ಒಡಿಶಾ, ತೆಲಂಗಾಣದ ಜನರು ಮಾತ್ರ ಕುಚಲಕ್ಕಿ ಬಳಸುತ್ತಾರೆ: ಕೇಂದ್ರ ಆಹಾರ ಸಚಿವ

Update: 2021-12-04 15:47 GMT
ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ (PTI)

ಹೊಸದಿಲ್ಲಿ, ಡಿ.4: ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರು ಶುಕ್ರವಾರ ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಕೇವಲ ಒಡಿಶಾ ಮತ್ತು ತೆಲಂಗಾಣದ ಜನರು ಮಾತ್ರ ಕುಚಲಕ್ಕಿಯನ್ನು ಬಳಸುತ್ತಾರೆ ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ.

ತಮ್ಮ ರಾಜ್ಯಗಳಿಂದ ಕುಚಲಕ್ಕಿಯ ಖರೀದಿಯನ್ನು ಕೇಂದ್ರವು ನಿಲ್ಲಿಸಿದ್ದೇಕೆ ಎಂಬ ಒಡಿಶಾ ಮತ್ತು ತೆಲಂಗಾಣ ಸಂಸದರು ಪ್ರಶ್ನಿಸಿದಾಗ ಗೋಯಲ್, ‘ಇತರ ರಾಜ್ಯಗಳಲ್ಲಿಯ ಜನರೂ ಬಳಸುವಂತಹ ಅಕ್ಕಿಯನ್ನು ನಾವು ಪೂರೈಸಬೇಕಾಗಿದೆ’ ಎಂದು ಉತ್ತರಿಸಿದರು ಎಂದು telegraphindia.com ವರದಿ ಮಾಡಿದೆ.

"ಜನರ ಮೇಲೆ ಯಾವುದೇ ನಿರ್ದಿಷ್ಟ ವಿಧದ ಅಕ್ಕಿಯನ್ನು ನಾವು ಹೇರುವಂತಿಲ್ಲ. ಇತರ ರಾಜ್ಯಗಳಲ್ಲಿ ಬಳಸಲಾಗುವ ಅಕ್ಕಿಯನ್ನು ಭಾರತೀಯ ಆಹಾರ ನಿಗಮ (ಎಫ್ಸಿಐ)ದಿಂದ ಖರೀದಿಸಬಹುದು" ಎಂದರು.

ಆದರೆ ದೇಶದ ಇತರ ಭಾಗಗಳಲ್ಲಿಯ ಜನರು ಕುಚಲಕ್ಕಿಯನ್ನು ತಿನ್ನುವುದಿಲ್ಲ ಎನ್ನುವುದು ಸಚಿವರ ಗ್ರಹಿಕೆಯಾಗಿದ್ದರೆ ಅವರು ಪ.ಬಂಗಾಳದತ್ತ ಅಗತ್ಯವಾಗಿ ಕಣ್ಣು ಹಾಯಿಸಬೇಕು. ಬಂಗಾಳದಲ್ಲಿ ಬಳಕೆಯಾಗುವ 155 ಲ.ಟ.ಅಕ್ಕಿಯ ಪೈಕಿ ಶೇ.90ರಷ್ಟು ಕುಚಲಕ್ಕಿಯಾಗಿದೆ. ಉತ್ತರ ಭಾರತದ ಜನರು ಬೆಳ್ತಿಗೆ ಅನ್ನಕ್ಕೆ ಆದ್ಯತೆ ನೀಡುತ್ತಿದ್ದರೆ, ಪ.ಬಂಗಾಳದ ಜನರು ಕುಚಲಕ್ಕಿ ಅನ್ನವನ್ನು ಊಟ ಮಾಡುತ್ತಾರೆ. ಪೂಜೆಗಳಂತಹ ಸಂದರ್ಭಗಳಲ್ಲಿ ಮಾತ್ರ ಅಲ್ಲಿಯ ಜನರು ಬೆಳ್ತಿಗೆ ಅನ್ನವನ್ನು ಬಳಸುತ್ತಾರೆ ಎಂದು ಬಂಗಾಳ ಕೃಷಿ ಇಲಾಖೆಯ ಅಧಿಕಾರಿಯೋರ್ವರು ತಿಳಿಸಿದರು. ನೆರೆಯ ಬಿಹಾರದಲ್ಲಿಯೂ ಕುಚಲಕ್ಕಿಯು ಜನಪ್ರಿಯವಾಗಿದೆ ಎಂದು telegraphindia ವರದಿ ಮಾಡಿದೆ.

