ಮಲೇಶ್ಯಾ ಮಾಜಿ ಪ್ರಧಾನಿಯ ಜೈಲುಶಿಕ್ಷೆ ಆದೇಶ ಎತ್ತಿಹಿಡಿದ ಅಪೀಲು ನ್ಯಾಯಾಲಯ

Update: 2021-12-08 18:39 GMT
ನಜೀಬ್ ರಝಾಕ್(file photo:PTI)

ಕೌಲಾಲಂಪುರ, ಡಿ.8: ಭ್ರಷ್ಟಾಚಾರ ಪ್ರಕರಣದಲ್ಲಿ ಮಲೇಶ್ಯಾದ ಮಾಜಿ ಪ್ರಧಾನಿ ನಜೀಬ್ ರಝಾಕ್ ದೋಷಿ ಎಂದು ನೀಡಲಾಗಿರುವ ಆದೇಶವನ್ನು ಮಲೇಶ್ಯಾದ ಅಪೀಲು ನ್ಯಾಯಾಲಯ ಬುಧವಾರ ಎತ್ತಿಹಿಡಿದಿದೆ.

ಈಗ ದಿವಾಳಿಯಾಗಿರುವ 1ಎಂಬಿಡಿ ಸಂಸ್ಥೆಯ ಸಹಸಂಸ್ಥೆ ಎಸ್‌ಆರ್‌ಸಿ ಇಂಟರ್‌ನ್ಯಾಷನಲ್‌ನಿಂದ  ಸುಮಾರು 73.34 ಕೋಟಿ ರೂ. ಮೊತ್ತವನ್ನು ನಜೀಬ್ ಅವರ ಬ್ಯಾಂಕ್‌ಖಾತೆಗೆ ವರ್ಗಾಯಿಸಿದ ಪ್ರಕರಣ ಇದಾಗಿದ್ದು ಈ ಪ್ರಕರಣದಲ್ಲಿ ನಜೀಬ್ ಅಪರಾಧಿ ಎಂದು 2020ರ ಜುಲೈಯಲ್ಲಿ ಘೋಷಿಸಿದ್ದ ನ್ಯಾಯಾಲಯ ಅವರಿಗೆ 12 ವರ್ಷದ ಜೈಲುಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅಪೀಲು ನ್ಯಾಯಾಲಯದಲ್ಲಿ ನಜೀಬ್ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ‘ದೇಶದ ಹಿತಾಸಕ್ತಿಯ ನಿಟ್ಟಿನಲ್ಲಿ ತಾನು ಹೀಗೆ ಮಾಡಿದ್ದೆ’ ಎಂಬ ನಜೀಬ್ ಹೇಳಿಕೆಯನ್ನು ಒಪ್ಪಲಿಲ್ಲ. ಇಲ್ಲಿ ಯಾವುದೇ ರಾಷ್ಟ್ರೀಯ ಹಿತಾಸಕ್ತಿ ಇಲ್ಲ, ಕೇವಲ ರಾಷ್ಟ್ರೀಯ ಮುಜುಗುರ ಮಾತ್ರ. ತಮ್ಮ ಖಾತೆಗೆ ಜಮೆಯಾಗಿರುವ ಹಣ ಅಕ್ರಮ ಚಟುವಟಿಕೆಗೆ ಸಂಬಂಧಿಸಿದ್ದು ಎಂದು ನಜೀಬ್‌ಗೆ ತಿಳಿದಿತ್ತು ಅಥವಾ ತಿಳಿದಿರಬಹುದು ಎಂದು ನಂಬಲು ಕಾರಣಗಳಿವೆ ಎಂದು ನ್ಯಾಯಾಧೀಶರು ಪ್ರತಿಕ್ರಿಯಿಸಿದ್ದಾರೆ. ನಜೀಬ್ ಈಗ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು, ಅವರು ಮಲೇಶ್ಯಾದ ಅತ್ಯುನ್ನತ ನ್ಯಾಯಾಲಯ ಫೆಡರಲ್ ಕೋರ್ಟ್‌ನಲ್ಲಿ ಸಲ್ಲಿಸಿರುವ ಮನವಿಯ ತೀರ್ಪು ಪ್ರಕಟವಾಗುವವರೆಗೆ ಅವರು ಜೈಲಿನಿಂದ ಹೊರಗೆ ಇರಬಹುದು ಎಂದು ಅಪೀಲು ನ್ಯಾಯಾಲಯ ಸೂಚಿಸಿದೆ.

ತೀರ್ಪಿನಿಂದ ಅಸಮಾಧಾನಗೊಂಡಿದ್ದು ಫೆಡರಲ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ನಜೀಬ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News