ಸೇನಾ ಮುಖ್ಯಸ್ಥರ ಸಾವಿಗೆ ಯಾರು ಹೊಣೆ?

Update: 2021-12-09 05:58 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನಾಗಾಲ್ಯಾಂಡ್‌ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯ ಸಂದರ್ಭದಲ್ಲಿ ಪ್ರಮಾದವಶಾತ್ 14 ಗ್ರಾಮಸ್ಥರು ಸೈನಿಕರ ಗುಂಡಿಗೆ ಬಲಿಯಾದ ಆಘಾತದಿಂದ ಭಾರತ ಇನ್ನೂ ಚೇತರಿಸಿಲ್ಲ. ಇದೀಗ ತಮಿಳುನಾಡಿನಲ್ಲಿ ಇನ್ನೊಂದು ಭಾರೀ ದುರಂತ ಘಟಿಸಿದೆ. ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಪತನಗೊಂಡು ಸೇನಾ ಮುಖ್ಯಸ್ಥರಾಗಿರುವ ಬಿಪಿನ್ ರಾವತ್ ಸಹಿತ 13 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ ರಾವತ್ ಅವರ ಪತ್ನಿಯೂ ಸೇರಿದ್ದಾರೆ . ಮೃತರು ಸಾಮಾನ್ಯ ಸೈನಿಕರೇ ಆಗಿದ್ದರೆ, ಹತ್ತರಲ್ಲಿ ಹನ್ನೊಂದಾಗಿ ನಾವು ಮರೆತು ಬಿಡಬಹುದಾಗಿತ್ತು. ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ತಳಸ್ತರ ಯೋಧರ ಸಾವನ್ನು ನಾವು ಒಪ್ಪಿಕೊಳ್ಳಲು ಅಭ್ಯಾಸ ಮಾಡಿಕೊಂಡಿದ್ದೇವೆ. 40ಕ್ಕೂ ಅಧಿಕ ಮಂದಿ ಯೋಧರು ಒಬ್ಬ ಉಗ್ರನಿಗೆ ಬಲಿಯಾದಾಗ ಈ ದೇಶಕ್ಕೆ ಏನೂ ಅನ್ನಿಸಲಿಲ್ಲ. ಬದಲಿಗೆ ಅದನ್ನು ಕೆಲವು ರಾಜಕಾರಣಿಗಳು ಚುನಾವಣೆಗಾಗಿ ಬಳಸಿಕೊಂಡರು. ಗುಪ್ತಚರ ವೈಫಲ್ಯ ಚರ್ಚೆಯಾಗಲೇ ಇಲ್ಲ. ಇದೇ ಸಂದರ್ಭದಲ್ಲಿ ವರ್ಷಕ್ಕೆ ಸರಾಸರಿ 3ರಂತೆ ಮಿಗ್ ವಿಮಾನಗಳು ಪತನಗೊಳ್ಳುತ್ತವೆ. ಸಾಮಾನ್ಯ ಸೈನಿಕರು ಸಾಯುತ್ತಲೇ ಇದ್ದಾರೆ. ಆದರೂ ಇದು ಕಳವಳಕಾರಿ ವಿಷಯವಾಗಿ ನಮ್ಮ ರಾಜಕೀಯ ನಾಯಕರು ಚರ್ಚಿಸಿದ್ದಿಲ್ಲ. ಕನಿಷ್ಟ ವಿಷಾದ ವ್ಯಕ್ತ ಪಡಿಸಿದ ಉದಾಹರಣೆಗಳೂ ಇಲ್ಲ. ಅವರ ಸಾವು ಮುಖ ಪುಟದ ಸುದ್ದಿಯಾಗುವುದೂ ಇಲ್ಲ. ಭಾರತದ ಸೈನಿಕರ ಆಹಾರ, ಅವರಿಗೆ ಸಿಗುವ ಮೂಲಭೂತ ಸವಲತ್ತುಗಳ ಬಗ್ಗೆ ಯಾರೂ ಪ್ರಶ್ನೆಯೆತ್ತುವಂತೆಯೇ ಇಲ್ಲ. ಪ್ರಶ್ನೆಯೆತ್ತಿದರೆ ಅವರು ದೇಶದ್ರೋಹಿಗಳಾಗಿ ಬಿಡುತ್ತಾರೆ. ತಮ್ಮ ಸ್ಥಿತಿಗತಿಯನ್ನು ತೋಡಿಕೊಂಡ ಸೈನಿಕರ ಸ್ಥಿತಿ ಅಂತಿಮವಾಗಿ ಏನಾಯಿತು ಎನ್ನುವುದನ್ನು ನಾವು ನೋಡಿದ್ದೇವೆ. ಆದರೆ ಇಂದು ಹೆಲಿಕಾಪ್ಟರ್ ಪತನದಿಂದ ಮೃತರಾಗಿರುವುದು ಈ ದೇಶದ ಸೇನೆಯ ಮೂರು ವಿಭಾಗಗಳ ಮುಖ್ಯಸ್ಥ ರಾವತ್. ಅವರು ಪ್ರಯಾಣಿಸುವ ಹೆಲಿಕಾಪ್ಟರ್ ನಿಗೂಢವಾಗಿ ಪತನಗೊಂಡಿದೆ. ಇದು ನಿಜಕ್ಕೂ ದೇಶ ತಲೆತಗ್ಗಿಸಬೇಕಾದ ವಿಷಯ.

