ವೋಟ್‌ ಬ್ಯಾಂಕ್ ಸೃಷ್ಟಿಗೆ ಮತಾಂತರ ವಿರೋಧಿ ಕಾಯ್ದೆ : ಮಾಜಿ ಸಿಎಂ ಸಿದ್ದರಾಮಯ್ಯ ಆರೋಪ

Update: 2021-12-09 02:29 GMT

ಬೆಂಗಳೂರು: ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸುವ ಬಿಜೆಪಿ ಯೋಜನೆಯು ರಾಜ್ಯದಲ್ಲಿ ಮತ ಬ್ಯಾಂಕ್ ಸೃಷ್ಟಿಸುವ ಹುನ್ನಾರ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಪಾದಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಮತಾಂತರ ತಡೆ ಕಾಯ್ದೆ ತರಲು ಬಿಜೆಪಿ ಉದ್ದೇಶಿಸಿರುವುದು ಕೇವಲ ವೋಟ್‌ಬ್ಯಾಂಕ್ ಸೃಷ್ಟಿಗಾಗಿ. ಬಿಜೆಪಿ ಕ್ರಿಶ್ಚಿಯನ್ ಸಮುದಾಯವನ್ನು ಗುರಿ ಮಾಡಿದೆ. ಭಾರತದ ಸಂವಿಧಾನ ಬಲವಂತದ ಮತಾಂತರವನ್ನು ನಿಷೇಧಿಸಿದೆ ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲು ಅವಕಾಶ ನೀಡಿದೆ. ಹಾಗಿದ್ದ ಮೇಲೆ ಹೊಸ ಕಾನೂನಿನ ಅಗತ್ಯ ಏನು ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ರಾಜ್ಯ ಶೀಘ್ರವೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಿದೆ. ಈಗಾಗಲೇ ಇತರ ರಾಜ್ಯಗಳು ಜಾರಿಗೆ ತಂದಿರುವ ಇಂಥ ಕಾನೂನುಗಳನ್ನು ಅಧ್ಯಯನ ಮಾಡಲಾಗುತ್ತಿದೆ" ಎಂದು ಹೇಳಿದ್ದರು.

ಜೆಡಿಎಸ್ ಮುಖ್ಯಸ್ಥ ಎಚ್.ಡಿ.ದೇವೇಗೌಡ ಅಥವಾ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಯಾವುದೇ ವೈಯಕ್ತಿಕ ವಿರೋಧ ಇಲ್ಲ; ಆದರೆ ಅವರು ರಾಜಕೀಯ ವಿರೋಧಿಗಳು ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು ದೇವೇಗೌಡ ಕುಟುಂಬವನ್ನು ಗುರಿ ಮಾಡಿದ್ದರೆ ಎಂದು ಸರಣಿ ಟ್ವೀಟ್‌ನಲ್ಲಿ ಕುಮಾರಸ್ವಾಮಿ ಆಪಾದಿಸಿದ್ದರು.

ಕುಮಾರಸ್ವಾಮಿ ತಮ್ಮ ಪಕ್ಷ ಜಾತ್ಯತೀತ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಾಗಾದರೆ ಬಿಜೆಪಿ ಜತೆ ಸೇರಿ ಸರ್ಕಾರ ನಡೆಸಿದ್ದೇಕೆ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News