ಸಮುದಾಯಕ್ಕೆ ಪ್ರಸರಿಸಿದ ಒಮೈಕ್ರಾನ್ ಸೋಂಕು: ದೃಢಪಡಿಸಿದ ಆಸ್ಟ್ರೇಲಿಯಾ

Update: 2021-12-06 18:50 GMT
ಸಾಂದರ್ಭಿಕ ಚಿತ್ರ

ಸಿಡ್ನಿ, ಡಿ.6: ದೇಶದ ಬೃಹತ್ ನಗರ ಸಿಡ್ನಿಯಲ್ಲಿ 5 ಜನರಿಗೆ ಸ್ಥಳೀಯವಾಗಿ ಒಮೈಕ್ರಾನ್ ಸೋಂಕು ತಗುಲಿದ್ದು ಇದು ರೂಪಾಂತರಿತ ಸೋಂಕು ಸಮುದಾಯ ಮಟ್ಟಕ್ಕೆ ಪ್ರಸರಣಗೊಂಡಿರುವುದನ್ನು ದೃಢಪಡಿಸಿದೆ ಎಂದು ಆಸ್ಟ್ರೇಲಿಯಾದ ಆರೋಗ್ಯ ಇಲಾಖೆ ಹೇಳಿದೆ.
 ‌
2 ಶಾಲೆಗಳು ಹಾಗೂ ಜಿಮ್ನಲ್ಲಿ ಒಮೈಕ್ರಾನ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ಇದರಿಂದ ಈ ಪ್ರಾಂತದಲ್ಲಿ ಸಮುದಾಯ ಮಟ್ಟಕ್ಕೆ ಪ್ರಸರಿಸಿರುವುದು ದೃಢಪಟ್ಟಿದೆ. ಈ ಪ್ರದೇಶದೊಂದಿಗೆ ನಿಕಟ ಸಂಪರ್ಕದಲ್ಲಿರುವ ಇತರ ಹಲವು ಪ್ರಕರಣಗಳಿಗೆ ಸಂಬಂಧಿಸಿ ತುರ್ತು ಜಿನೋಮ್ ಪರೀಕ್ಷೆ ನಡೆಯುತ್ತಿದೆ ಎಂದು ನ್ಯೂಸೌತ್ ವೇಲ್ಸ್‌ನ ಮುಖ್ಯ ಆರೋಗ್ಯಾಧಿಕಾರಿ ಕೆರಿ ಚಾಂಟ್ ಹೇಳಿದ್ದಾರೆ. 

ನ್ಯೂಸೌತ್ ವೇಲ್ಸ್ ರಾಜ್ಯದಲ್ಲಿ 15 ಒಮೈಕ್ರಾನ್ ಸೋಂಕು ಪ್ರಕರಣ ದೃಢಪಟ್ಟಿದ್ದು ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ. ದಕ್ಷಿಣ ಆಫ್ರಿಕಾದಲ್ಲಿದ್ದ ಕೆಲವು ವ್ಯಕ್ತಿಗಳು ದೋಹಾ ಮೂಲಕ ಆಸ್ಟೇಲಿಯಾಕ್ಕೆ ಆಗಮಿಸಿದ ವಿಮಾನದಲ್ಲಿ ದೇಶವನ್ನು ಪ್ರವೇಶಿಸಿದ್ದು ಇವರಿಂದ ಒಮೈಕ್ರಾನ್ ಸೋಂಕು ಹರಡಿರುವ ಸಾಧ್ಯತೆಯಿದೆ ಎಂದವರು ಹೇಳಿದ್ದಾರೆ.
  
ಈ ಮಧ್ಯೆ, ಆಸ್ಟ್ರೇಲಿಯಾದ ದಕ್ಷಿಣ ರಾಜ್ಯಗಳು ಅಂತರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಬಿಗಿಗೊಳಿಸಿದ್ದು, ದೇಶಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕರಿಗೂ 14 ದಿನದ ಕ್ವಾರಂಟೈನ್ ಕಡ್ಡಾಯ ಎಂದು ಘೋಷಿಸಿದೆ. ಆಗ್ನೇಯ ರಾಜ್ಯಗಳಿಂದ ಬರುವ ಪ್ರಯಾಣಿಕರು ದಕ್ಷಿಣ ರಾಜ್ಯದ ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಸೋಂಕು ಪರೀಕ್ಷೆ ನಡೆಸಬೇಕು ಮತ್ತು ನೆಗೆಟಿವ್ ವರದಿ ಬರುವವರೆಗೆ ಪ್ರತ್ಯೇಕವಾಗಿ ಇರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News