2022ರ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ಗೆ ಅಮೆರಿಕ ರಾಜತಾಂತ್ರಿಕ ಬಹಿಷ್ಕಾರ

Update: 2021-12-07 01:42 GMT
ಫೈಲ್ ಫೋಟೊ

ವಾಷಿಂಗ್ಟನ್: ಮುಂದಿನ ವರ್ಷ ನಡೆಯುವ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ಗೆ ಅಮೆರಿಕ ರಾಜತಾಂತ್ರಿಕ ಬಹಿಷ್ಕಾರ ಹಾಕಿದೆ. ಚೀನಾ ಮಾನವ ಹಕ್ಕುಗಳನ್ನು ದಮನಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದ ಅಥ್ಲೀಟ್‌ಗಳು ಸ್ಪರ್ಧಿಸದಂತೆ ತಡೆಯುವುದು ಅಸಾಧ್ಯ ಎಂದು ಸ್ಪಷ್ಟಪಡಿಸಿದೆ.

ವಾಯುವ್ಯ ಕ್ಸಿಂಗಿಯಾಂಗ್ ಪ್ರದೇಶದಲ್ಲಿ ಯ್ಯೂಘುರ್ ಮುಸ್ಲಿಮರ ಹತ್ಯಾಕಾಂಡವನ್ನು ತಡೆಯುವಲ್ಲಿ ಚೀನಾ ವಿಫಲವಾಗಿದೆ ಎಂದು ಆಪಾದಿಸಿದ ಅಮೆರಿಕ ಮುಂದಿನ ವರ್ಷದ ಫೆಬ್ರುವರಿಯಲ್ಲಿ ನಡೆಯುವ ಕೂಟಕ್ಕೆ ಅಧಿಕಾರಿಗಳು ಅಥವಾ ರಾಜತಾಂತ್ರಿಕರನ್ನು ಕಳುಹಿಸದಿರಲು ನಿರ್ಧರಿಸಿದೆ. ಹಲವು ತಿಂಗಳುಗಳಿಂದ ಈ ಸಂಬಂಧ ನಿರ್ಧಾರ ತೂಗುಯ್ಯಿಲೆಯಾಗಿತ್ತು.

ಅಮೆರಿಕದ ಈ ಕ್ರಮಕ್ಕೆ ಬೀಜಿಂಗ್ ತಕ್ಷಣಕ್ಕೆ ಪ್ರತಿಕ್ರಿಯಿಸಿಲ್ಲ. ಆದರೆ ಇಂಥ ಬಹಿಷ್ಕಾರಕ್ಕೆ ಪ್ರತೀಕಾರ ಕೈಗೊಳ್ಳುವುದಾಗಿ ಚೀನಾದ ವಿದೇಶಾಂಗ ಸಚಿವಾಲಯ ಈ ಮೊದಲು ಎಚ್ಚರಿಸಿತ್ತು. ಅಮೆರಿಕದ ಈ ನಿರ್ಧಾರವನ್ನು ಅಮೆರಿಕದ ಬಲಪಂಥೀಯ ಸಂಘಟನೆಗಳು ಮತ್ತು ರಾಜಕಾರಣಿಗಳು ವ್ಯಾಪಕವಾಗಿ ಸ್ವಾಗತಿಸಿದ್ದಾರೆ. ಚೀನಾದಿಂದ ಹಕ್ಕುಗಳ ದಮನ ಆಗುತ್ತಿರುವುದರ ವಿರುದ್ಧ ಧ್ವನಿ ಎತ್ತುವಂತೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮೇಲೆ ಭಾರಿ ಒತ್ತಡ ಇತ್ತು.

"ಚೀನಾದಿಂದ ಕ್ಸಿಂಗಿಯಾಂಗ್ ಪ್ರದೇಶದಲ್ಲಿ ಮಾನವೀಯತೆ ವಿರುದ್ಧ ನಡೆಯುತ್ತಿರುವ ಅಪರಾಧದ ಕಾರಣದಿಂದ ಮತ್ತು ಇತರ ಮಾನವ ಹಕ್ಕು ಉಲ್ಲಂಘನೆಯ ಕಾರಣದಿಂದ ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ಗೆ ನಮ್ಮ ಆಡಳಿತ ಯಾವುದೇ ರಾಜತಾಂತ್ರಿಕರನ್ನು ಕಳುಹಿಸುವುದಿಲ್ಲ ಅಥವಾ ಅಧಿಕೃತವಾಗಿ ಪ್ರತಿನಿಧಿತ್ವ ಇರುವುದಿಲ್ಲ"’ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪಾಕಿ ಹೇಳಿದ್ದಾರೆ.

ಆದರೆ ಅಮೆರಿಕ ತಂಡದ ಅಥ್ಲೀಟ್‌ಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಶೇಕಡ 100ರಷ್ಟು ನಾವು ಅವರ ಬೆಂಬಲಕ್ಕಿದ್ದೇವೆ. ಇಲ್ಲಿಂದಲೇ ನಾವು ಹುರಿದುಂಬಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

"ಅಧಿಕಾರಿಗಳನ್ನು ಕೂಟಕ್ಕೆ ಕಳುಹಿಸುವುದು ಆಯಾ ಸರ್ಕಾರಗಳ ರಾಜಕೀಯ ನಿರ್ಧಾರ. ಈ ವಿಚಾರದಲ್ಲಿ ಐಒಸಿ ತನ್ನ ರಾಜಕೀಯ ತಟಸ್ಥತೆಯನ್ನು ಸಂಪೂರ್ಣವಾಗಿ ಗೌರವಿಸುತ್ತದೆ" ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News