ಈ ದೇಶದ ಸೇನೆಯ ಸರ್ವೋಚ್ಚ ನಾಯಕರಲ್ಲಿ ಒಬ್ಬರಾಗಿರುವ ರಾವತ್ ಪ್ರಯಾಣಿಸುವ ಹೆಲಿಕಾಪ್ಟರ್‌ನ ಸ್ಥಿತಿಯೇ ಹೀಗಾದರೆ, ಇತರ ಹೆಲಿಕಾಪ್ಟರ್‌ಗಳು ಮತ್ತು ಯುದ್ಧವಿಮಾನಗಳ ಬಗ್ಗೆ ನಾವು ಹೇಗೆ ಭರವಸೆಯಿಡಬೇಕು? ಇತ್ತೀಚಿನ ದಿನಗಳಲ್ಲಿ ರಾವತ್ ಬೇರೆ ಬೇರೆ ಕಾರಣಗಳಿಗೆ ಸುದ್ದಿಯಲ್ಲಿದ್ದವರು. ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ಮಾಧ್ಯಮಗಳಲ್ಲಿ ಮುನ್ನೆಲೆಗೆ ಬಂದಿದ್ದರು. ಮೂರು ವಿಭಾಗಗಳ ಮೊತ್ತ ಮೊದಲ ಮುಖ್ಯಸ್ಥ ಎನ್ನುವ ಹೆಗ್ಗಳಿಕೆಯೂ ಇವರದ್ದು. ಈಶಾನ್ಯ ಭಾರತದ ಕಾರ್ಯಾಚರಣೆಯಲ್ಲಿ ಇವರ ಹೆಸರು ಮುಂಚೂಣಿಯಲ್ಲಿದೆ. ಅಲ್ಲಿನ ಬಂಡುಕೋರ, ಉಗ್ರಗಾಮಿ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ಸರಕಾರಕ್ಕೆ ಇವರ ಕೊಡುಗೆ ಬಹುದೊಡ್ಡದು. ಮ್ಯಾನ್ಮಾರ್‌ನ ಗಡಿಗೆ ನುಗ್ಗಿ ನಡೆಸಿದ ಕಾರ್ಯಾಚರಣೆ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ಇಷ್ಟೆಲ್ಲ ಹಿನ್ನೆಲೆಯಿರುವ ರಾವತ್ ಅವರು ಹೆಲಿಕಾಪ್ಟರ್ ಪತನದಿಂದ ಮೃತಪಟ್ಟರು ಎಂದು ಒಂದು ವಾಕ್ಯದಲ್ಲಿ ಪ್ರಕರಣವನ್ನು ಮುಗಿಸುವುದು ಅಸಾಧ್ಯ. ಯಾಕೆಂದರೆ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಸಾಮಾನ್ಯದ್ದಾಗಿರಲಿಲ್ಲ. ಅದು ಎಂಐ -17 ವಿ 5 ರಶ್ಯ ನಿರ್ಮಿತ ಹೆಲಿಕಾಪ್ಟರ್ ಆಗಿದೆ. 8 ಎಂಐ - 17 ವಿ 5 ಹೆಲಿಕಾಪ್ಟರ್ ನಿರ್ಮಾಣಕ್ಕಾಗಿ ಭಾರತ ವಿಶೇಷ ಗುತ್ತಿಗೆಯನ್ನು ರಶ್ಯಕ್ಕೆ ನೀಡಿತ್ತು. ರಾವತ್ ಅವರು ಪ್ರಯಾಣಿಸುವ ಹೆಲಿಕಾಪ್ಟರ್‌ನ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತದೆ. ಹೀಗಿರುವಾಗ, ಏಕಾಏಕಿ ಇಂತಹದೊಂದು ದುರಂತ ಹೇಗೆ ಸಂಭವಿಸಿತು ಎನ್ನುವುದನ್ನು ಅರಿಯುವ ಹಕ್ಕು ಈ ದೇಶದ ಜನರಿಗೆ ಇದೆ.

