ರೈತರ ಹೋರಾಟದ ಭವಿಷ್ಯ ನಿರ್ಧರಿಸಲು ಡಿ.8ಕ್ಕೆ ಸಭೆ

Update: 2021-12-07 15:09 GMT

ಹೊಸದಿಲ್ಲಿ: ಬಾಕಿ ಉಳಿದಿರುವ ಆರು ಬೇಡಿಕೆಗಳಿಗೆ ಕೇಂದ್ರದ ಸ್ಪಂದನೆಯಿಂದ ಆತಂಕಗೊಂಡಿದ್ದು, ಮುಂದಿನ ಆಂದೋಲನದ ಹಾದಿಯನ್ನು ನಿರ್ಧರಿಸಲು ಡಿಸೆಂಬರ್ 8 ರಂದು ಸಭೆ ನಡೆಸುವುದಾಗಿ ಪ್ರತಿಭಟನಾನಿರತ ರೈತ ಸಂಘಗಳು ಮಂಗಳವಾರ ಹೇಳಿವೆ.

ಇದಕ್ಕೂ ಮುನ್ನ ಮಂಗಳವಾರ ರೈತ ಸಂಘಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ನಡೆಸಿ ಕೇಂದ್ರದ ಪ್ರತಿಕ್ರಿಯೆ ಕುರಿತು ಚರ್ಚಿಸಿ ಇನ್ನೂ ಕೆಲವು ಬಾಕಿ ಉಳಿದಿವೆ ಎಂದು ಹೇಳಿದೆ.

"ನಮ್ಮ ಬಾಕಿ ಇರುವ ಬೇಡಿಕೆಗಳ ಕುರಿತು ಸರಕಾರದ ಪ್ರಸ್ತಾವನೆಗೆ ನಾವು ಕೆಲವು ಸಲಹೆಗಳು ಹಾಗೂ  ಆಕ್ಷೇಪಣೆಗಳನ್ನು ಕಳುಹಿಸಿದ್ದೇವೆ" ಎಂದು ಸಭೆಯ ನಂತರ ಎಸ್‌ಕೆಎಂ ಹೇಳಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್, "ರೈತರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರವು ಒಪ್ಪಿಗೆ ನೀಡಿದ್ದರೂ, ಪ್ರಸ್ತಾವನೆಯ ರೂಪರೇಖೆಗಳು ಇನ್ನೂ ಸ್ಪಷ್ಟವಾಗಿಲ್ಲ. ನಾವು ನಮ್ಮ ಆತಂಕಗಳನ್ನು ಹೊಂದಿದ್ದೇವೆ. ಅದನ್ನು ನಾಳೆ ಮಧ್ಯಾಹ್ನ 2 ಗಂಟೆಗೆ ಚರ್ಚಿಸಲಾಗುವುದು. ನಮ್ಮ ಚಳುವಳಿ ಎಲ್ಲಿಯೂ ಹೋಗುವುದಿಲ್ಲ, ನಾವು ಇಲ್ಲೇ ಇರುತ್ತೇವೆ" ಎಂದು ಹೇಳಿದರು.

ಪ್ರತಿಭಟನೆ ಹಿಂಪಡೆದ ನಂತರವೇ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂಬ ಸರಕಾರದ ಷರತ್ತನ್ನು ಒಪ್ಪುವುದಿಲ್ಲ ಎಂದು ರೈತರು ಹೇಳಿದರು. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ನಂತರ ರೈತರು ಆರು ಬೇಡಿಕೆಗಳನ್ನು ಮುಂದಿಟ್ಟಿದ್ದರು.

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆಯನ್ನು ಖಾತ್ರಿಪಡಿಸುವ ಕಾನೂನು ಖಾತರಿ ರೈತರ ಪ್ರಾಥಮಿಕ ಬೇಡಿಕೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News