ಕಾರ್ಮಿಕ ವಿರೋಧಿ ಚಟುವಟಿಕೆಗಳನ್ನು ಖಂಡಿಸಿದ್ದಕ್ಕೆ ಕೆಲಸದಿಂದ ವಜಾ: ಆರೋಪ

Update: 2021-12-07 12:50 GMT

ಬೆಂಗಳೂರು, ಡಿ.7: ಕಂಪನಿಯಲ್ಲಿ ನಡೆಯುತ್ತಿರುವ ಕಾರ್ಮಿಕ ವಿರೋಧಿ ಚಟುವಟಿಕೆಗಳನ್ನು ಖಂಡಿಸಿ, ಕೆಜಿಎಲ್‌ಯು ಅಡಿಯಲ್ಲಿ ಯೂನಿಯನ್ ರಚಿಸಿ ಕಂಪನಿ ವಿರುದ್ಧ ದಾವೆ ಹೂಡಿರುವ ಕಾರ್ಮಿಕರನ್ನು ಗುರುತಿಸಿ ಐಟಿಐ ಕಂಪನಿಯು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಎಐಸಿಸಿಟಿಯುನ ಕಾರ್ಮಿಕ ಸಂಘಟನೆಯ ಮುಖ್ಯಸ್ಥೆ ಮೈತ್ರೇಯಿ ಕೃಷ್ಣನ್ ಆರೋಪಿಸಿದ್ದಾರೆ. 

ಮಂಗಳವಾರ ಐಟಿಐ ಕಂಪನಿಯ ಮುಂದೆ ಪ್ರತಿಭಟನೆ ಮಾಡಿ ಮಾತನಾಡಿದ ಅವರು, ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಸುಮಾರು 30 ವರ್ಷಗಳಿಂದ ಕಂಪೆನಿಯಲ್ಲಿ ಕೆಲಸ ಮಾಡುತ್ತಾ ಕಂಪೆನಿಯ ಉನ್ನತಿಗೆ ಶ್ರಮಿಸಿದ್ದಾರೆ. ಆದರೆ, ಯಾವುದೇ ನೋಟಿಸ್ ನೀಡದೆ ಡಿ.1ರಿಂದ ಕಾರ್ಮಿಕರು ಕೆಲಸಕ್ಕೆ ಹೋಗದಂತೆ ಕಂಪನಿಯ ಆಡಳಿತ ಮಂಡಳಿ ತಡೆ ಹಿಡಿಯುತ್ತಿದೆ. ಈ ಕಾರ್ಮಿಕ ವಿರೋಧಿ ಚಟುವಟಿಕೆಯನ್ನು ಖಂಡಿಸಿ, ಕಳೆದ ಆರು ದಿನಗಳಿಂದ ನಿರಂತರ ಪ್ರತಿಭಟನಾ ಧರಣಿ ಮಾಡಲಾಗುತ್ತಿದೆ. ಹಾಗೆಯೇ ಕಂಪನಿಯು ಕಾರ್ಮಿಕರನ್ನು ಪುನಃ ಕೆಲಸಕ್ಕೆ ತೆಗೆದುಕೊಳ್ಳುವವರೆಗೂ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. 

ಕಂಪನಿಯು ಬಾಕಿ ಇರುವ ಸಂಬಳ, ಭವಿಷ್ಯ ನಿಧಿ ಅಥವಾ ನೌಕರರ ರಾಜ್ಯ ವಿಮೆಯನ್ನು ಪಾವತಿಸದೆ ಕಾರ್ಮಿಕರನ್ನು ಶೋಷಿಸುತ್ತಿತ್ತು. ಕಳೆದ ವರ್ಷ ಜುಲೈನಲ್ಲಿ ಒಪ್ಪಂದದ ಮುಕ್ತಾಯದ ನೆಪದಲ್ಲಿ ಸುಮಾರು 400 ಕಾರ್ಮಿಕರನ್ನು ಕಂಪೆನಿಯು ವಜಾಗೊಳಿಸಿದೆ. ನಂತರ 400 ಕಾರ್ಮಿಕರಲ್ಲಿ 150 ಮಂದಿಯನ್ನು ಆಯ್ಕೆ ಮಾಡಿಕೊಂಡು ಮತ್ತೆ ಕೆಲಸಕ್ಕೆ ನೇಮಿಸಿಕೊಂಡಿದೆ. ಉಳಿದ ಕಾರ್ಮಿಕರಿಗೆ ತಲಾ ಸುಮಾರು 1.5 ಲಕ್ಷ ರೂ. ನಷ್ಟು ಬಾಕಿ ಪಾವತಿಸದೇ ಉಳಿಸಿಕೊಂಡಿದೆ ಎಂದು ಅವರು ತಿಳಿಸಿದರು.  

ದಶಕಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಐಟಿಐ ಕಂಪನಿಯ ಕಾರ್ಮಿಕರನ್ನು ಖಾಯಂಗೊಳಿಸುವ ಪ್ರಕರಣವು ಭಾರತ ಸರಕಾರದ ಪ್ರಾದೇಶಿಕ ಕಾರ್ಮಿಕ ಆಯುಕ್ತರಲ್ಲಿ ದಾಖಲಾಗಿದೆ. ಕಚೇರಿಯಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಕಂಪನಿಯ ಕಾರ್ಮಿಕರ ಸೇವಾ ಷರತ್ತುಗಳನ್ನು ಬದಲಾಯಿಸಬಾರದೆಂದು ಕಾರ್ಮಿಕ ಆಯುಕ್ತರು ಐಟಿಐ ಆಡಳಿತ ಮಂಡಳಿಗೆ ಸೂಚನೆ ನೀಡಿದ್ದಾರೆ. ಆದರೂ ಐಟಿಐ ಆಡಳಿತ ಮಂಡಳಿಯು ಕಾರ್ಮಿಕ ಆಯುಕ್ತರ ಸೂಚನೆಯನ್ನು ಧಿಕ್ಕರಿಸಿ, ಕಾನೂನಿಗೆ ಅಗೌರವ ತೋರಿದೆ. ಆದುದರಿಂದ ಸಂಪರ್ಕ ಸಚಿವಾಲಯ ಮತ್ತು ಕೇಂದ್ರ ಕಾರ್ಮಿಕ ಇಲಾಖೆಯು ತಕ್ಷಣವೇ ಮಧ್ಯಪ್ರವೇಶಿಸಿ, ಕಾರ್ಮಿಕರಿಗೆ ಕೆಲಸ ಮಾಡಲು ಅನುಮತಿ ನೀಡುವಂತೆ ಹಾಗೂ ಭವಿಷ್ಯದಲ್ಲಿ ಇಂತಹ ಕಾನೂನು ಬಾಹಿರ ಕ್ರಮಗಳನ್ನು ತೆಗೆದುಕೊಳ್ಳದಂತೆ ಐಟಿಐ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕು. ಅಲ್ಲಿಯವರೆಗೂ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುವುದು. 
-ಮೈತ್ರೇಯಿ ಕೃಷ್ಣನ್, ಮುಖ್ಯಸ್ಥೆ, ಎಐಸಿಸಿಟಿಯುನ ಕಾರ್ಮಿಕ ಸಂಘಟನೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News