 ಇತ್ತೀಚಿನ ದಿನಗಳಲ್ಲಿ ಸೇನೆಯನ್ನು ರಾಜಕೀಯವಾಗಿ ದುರ್ಬಳಕೆ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಸೇನೆಯ ಕಾರ್ಯಾಚರಣೆಗಳಿಗೆ ಸರಕಾರ ಮೂಗು ತೂರಿಸುವ ಪ್ರವೃತ್ತಿಗಳು ಹೆಚ್ಚುತ್ತಿವೆ. ರಕ್ಷಣಾ ಸಚಿವರು ಮಾತನಾಡಬೇಕಾದಲ್ಲಿ ನೇರವಾಗಿ ಸೇನಾ ಮುಖ್ಯಸ್ಥರೇ ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ರಾಜಕೀಯ ಚಟುವಟಿಕೆಗಳಿಗೆ ಸೇನೆಯ ಸಾಧನೆಗಳನ್ನು ಬಳಸುವ ಕೆಟ್ಟ ಮತ್ತು ಅಪಾಯಕಾರಿ ಬೆಳವಣಿಗೆಗಳು ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ರಫೇಲ್ ಹಗರಣ ದೇಶದ ಸೇನೆಯೊಳಗೆ ಭಾರೀ ಸದ್ದು ಮಾಡಿತ್ತು. ರಫೇಲ್ ವ್ಯವಹಾರದಲ್ಲಿ ಭಾರೀ ಅವ್ಯವಹಾರಗಳು ನಡೆದಿವೆ ಎನ್ನುವುದನ್ನು ಈಗಾಗಲೇ ಹಲವು ಹಿರಿಯ ಪತ್ರಕರ್ತರು ಆರೋಪಿಸಿದ್ದಾರೆ. ಅಂಬಾನಿಗೆ ಒಳಿತು ಮಾಡಬೇಕೆನ್ನುವ ಕಾರಣಕ್ಕಾಗಿ, ಒಪ್ಪಂದದಲ್ಲಿ ಹಲವು ಬದಲಾವಣೆಗಳನ್ನು ಮೋದಿ ಸರಕಾರ ಮಾಡಿದೆ ಎನ್ನುವ ಆರೋಪಗಳನ್ನು ವಿಪಕ್ಷ ನಾಯಕರು ಮಾಡುತ್ತಾ ಬಂದಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರಧಾನಿಯನ್ನು ಸಮರ್ಥಿಸಲು ಸೇನಾ ವರಿಷ್ಠರು ಮುಂದಾಗಿದ್ದರು. ಜೊತೆಗೆ ಪೆಗಾಸಸ್ ಗೂಢಚಾರಿಕೆ ರಾಜಕಾರಣಿಗಳ ಕುತ್ತಿಗೆಗೆ ಬಂದಿದೆ. ಸುಪ್ರೀಂಕೋರ್ಟ್ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ನಿರ್ಲಕ್ಷಿಸುವಂತಹದ್ದಲ್ಲ. ಇದರ ಜೊತೆ ಜೊತೆಗೆ ಭಾರತ-ಚೀನಾ ಗಡಿಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಅಫ್ಘಾನಿಸ್ತಾನ ತಾಲಿಬಾನ್ ವಶವಾದ ದಿನದಿಂದ ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ ಅದರ ಲಾಭ ಪಡೆಯಲು ಯತ್ನಿಸುತ್ತಿದೆ. ಇಂತಹ ಸಂದರ್ಭದಲ್ಲಿ ರಾವತ್‌ನಂತಹ ಹಿರಿಯ ಸೇನಾ ವರಿಷ್ಠ ಹೆಲಿಕಾಪ್ಟರ್ ಪತನದಿಂದ ಮೃತಪಟ್ಟಿರುವುದು ಆಘಾತಕಾರಿಯಾಗಿದೆ. ರಾವತ್ ಸಾವಿನಲ್ಲಿ ರಾಜಕೀಯ ಸಂಚುಗಳಿರಬಹುದೆ ಎನ್ನುವುದನ್ನು ತನಿಖೆ ನಡೆಸುವುದು ಅತ್ಯಗತ್ಯವಾಗಿದೆ.