ಬಿಹಾರದಲ್ಲಿ ಕುಚಲಕ್ಕಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಈ ದಿನಗಳಲ್ಲಿ ಅದು ಬೆಳ್ತಿಗೆ ಅಕ್ಕಿಗಿಂತಲೂ ದುಬಾರಿಯಾಗಿದೆ ಎಂದು ಮುಂಗೇರ್ನ ಪ್ರಗತಿಶೀಲ ಕೃಷಿ ಮಂಚ್ ನ ಸಂಚಾಲಕ ಕಿಶೋರ್ ಜೈಸ್ವಾಲ್ ಹೇಳಿದರು. ಕುಚಲಕ್ಕಿ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ಕಡಿಮೆ ಸಕ್ಕರೆಯನ್ನು ಹೊಂದಿದೆ ಎಂದರು.

ಕೇಂದ್ರವು ರಾಜ್ಯಗಳೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯಂತೆ ಅಕ್ಕಿಯನ್ನು ಖರೀದಿಸುತ್ತದೆ ಮತ್ತು ಇದು ಎಫ್ಸಿಐಗೆ ತಾನು ಖರೀದಿಸುವ ಅಕ್ಕಿಯ ವಿಧವನ್ನು ನಿರ್ದಿಷ್ಟಗೊಳಿಸಲು ಅವಕಾಶ ನೀಡುತ್ತದೆ ಎಂದ ಗೋಯಲ್, ಸರಕಾರವು ಈ ಮೊದಲು ಕುಚಲಕ್ಕಿಯನ್ನು ಏಕೆ ಖರೀದಿಸುತ್ತಿತ್ತು ಎನ್ನುವುದನ್ನು ವಿವರಿಸಲಿಲ್ಲ.

ತಮ್ಮ ರಾಜ್ಯಗಳಿಂದ ಕುಚಲಕ್ಕಿಯನ್ನು ಖರೀದಿಸದಂತೆ ಎಫ್ಸಿಐಗೆ ಕೇಂದ್ರದ ನಿರ್ದೇಶದ ಕುರಿತು ರಾಜ್ಯಸಭೆಯಲ್ಲಿ ಬಿಜು ಜನತಾದಳದ ನಾಯಕ ಪ್ರಸನ್ನ ಆಚಾರ್ಯ ಮತ್ತು ಟಿಆರ್ಎಸ್ ಸದಸ್ಯ ಕೆ.ಕೇಶವ ರಾವ್ ಪ್ರಶ್ನಿಸಿದ್ದರು. ನಿರ್ದೇಶವನ್ನು ಹಿಂದೆಗೆದುಕೊಳ್ಳುವಂತೆ ಅವರು ಆಗ್ರಹಿಸಿದ್ದರು.

ಈ ವರ್ಷ ಒಡಿಶಾದಲ್ಲಿ ರಾಜ್ಯದ ಕಲ್ಯಾಣ ಯೋಜನೆಗಳಿಗೆ ಪೂರೈಸಿದ ಬಳಿಕ ಸುಮಾರು 28 ಲ.ಟ.ಕುಚಲಕ್ಕಿ ಹೆಚ್ಚುವರಿಯಾಗಿ ಉಳಿದುಕೊಂಡಿದೆ ಎಂದ ಆಚಾರ್ಯ, "ನಾವು ನಮ್ಮಲ್ಲಿಯ ಮಿಗತೆ ದಾಸ್ತಾನನ್ನು ಎಫ್ಸಿಐ ಮೂಲಕ ಪೂರೈಸುತ್ತಿದ್ದೆವು. ಆದರೆ ನಮ್ಮ ಕುಚಲಕ್ಕಿಯನ್ನು ಖರೀದಿಸದಂತೆ ಎಘ್ಸಿಐಗೆ ನಿರ್ದೇಶ ನೀಡುವ ಮೂಲಕ ಸರಕಾರವು ಒಡಿಶಾ,ತೆಲಂಗಾಣ ಮತ್ತು ಇತರ ರಾಜ್ಯಗಳಲ್ಲಿಯ ಕೃಷಿಕರ ಸಮಸ್ಯೆಗಳನ್ನು ಇನ್ನಷ್ಟು ಹೆಚ್ಚಿಸಿದೆ. ಸರಕಾರವು ನಮ್ಮ ಮಿಗತೆ ಕುಚಲಕ್ಕಿಯನ್ನು ಖರೀದಿಸದಿದ್ದರೆ ಅದನ್ನು ನಾವು ಬಂಗಾಳ ಕೊಲ್ಲಿಗೆ ಎಸೆಯಬೇಕೇ’ ಎಂದು ಪ್ರಶ್ನಿಸಿದರು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News