ಎಸಿಬಿ ಆಡಳಿತ ಪಕ್ಷದ ನಾಟಕ ಕಂಪೆನಿಯಾಗಿ ಕೆಲಸ ಮಾಡುತ್ತಿದೆ: ರವಿ ಕೃಷ್ಣಾರೆಡ್ಡಿ ಆರೋಪ

Update: 2021-12-03 18:07 GMT

ಬೆಂಗಳೂರು, ಡಿ.3: ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದರೂ, ಎಸಿಬಿಯು ಕೇವಲ ಕೆಳಹಂತದ ಕೆಲವೇ ಅಧಿಕಾರಿಗಳ ಹಾಗೂ ನೌಕರರ ಮೇಲೆ ದಾಳಿ ಮಾಡುತ್ತಿದೆ. ಆದರೆ ದಾಳಿಯ ಬಳಿಕ ಬಹುತೇಕ ಪ್ರಕರಣಗಳಲ್ಲಿ ಶಿಕ್ಷೆಯಾಗುವುದಿಲ್ಲ. ಎಸಿಬಿಯು ಆಡಳಿತ ಪಕ್ಷದ ನಾಟಕ ಕಂಪನಿಯಾಗಿ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಆರೋಪಿಸಿದ್ದಾರೆ. 

ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ “ಎಸಿಬಿ ರದ್ದುಪಡಿಸಿ, ಲೋಕಾಯುಕ್ತ ಬಲಗೊಳಿಸಿ” ಎಂಬ ಪ್ರತಿಭಟನೆ ನಡೆಸಿ, ಮಾತನಾಡಿದ ಅವರು, ಎಸಿಬಿ ಆರಂಭವಾದಾಗಿನಿಂದಲೂ ಇಲ್ಲಿಯವರೆಗೆ 2000ಕ್ಕಿಂತಲೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಇದುವರೆಗೂ ಶಿಕ್ಷೆಗೆ ಒಳಪಡಿಸಿದವರ ಸಂಖ್ಯೆ ಎರಡಂಕಿಯನ್ನು ದಾಟದಿರುವುದು ವಿಪರ್ಯಾಸದ ಸಂಗತಿಯಾಗಿದೆ. 

ಲೋಕಾಯುಕ್ತವನ್ನು ಬಲಹೀನಗೊಳಿಸಿ ಎಸಿಬಿ ರಚಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯರ ಕ್ರಮವನ್ನು ವಿರೋಧಿಸಿ, ಅಧಿಕಾರಕ್ಕೆ ಬಂದ ಬಿಜೆಪಿ ಎಸಿಬಿಯನ್ನು ರದ್ದುಗೊಳಿಸಿ, ಲೋಕಾಯುಕ್ತವನ್ನು ಬಲಗೊಳಿಸುವುದಾಗಿ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದು ವರ್ಷಗಳು ಕಳೆದರೂ ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯೇ ಹೊರತು, ಎಸಿಬಿಯನ್ನು ಬಲಪಡಿಸಿಲ್ಲ. ಆದುದರಿಂದ ಎಸಿಬಿಯನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು. 

ಧರಣಿ ನಡೆಸಿ, ಎಸಿಬಿಯನ್ನು ಮುತ್ತಿಗೆ ಹಾಕಲು ರಾಜ್ಯದ ನಾನಾ ಭಾಗಗಳಿಂದ ನೂರಾರು ಕಾರ್ಯಕರ್ತರು ಆಗಮಿಸಿದ್ದರು. ಪ್ರತಿಭಟನೆಯ ಬಳಿಕ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಎಸಿಬಿಗೆ ಮುತ್ತಿಗೆ ಹಾಕಿ, ಬೀಗ ಹಾಕಲು ಮುಂದಾದಾಗ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಈ ಧರಣಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿ.ಎನ್., ರಾಜ್ಯ ಕಾರ್ಯದರ್ಶಿ ಸೋಮದುಂದರ್, ರಮೇಶ್ ಜಿ.ಎನ್., ರಘು ಜಾಣಗೆರೆ, ಮಲ್ಲಿಕಾರ್ಜುನ ಭಟ್ಟರಹಳ್ಳಿ, ಅರವಿಂದ ಕೆ.ಬಿ., ಮತ್ತಿತರರು ಉಪಸ್ಥಿತರಿದ್ದರು. 

ಎಸಿಬಿಯು ಬಿಡಿಎ ದಾಳಿಗೆ ಸಂಬಂಧಿಸಿದಂತೆ, ಕೇವಲ ನಿವೇಶನ ಹಂಚಿಕೆ ಮತ್ತು ಭೂಸ್ವಾಧೀನ ವಿಭಾಗಗಳ ಮೇಲೆ ಮಾತ್ರ ದಾಳಿ ಮಾಡಿ ನೂರಾರು ಕಡತಗಳನ್ನು ಪರಿಶೀಲಿಸಿ ಅಕ್ರಮಗಳನ್ನು ಪತ್ತೆ ಮಾಡಿದರೆ, ಹೊರತು ಇದಕ್ಕಿಂತ ಹೆಚ್ಚಿನ ಭ್ರಷ್ಟಾಚಾರ ನಡೆಯುವ ವಿಭಾಗಗಳಾದ ನಗರ ಯೋಜನೆ ಮತ್ತು ಇಂಜಿನಿಯರಿಂಗ್ ವಿಭಾಗಗಳಿಗೆ ಕಾಲಿಟ್ಟಿಲ್ಲ. ಬಿಡಿಎ ಪ್ರಕರಣದಲ್ಲಿ ಯಾವುದೇ ಒಬ್ಬ ಅಧಿಕಾರಿಯ ಅಥವಾ ನೌಕರನ ಮೇಲಾಗಲಿ ಪ್ರಕರಣ ದಾಖಲಾಗಿಲ್ಲ. ಎಸಿಬಿ ಭ್ರಷ್ಟಾಚಾರ ನಿಗ್ರಹ ಮಾಡುತ್ತಿದೆ ಎಂದು ತೋರ್ಪಡಿಕೆಗಾಗಿ ದಾಳಿ ಮಾಡುತ್ತಿದೆ. ರಾಜ್ಯದ ಇತಿಹಾಸದಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರವಾದ ಬಿಟ್ ಕಾಯಿನ್ ಹಗರಣದಿಂದ ಜನರ ಗಮನ ಬೇರೆಡೆ ಸೆಳೆಯುವ ತಂತ್ರ ಇದಾಗಿದೆ. 

-ರವಿ ಕೃಷ್ಣಾರೆಡ್ಡಿ, ರಾಜ್ಯಾಧ್ಯಕ್ಷ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News