ರಾವತ್ ಸಾವಿನ ಕುರಿತಂತೆಬಿಜೆಪಿಯೊಳಗಿರುವ ನಾಯಕರೇ ಆಘಾತವನ್ನು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಸುಪ್ರೀಂಕೋರ್ಟ್‌ನ ಹಿರಿಯ ನ್ಯಾಯಮೂರ್ತಿಯ ಮೂಲಕ ಈ ಪ್ರಕರಣವನ್ನು ತನಿಖೆಗೊಳಪಡಿಸಬೇಕು ಎಂದೂ ಆಗ್ರಹಿಸಿದ್ದಾರೆ. ರಾವತ್ ಸಾವು ಒಂದು ಆಕಸ್ಮಿಕವೇ ಆಗಿರಬಹುದು. ಆದರೆ ಆಕಸ್ಮಿಕ ಅಪಘಾತದ ಹಿಂದೆ ಹೆಲಿಕಾಪ್ಟರ್‌ನ ವೈಫಲ್ಯವಂತೂ ಇದ್ದೇ ಇದೆ. ಈ ವೈಫಲ್ಯದ ಹಿಂದೆ ಯಾರಿದ್ದಾರೆ ಎನ್ನುವುದು ತನಿಖೆಗೊಳಗಾಗಬೇಕು ಅಥವಾ ಇದೊಂದು ಪೂರ್ವ ನಿಯೋಜಿತ ಸಂಚಾಗಿದ್ದರೆ ದೇಶದ ಆಂತರಿಕ ಭದ್ರತೆಯ ಮೇಲೆ ಭಾರೀ ಪರಿಣಾಮ ಬೀರಬಹುದು. ರಾವತ್ ಸಾವು ಸೈನಿಕರ ನೈತಿಕ ಶಕ್ತಿಯ ಮೇಲೆ ದುಷ್ಪರಿಣಾಮ ಬೀರುವುದರ ಬಗ್ಗೆ ಅನುಮಾನವೇ ಇಲ್ಲ. ಅವರಿಗೆ ಧೈರ್ಯ ತುಂಬ ಬೇಕಾದರೆ ಈ ಸಾವನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕು. ಇದೇ ಸಂದರ್ಭದಲ್ಲಿ, ಭಾರತದ ಸೇನಾ ಹೆಲಿಕಾಪ್ಟರ್‌ಗಳ ಗುಣ ಮಟ್ಟಗಳ ಬಗ್ಗೆಯೂ ಚರ್ಚಿಸುವುದಕ್ಕೆ ಇದು ಸೂಕ್ತ ಸಮಯ. ಅವಧಿ ಕಳೆದ ಹೆಲಿಕಾಪ್ಟರ್‌ಗಳ ಬಳಕೆ, ಕಳಪೆ ಮಿಗ್ ಯುದ್ಧ ವಿಮಾನಗಳ ಬಳಕೆಯ ಬಗ್ಗೆಯೂ ಸರಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನಮ್ಮ ಯೋಧರ ಪ್ರಾಣದ ಜೊತೆಗೆ ಸರಕಾರ ಯಾವತ್ತೂ ಚೆಲ್ಲಾಟವಾಡಬಾರದು. ರಾಜಕಾರಣಿಗಳ ಅವ್ಯವಹಾರಗಳಿಗೆ, ನಮ್ಮ ಸೈನಿಕರು ಪ್ರಾಣವನ್ನು ತೆರುವಂತಾಗಬಾರದು. ಆದುದರಿಂದ ಮೊದಲು ಸೇನೆಯೊಳಗಿನ ಅವ್ಯವಹಾರದ ವಿರುದ್ಧ ಯುದ್ಧ ನಡೆಯಲಿ. ಈ ಯುದ್ಧದಲ್ಲಿ ಗೆಲ್ಲದೆ, ಹೊರಗಿನ ಯುದ್ಧದಲ್ಲಿ ಗೆಲ್ಲುವುದು ಸಾಧ್ಯವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News