲಾಖೆ ಪರ ಸೇವೆ ಸಲ್ಲಿಸಿದ್ದರು. ಹಾರ್ವರ್ಡ್ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇರುವುದಕ್ಕೂ ಮುನ್ನ ವಿಶ್ವವಿದ್ಯಾನಿಲಯದ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಬಿಸಿನೆಸ್‍ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News